ಬೆಳ್ತಂಗಡಿ: ಇತ್ತಿಚೀನ ದಿನಗಳಲ್ಲಿ ಕಾಡಾನೆಗಳ ನಿರಂತರ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಆನೆ ಕಂದಕ, ಸೋಲಾರ್ ಬೇಲಿ, ಕಾಂಕ್ರೀಟ್ ಬ್ಯಾರಿಕೇಡ್ ಸೇರಿದಂತೆ ಹಲವಾರು ಪ್ರಯೋಗಗಳನ್ನು ಮಾಡಿದರೂ, ಕಾಡಾನೆಗಳು ನಾಡಿಗೆ ಬಂದು ರೈತರ ಕೃಷಿಯನ್ನು ನಾಶ ಮಾಡುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ, ಈ ಹಿನ್ನಲೆಯಲ್ಲಿ ಹೇಗಾದರೂ ಮಾಡಿ ಆನೆಗಳನ್ನು ತಡೆಯಬೇಕೆಂಬ ನಿಟ್ಟಿನಲ್ಲಿ ಇದೀಗ ಅರಣ್ಯ ಇಲಾಖೆಯು ಜೋತಾಡುವ ಸೌರ ಬೇಲಿಯ ಅನುಷ್ಠಾನಕ್ಕೆ ಮುಂದಾಗಿದೆ.
ದ.ಕ. ಜಿಲ್ಲೆಯ ಚಾರ್ಮಾಡಿ, ಮುಂಡಾಜೆ, ನೆರಿಯ, ಕಡಿರುದ್ಯಾವರ, ಶಿಶಿಲ, ಶಿಬಾಜೆ, ಶಿರಾಡಿ ಹಾಗೂ ಕೊಡಗು, ಚಿಕ್ಕಮಗಳೂರು, ಸಕಲೇಶಪುರ ಗಡಿಭಾಗದಲ್ಲಿ ಕಾಡಾನೆ ಉಪಟಳ ಮಿತಿ ಮೀರಿದೆ. ಕೃಷಿಯ ಜತೆಗೆ ಅನೇಕ ಜೀವಹಾನಿಯೂ ಸಂಭವಿಸಿದೆ. ಈಗಾಗಲೇ ಇದನ್ನು ತಡೆಯಲು ಅರಣ್ಯ ಇಲಾಖೆಯು ಜೋತಾಡುವ ಸೌರ ಬೇಲಿಯನ್ನು ಚಿಕ್ಕಮಗಳೂರಿನ ಮೂಡಿಗೆರೆ ಹಾಗೂ ಶಿರಾಡಿ ಘಾಟಿ ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿದ್ದು, ಪರಿಣಾಮಕಾರಿ ಎನಿಸಿರುವುದರಿಂದ ದ.ಕ. ಜಿಲ್ಲೆಯಲ್ಲಿ ಪ್ರಯೋಗವಾಗಿ ಬೆಳ್ತಂಗಡಿ ಹಾಗೂ ಸುಬ್ರಹ್ಮಣ್ಯದಲ್ಲಿ ಅನುಷ್ಠಾನಗೊಳಿಸಿದೆ ಎಂದು ವರದಿಯಾಗಿದೆ.
ಜೋತಾಡುವ ಬೇಲಿ ಹೇಗಿರುತ್ತದೆ: ನೇತಾಡುವ ಸೋಲಾರ್ ಬೇಲಿಯು ಸುಮಾರು 14 ಅಡಿ ಎತ್ತರವಿದೆ. ಒಂದು ಕಂಬದಿಂದ ಇನ್ನೊಂದು ಕಂಬಕ್ಕೆ ೮೦ ಅಡಿ ದೂರ. ಕಂಬದ ಮೇಲ್ಬಾಗದಿಂದ ವಿದ್ಯುತ್ ತಂತಿಯಂತೆ ಎರಡೂ ಬದಿ ತಂತಿ ಹಾದು ಹೋಗುತ್ತದೆ. ಆ ತಂತಿಗೆ ಎರಡು ಬದಿಯಲ್ಲಿ ನೆಲದವರೆಗೆ ತಂತಿಯನ್ನು ಇಳಿಯಬಿಟ್ಟು ಸುಮಾರು 9 ವೋಲ್ಟ್ ಸೌರವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ.
ತಂತಿ ಅಳವಡಿಕೆಗೆ ಕಂಬವನ್ನು ಕಾಂಕ್ರೀಟ್ ಅಡಿಪಾಯದಿಂದ ನಿರ್ಮಿಸುವುದರಿಂದ ಬಲಿಷ್ಠ ಹಾಗೂ ಸುದೀರ್ಘ ಬಾಳಿಕೆ ಬರುತ್ತದೆ. ಸೋಲಾರ್ ಪವರ್ ಜನರೇಟರನ್ನು ಪ್ರತ್ಯೇಕವಾಗಿ ಅಳವಡಿಸಲಾಗುತ್ತದೆ. ತಂತಿಯ ಸ್ಪರ್ಶವಾದಾಗ ಲಘು ವಿದ್ಯುತ್ ಆಘಾತವಾಗುವುದರಿಂದ ಆನೆಗಳು ಮತ್ತೊಮ್ಮೆ ಆ ದಾರಿಯಲ್ಲಿ ಬರಲು ಹಿಂಜರಿಯುತ್ತವೆ. ಈ ವಿದ್ಯುತ್‌ನಿಂದ ಆನೆಗಳ ಜೀವಕ್ಕೆ ಅಪಾಯವಿಲ್ಲ. ಅವುಗಳ ಚಲನವಲನ ದಾಖಲಿಸಲು ಸಿಸಿ ಕೆಮರಾವನ್ನೂ ಅಳವಡಿಸಲಾಗಿದೆ. ಆನೆ ಬಂದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂದೇಶವೂ ರವಾನೆಯಾಗುತ್ತದೆ.