23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ: ಪೌರ ಕಾರ್ಮಿಕರ ದ.ಕ ಜಿಲ್ಲಾ ಮಟ್ಟದ ಜಂಟಿ ಸಮಾವೇಶ

ಬೆಳ್ತಂಗಡಿ: ಜಿಲ್ಲೆಯಾದ್ಯಂತ ಪಟ್ಟಣ , ನಗರ , ಪಂಚಾಯತ್ , ಪುರಸಭೆ , ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಚತಾ ಕಾರ್ಯ ನಡೆಸುವ ಪೌರ ಕಾರ್ಮಿಕರನ್ನು ಜೀತದಾಳುಗಳಂತೆ ದುಡಿಸಲಾಗುತ್ತಿದ್ದು , ಸಂವಿಧಾನಬದ್ಧ ಹಕ್ಕುಗಳನ್ನು ನಿರಾಕರಿಸಿ , ಕಾನೂನುಬದ್ಧ ಸವಲತ್ತುಗಳನ್ನು ನಿರಾಕರಿಸಿ, ಪೌರ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ವಿರುದ್ಧ ಸಂಘಟಿತ ಹೋರಾಟ ಅಗತ್ಯವಿದೆ ಎಂದು ಪೌರ ಕಾರ್ಮಿಕರ ಸಂಘದ ದ.ಕ ಜಿಲ್ಲಾಧ್ಯಕ್ಷ ಅನಿಲ್ ಕಂಕನಾಡಿ ಕರೆ ನೀಡಿದರು.

ಅವರು ಫೆ.15 ರಂದು ಬೆಳ್ತಂಗಡಿ ನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಪಟ್ಟಣ / ಗ್ರಾಮ ಪಂಚಾಯತ್ ಪೌರ ಕಾರ್ಮಿಕರ ದ.ಕ ಜಿಲ್ಲಾ ಮಟ್ಟದ ಜಂಟಿ ಸಮಾವೇಶವನ್ನು ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲೇ ಪ್ರಥಮ ಬಾರಿಗೆ ಬೆಳ್ತಂಗಡಿಯಲ್ಲಿ ಪಟ್ಟಣ , ನಗರ ಪಂಚಾಯತ್ , ಪುರಸಭೆ ಮತ್ತು ಗ್ರಾಮ ಪಂಚಾಯತ್ ಪೌರ ಕಾರ್ಮಿಕರ ದ.ಕ ಜಿಲ್ಲಾ ಮಟ್ಟದ ಜಂಟಿ ಸಮಾವೇಶ ನಡೆದಿದೆ‌. ಮುಂದಿನ ದಿನಗಳಲ್ಲಿ ಇಡೀ ರಾಜ್ಯದಾದ್ಯಂತ ಸಂಘಟನೆ ವಿಸ್ತರಿಸಲಾಗುವುದು ಎಂದು ಅವರು ಗ್ರಾಮೀಣ ಪ್ರದೇಶಗಳಲ್ಲಿ ಪೌರ ಕಾರ್ಮಿಕರಿಗೆ ಬದುಕುವ ಕನಿಷ್ಟ ವೇತನ ನೀಡದೆ ಜೀತದಾಳುಗಳಂತೆ ದುಡಿಸಲಾಗುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದ ಅವರು ಕಾರ್ಮಿಕ ಕಾಯ್ದೆಗಳನ್ನು ಉಲ್ಲಂಘಿಸಿ ಕನಿಷ್ಠ ವೇತನ ನೀಡದೆ ದುಡಿಸುತ್ತಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ ಮತ್ತು ಅಪರಾಧವಾಗಿದೆ. ಪೌರ ಹಕ್ಕುಗಳ ರಕ್ಷಣೆಗಾಗಿ ಸಂಘಟನೆಯನ್ನು ಬಲಿಷ್ಠಗೊಳಿಸಿ , ಹೋರಾಟ ನಡೆಸಬೇಕಾದ ಅಗತ್ಯವಿದೆ. ಹೋರಾಟದಲ್ಲಿ ಸೋಲು ಎಂಬುದಿಲ್ಲ , ಅಂತಿಮವಾಗಿ ಗೆಲುವು ನಮ್ಮದೇ ಎಂಬುದನ್ನು ನಾವು ತೋರಿಸುವ ಅಗತ್ಯವಿದೆ ಎಂದರು.

ಪೌರ ಕಾರ್ಮಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಪಿ ಆನಂದ್ ಮಾತನಾಡಿ ಪೌರ ಕಾರ್ಮಿಕರ ಶ್ರಮದ ಪ್ರತಿಫಲ ಸಂಜೀವಿನಿ ಒಕ್ಕೂಟ ಮತ್ತು ಅಧಿಕಾರಿಗಳ ಪಾಲಗುತ್ತಿರುವುದು ದುರಂತ. ಸ್ವಚ್ಚತಾ ಕಾರ್ಯಕ್ಕೆ ಸಂಬಂಧಿಸಿದ ಪ್ರಶಸ್ತಿ , ಗೌರವಗಳು ಪೌರ ಕಾರ್ಮಿಕರಿಗೆ ಸಲ್ಲಬೇಕೇ ಹೊರತು ಅಧಿಕಾರಿ , ಜನಪ್ರತಿನಿಧಿಗಳಿಗಲ್ಲ ಎಂದರು. ಮಹಿಳೆ , ಪುರುಷರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದ ಅವರು ಗ್ರಾಮೀಣ ಪ್ರದೇಶಗಳಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರನ್ನು ತಕ್ಷಣ ಖಾಯಂಗೊಳಿಸಲು ಒತ್ತಾಯಿಸಿದ ಅವರು ಕಾರ್ಮಿಕ ಕಾನೂನಿನನ್ವಯ ಪೌರ ಕಾರ್ಮಿಕರಿಗೆ ಕನಿಷ್ಠ ಕೂಲಿ ಜಾರಿಯಾಗಲಿ ಎಂದರು.

ದ.ಕ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರು ತಮ್ಮ ವ್ಯಾಪ್ತಿಯ ಸಮಸ್ಯೆಗಳನ್ನು ಸಭೆಯ ಮುಂದಿಟ್ಟರು. ಸಂಜೀವಿನಿ ಒಕ್ಕೂಟ ಬೇಡ , ನೇರ ಪಾವತಿಯಾಗಬೇಕು. ಅಧಿಕಾರಿಗಳು , ಜನಪ್ರತಿನಿಧಿಗಳು ನಡೆಸುವ ದೌರ್ಜನ್ಯಗಳು , ಕಡಿಮೆ ವೇತನ , ವೇತನ ತಾರತಮ್ಯ , ವಾರದಲ್ಲಿ 2-3 ದಿನ ಕೆಲಸ , ಕಾನೂನುಬದ್ಧ ಸವಲತ್ತುಗಳ ನಿರಾಕರಣೆ ಮೊದಲಾದ ಸಮಸ್ಯೆಗಳ ಬಗ್ಗೆ ಮಾತನಾಡಿದರು.

ಸಪಾಯಿ ಕರ್ಮಾಚಾರಿ ನಿಗಮದ ದ.ಕ ಜಿಲ್ಲಾಧ್ಯಕ್ಷ ಪ್ರೇಮ್ ಬಲ್ಲಾಳ್ ಬಾಗ್ ಮಾತನಾಡಿ ತಮ್ಮ ಹಕ್ಕುಗಳ ರಕ್ಷಣೆಗಾಗಿ ಮತ್ತು ಸಂವಿಧಾನಬದ್ಧ ಮೂಲಭೂತ ಸೌಕರ್ಯಗಳನ್ನು ಪಡೆಯಲು ಮತ್ತು ಗೌರವ ಮತ್ತು ಘನತೆಯ ಬದುಕಿನ ಹಕ್ಕಿಗಾಗಿ ಸಂಘಟನೆಯ ಅಗತ್ಯವಿದೆ ಎಂದರು.

ವೇದಿಕೆಯಲ್ಲಿ ಸ್ವಚ್ಚತಾ ವಾಹನ ಚಾಲಕ ಸಂಘದ ಜಿಲ್ಲಾಧ್ಯಕ್ಷ ವರುಣ್ , ಪೌರ ಕಾರ್ಮಿಕ ಸಂಘದ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಚಂದ್ರ ಬೋವಿ , ಜತೆ ಕಾರ್ಯದರ್ಶಿ ಸುರೇಶ್ ಕೆ ಅರಳಿ , ಗ್ರಾಮ ಪಂಚಾಯತ್ ಸ್ವಚ್ಚತಾ ಕಾರ್ಮಿಕರ ಸಂಘದ ಅಧ್ಯಕ್ಷೆ ರೇಣುಕಾ ಕುಕ್ಕೇಡಿ , ಕಾರ್ಯದರ್ಶಿ ಸುಮತಿ ವೇಣೂರು ಉಪಸ್ಥಿತರಿದ್ದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಸುದೆಮುಗೇರು ಮಾತನಾಡಿ ನಾವೆಲ್ಲರೂ ಸ್ವಚ್ಚತಾ ರಾಯಭಾರಿಗಳು. ನಮ್ಮೆಲ್ಲರ ಪರಿಶ್ರಮದಿಂದ ನಾಗರಿಕ ಸಮಾಜವಿಂದು ಸ್ವಚ್ಚವಾಗಿದೆ. ಆದರೆ ಪೌರ ಕಾರ್ಮಿಕರನ್ನು ಮಾತ್ರ ನಮ್ಮನಾಳುವ ಸರ್ಕಾರಗಳು ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಸಂವಿಧಾನಬದ್ಧ ಹಕ್ಕುಗಳಿಗಾಗಿ ಹಾಗೂ ನಮ್ಮ ಮೇಲೆ ನಡೆಯುವ ವಿವಿಧ ರೀತಿಯ ದಬ್ಬಾಳಿಕೆಯ ವಿರುದ್ಧ ಸಂಘಟಿತರಾಗಬೇಕಾದ ಅಗತ್ಯವಿದೆ ಎಂದರು.

ಬೆಳ್ತಂಗಡಿ ಪಟ್ಟಣ ಪಂಚಾಯತ್ ಸ್ವಚ್ಚತಾ ವಾಹನದ ಚಾಲಕ ಶಿವಕುಮಾರ್ ಸ್ವಾಗತಿಸಿ ಶಿಕ್ಷಕ, ಕಲಾವಿದ ಪ್ರಶಾಂತ್ ಬೆಳ್ತಂಗಡಿ ಕಾರ್ಯಕ್ರಮ ನಿರೂಪಿಸಿ , ಧನ್ಯವಾದವಿತ್ತರು.

Related posts

ಕಲ್ಮಂಜ : ಸಿದ್ದಬೈಲು ಪರಾರಿ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಗುರುವಾಯನಕೆರೆಯಲ್ಲಿ “ಆರ್ವಿಕ್” ಜ್ಯುವೆಲ್ಲರ್ಸ್ & ವರ್ಕ್ಸ್ ಶುಭಾರಂಭ

Suddi Udaya

ವಾಣಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

Suddi Udaya

ಬಡಕೋಡಿ ಸ. ಹಿ. ಪ್ರಾ. ಶಾಲೆಯಲ್ಲಿ ಉಚಿತ ನೋಟ್ ಪುಸ್ತಕ ವಿತರಣೆ

Suddi Udaya

ಧರ್ಮಸ್ಥಳ ಎಸ್.ಡಿ.ಎಂ ಅನುದಾನಿತ ಪ್ರೌಢಶಾಲೆಯಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆ

Suddi Udaya

ಶಿರ್ಲಾಲು ಗ್ರಾ.ಪಂ. ನಲ್ಲಿ ವಿಶೇಷಚೇತನರ ಸಮನ್ವಯ ಗ್ರಾಮ ಸಭೆ

Suddi Udaya
error: Content is protected !!