23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಮಲೆಬೆಟ್ಟು ಹಾಲು ಉತ್ಪಾದಕರ ಸಂಘದ ಹಳೆಯ ಆಡಳಿತ ಮಂಡಳಿ ರದ್ದು, ನೂತನ ವಿಶೇಷಾಧಿಕಾರಿಯಾಗಿ ಯಮುನ ನೇಮಕ

ಬೆಳ್ತಂಗಡಿ: ಕಳೆದ ಕೆಲವು ತಿಂಗಳುಗಳಿಂದ ಮಲೆಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆಯುತ್ತಿದ್ದ ಜಟಾಪಟಿಗೆ ಕೊನೆಗೂ ಮುಕ್ತಿ ಸಿಕ್ಕಿದ್ದು, ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪುತ್ತೂರು ವಿಭಾಗ ಇವರು ಮಲೆಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘ ನಿ. ಬೆಳ್ತಂಗಡಿ ತಾಲೂಕು ಇದರ ಆಡಳಿತ ಮಂಡಳಿಯನ್ನು ರದ್ದುಪಡಿಸಿ, ವಿಶೇಷಾಧಿಕಾರಿಯಾಗಿ ಶ್ರೀಮತಿ ಯಮುನಾ ರವರನ್ನು ನೇಮಿಸಿ ಆದೇಶವನ್ನು ಹೊರಡಿಸಿದ್ದಾರೆ.

ಸಂಘದಲ್ಲಿ ಅವ್ಯವಹಾರ ನಡೆಯುತ್ತಿರುವ ಬಗ್ಗೆ ಸದಸ್ಯರು ಮತ್ತು ಆಡಳಿತ ಮಂಡಳಿಯ ಕೆಲ ನಿರ್ದೇಶಕರುಗಳಿಂದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ 70ಕ್ಕೂ ಹೆಚ್ಚು ಸದಸ್ಯರು 2023ರ ನವೆಂಬರ್ 29 ರಂದು ಸಂಘದ ಕಛೇರಿ ಎದುರು ಪ್ರತಿಭಟನೆಯನ್ನು ನಡೆಸಿದ್ದು, ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿದ್ದರು. ಸಂಘದ ಸದಸ್ಯರ ಒತ್ತಡಕ್ಕೆ ಮಣಿದ ಅಧ್ಯಕ್ಷ, ಉಪಾಧ್ಯಕ್ಷರು ಸೇರಿ ಎಲ್ಲಾ 13 ಮಂದಿ ನಿರ್ದೇಶಕರು ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಂಘದ ವಿಸ್ತರಣಾಧಿಕಾರಿ ರಾಜೇಶ್ ಕಾಮತ್ ಅವರ ಸಮ್ಮುಖದಲ್ಲಿ ಸಾಮೂಹಿಕ ರಾಜಿನಾಮೆಯನ್ನು ನೀಡಿದ್ದರು. ಆ ಬಳಿಕದ ಬೆಳವಣಿಗೆಯಲ್ಲಿ ಅಧ್ಯಕ್ಷರು ಮತ್ತು ಕೆಲ ಸದಸ್ಯರು ನಾವು ರಾಜೀನಾಮೆಯನ್ನು ನೀಡಿಲ್ಲ ಎಂಬುದಾಗಿ ಪತ್ರಿಕಾಗೋಷ್ಠಿಯನ್ನು ಕೂಡಾ ನಡೆಸಿದ್ದು, ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟಿರಲಿಲ್ಲ.

ಮಲೆಬೆಟ್ಟು ಹಾಲು ಉತ್ಪಾದಕರ ಸಂಘದಲ್ಲಿ ಒಟ್ಟು 120 ಜನ ಸದಸ್ಯರಿದ್ದು, ದಿನಕ್ಕೆ 920 ಲೀಟರ್ ಹಾಲು ಸಂಗ್ರಹಣೆ ಆಗುತ್ತಿದ್ದು, ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಮತ್ತು ಸಂಘದ ಸದಸ್ಯರ ಕಿತ್ತಾಟದಿಂದ ಡಿಸೆಂಬರ್ 2023 ರಿಂದ 2024 ನೇ ಮಾ.14ರ ವರೆಗೆ ಆಡಳಿತ ಮಂಡಳಿಯ ಸಭೆ ನಡೆದಿರುವುದಿಲ್ಲ. ಸಂಘದ ಕಾರ್ಯದರ್ಶಿಯವರು ತಮ್ಮ ಹುದ್ದೆಗೆ ರಾಜಿನಾಮೆಯನ್ನು ನೀಡಿದ್ದು, ಸಂಘದಲ್ಲಿ ಹಾಲು ಶೇಖರಣೆ ಮತ್ತು ಹಣ ಬಟವಾಡೆಗೆ ಸಮಸ್ಯೆಯಾಗಿದ್ದು, ಒಕ್ಕೂಟದ ಯೋಜನೆಗಳನ್ನು ಸದಸ್ಯರಿಗೆ ತಲುಪಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಬಗ್ಗೆ ವಿವರಣೆಯನ್ನು ನೀಡುವಂತೆ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರಿಗೆ ಪತ್ರವನ್ನು ಬರೆದಿದ್ದರೂ ಅವರಿಂದ ಸರಿಯಾದ ಸ್ಪಷ್ಟೀಕರಣ ಬರದಿರುವ ಕಾರಣ ಸಂಘದ ದೈನಂದಿನ ಕಾರ್ಯಚಟುವಟಿಕೆಯನ್ನು ನಡೆಸಲು ಅನುಕೂಲವಾಗುವಂತೆ ಆಡಳಿತ ಮಂಡಳಿಯ ಸ್ಥಾನದಲ್ಲಿ ವಿಶೇಷಾಧಿಕಾರಿಯನ್ನು ನೇಮಿಸುವಂತೆ ದ.ಕ ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕರು ಆದೇಶವನ್ನು ಹೊರಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪುತ್ತೂರು ವಿಭಾಗ ಇವರು ಮಲೆಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘ ನಿ. ಬೆಳ್ತಂಗಡಿ ತಾಲೂಕು ಇದರ ಆಡಳಿತ ಮಂಡಳಿಯನ್ನು ರದ್ದುಪಡಿಸಿ, ಶ್ರೀಮತಿ ಯಮುನಾ, ವಿಸ್ತರಣಾಧಿಕಾರಿ, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ. ಬೆಳ್ತಂಗಡಿ ಕ್ಯಾಂಪ್, ಬೆಳ್ತಂಗಡಿ ತಾಲೂಕು ಇವರನ್ನು ವಿಶೇಷಾಧಿಕಾರಿಯಾಗಿ ಸಂಘದ ದೈನಂದಿನ ಕಾರ್ಯಚಟುವಟಿಕೆಯನ್ನು ಸರಿಯಾಗಿ ನಿರ್ವಹಿಸಲು ಹಾಗೂ ಸಂಘದ ಸದಸ್ಯರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕೆಲಸ ನಿರ್ವಹಿಸಲು 3 ತಿಂಗಳ ಅವಧಿಗೆ ನೇಮಕಾತಿ ಮಾಡಿ ಆದೇಶ ಹೊರಡಿಸಿದ್ದಾರೆ. 3 ತಿಂಗಳ ಬಳಿಕ ಸಂಘಕ್ಕೆ ಚುನಾವಣೆಯನ್ನು ನಡೆಸಿ ನೂತನ ಆಡಳಿತ ಮಂಡಳಿಯನ್ನು ರಚಿಸಲು ಸೂಚಿಸಲಾಗಿದೆ.

Related posts

ಕಾರಿಂಜ ಶ್ರೀ ವನಶಾಸ್ತಾರ ಮತ್ತು ವೀರಭದ್ರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಉಗ್ರಾಣ , ಕಾರ್ಯಾಲಯ ಹಾಗೂ ಭಜನಾ ಕಾರ್ಯಕ್ರಮ ಉದ್ಘಾಟನೆ

Suddi Udaya

ಕನ್ಯಾಡಿ-2 ಸ.ಉ.ಹಿ. ಪ್ರಾಥಮಿಕ ಶಾಲೆಯಲ್ಲಿ “ರಾಷ್ಟ್ರೀಯ ಬಾಹ್ಯಾಕಾಶ ದಿನ”

Suddi Udaya

ಉಜಿರೆ: ಶ್ರೀ. ಧ. ಮಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ರಾಷ್ಟ್ರೀಯ ಸುಪೋಷಣಾ ಮಾಸಾಚರಣೆ

Suddi Udaya

ಬಂದಾರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಕಾರ್ಯ

Suddi Udaya

ಕಳಿಯ ಗ್ರಾ.ಪಂ. ನ ವಾರ್ಡ್ ಸಭೆ

Suddi Udaya

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಸ್ತ್ರೀ ಶಕ್ತಿ ಸಂವರ್ಧನಾ ತರಬೇತಿ

Suddi Udaya
error: Content is protected !!