25.5 C
ಪುತ್ತೂರು, ಬೆಳ್ತಂಗಡಿ
April 24, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಸ್.ಡಿ.ಎಂ ಸ್ವಾಯತ್ತ ಕಾಲೇಜು : ವಾರ್ಷಿಕ ಕ್ರೀಡಾಕೂಟ

ವಿದ್ಯಾರ್ಥಿಗಳಲ್ಲಿನ ಆಸಕ್ತಿ ಮತ್ತು ಪ್ರಯತ್ನವೇ ಕ್ರೀಡಾ ಸಾಧನೆಗೆ ಸ್ಪೂರ್ತಿ : ಜೋಸೆಫ್ ಪಿ ಎಸ್

ಉಜಿರೆ : ಕ್ರೀಡೆಯೂ ಪ್ರತಿಯೊಬ್ಬರ ಬದುಕಿನಲ್ಲಿ ಶಿಸ್ತು ಮತ್ತು ಸಂಯಮವನ್ನು ರೂಪಿಸುತ್ತದೆ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲೂ ಸಕ್ರೀಯವಾಗಿ ತೊಡಗಿಕೊಳ್ಳಬೇಕು. ಪ್ರತಿಭೆಗೆ ಯಾವುದೇ ವಯಸ್ಸಿನ ಮಿತಿಯಿಲ್ಲ. ವಿವಿಧ ಆಟೋಟ ಸ್ಪರ್ಧೆಗಳು ಆಸಕ್ತಿ ಮತ್ತು ಯಶಸಿನ ಕಡೆಗಿನ ಪ್ರಯತ್ನವೇ ಕ್ರೀಡಾ ಸಾಧನೆಗೆ ಸ್ಪೂರ್ತಿ. ಎಂದು ಎಸ್.ಡಿ.ಎಂ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಹಾಗೂ ಬೆಳ್ತಂಗಡಿ ತಾಲೂಕು ಹಿಂದುಳಿದ ವರ್ಗಗಳ ಇಲಾಖೆಯ ಕ್ಷೇಮ ಪಾಲನಾಧಿಕಾರಿ ಜೋಸೆಫ್ ಪಿ.ಎಸ್. ಅಭಿಪ್ರಾಯ ಪಟ್ಟರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ವತಿಯಿಂದ ಪದವಿ ಮತ್ತು ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳಿಗೆ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಗೆ ವ್ಯಕ್ತಿತ್ವ ಮತ್ತು ಬದುಕನ್ನು ಕಟ್ಟಿಕೊಡುವ ಶಕ್ತಿ ಇದೆ. ಸೋಲು ಗೆಲುವುಗಳನ್ನು ಸಮಾನಾಂತರವಾಗಿ ಕಾಣುತ್ತಾ ಕ್ರೀಡೆಯನ್ನು ಸದಾ ಅನುಭವಿಸಬೇಕು. ಸ್ಪಷ್ಟ ಗುರಿಯೊಂದಿಗೆ ಕ್ರೀಡಾ ಜೀವನವನ್ನು ಮುಂದುವರಿಸಬೇಕು. ಇದೇ ಸಂದರ್ಭದಲ್ಲಿ ತಮ್ಮ ವಿದ್ಯಾರ್ಥಿ ಜೀವನದ ಕ್ರೀಡಾ ದಿನಗಳನ್ನು ನೆನಪಿಸಿಕೊಂಡು ಇಂದಿನ ನನ್ನೆಲ್ಲಾ ಕ್ರೀಡಾ ಸಾಧನೆ ಮತ್ತು ಬದುಕಿನ ಶಿಸ್ತಿಗೆ ಈ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಹಾಗು ರತ್ನವರ್ಮ ಕ್ರೀಡಾಂಗಣವೇ ಕಾರಣ ಎಂದು ಸ್ಮರಿಸಿಕೊಂಡರು. ಬಹು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ ಸಮೂಹ ಕ್ರೀಡಾಂಗಣದಲ್ಲಿ ಸೇರಿದ್ದನ್ನು ಕಂಡು ಮೆಚ್ಚುಗೆಯನ್ನು ‌ವ್ಯಕ್ತಪಡಿಸಿದರು.

ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ ಮಾತನಾಡಿ, ಕ್ರೀಡೆ ಮಾನಸಿಕ ಮತ್ತು ದೈಹಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ. ಇದು ಕೇವಲ ಪದಕ ಮತ್ತು ಪ್ರಶಸ್ತಿಗಳಿಗೆ ಮಾತ್ರ ಸೀಮಿತವಾಗದೆ ಉತ್ತಮ ಆರೋಗ್ಯಕ್ಕಾಗಿ, ಸದೃಢ ಸಮಾಜಕ್ಕಾಗಿ ಮತ್ತು ಯುವ ಸಮುದಾಯದ ಚೈತನ್ಯಕ್ಕಾಗಿ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯೂ ಪಠ್ಯದ ಜೊತೆಗೆ ಕ್ರೀಡೆಗೂ ಹೆಚ್ಚಿನ ಆದ್ಯತೆಯನ್ನು ನೀಡಿ ವಿಶಾಲ ಕ್ರೀಡಾಂಗಣ, ನುರಿತ ತರಬೇತುದಾರರು, ಅತ್ಯಾಧುನಿಕ ಜಿಮ್ ವ್ಯವಸ್ಥೆ, ಸುಸಜ್ಜಿತ ಈಜುಕೊಳ ಇತ್ಯಾದಿ ಸವಲತ್ತುಗಳನ್ನು ಹೊದಗಿಸಿಕೊಟ್ಟಿದೆ. ಇವೆಲ್ಲವೂ ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾಗಿದ್ದು, ಮುಂದೆ ಎಸ್.ಡಿ.ಎಂ ಸಂಸ್ಥೆಯ ವತಿಯಿಂದ ನೂತನವಾದ ಸಿಂಥೆಟಿಕ್ ಕ್ರೀಡಾಂಗಣ ಮತ್ತು ನೂತನವಾದ ವಿದ್ಯಾರ್ಥಿ ವಸತಿ ನಿಲಯದ ಕಟ್ಟಡದ ನಿರ್ಮಾಣ ಮೂಡಿಬರಲಿದೆ ಎಂದರು.

ಇದೇ ಸಂದರ್ಭದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಮತ್ತು ಎಸ್.ಡಿ.ಎಂ ಕ್ರೀಡಾ ಸಂಘದ ವತಿಯಿಂದ ಅತಿಥಿಗಳಾಗಿದ್ದ ಬೆಳ್ತಂಗಡಿ ತಾಲೂಕು ಹಿಂದುಳಿದ ವರ್ಗಗಳ ಇಲಾಖೆಯ ಕ್ಷೇಮ ಪಾಲನಾಧಿಕಾರಿ ಜೋಸೆಫ್ ಪಿ.ಎಸ್. ಇವರನ್ನು ಎಸ್.ಡಿ.ಎಂ ಸ್ವಾಯತ್ತ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ ಗೌರವಿಸಿದರು.

ಇದೇ ಕ್ರೀಡಾ ಕೂಟದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಜೊತೆಗೆ ಪದವಿ ಕಾಲೇಜಿನ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ವಿಶೇಷವಾಗಿ ವಿದ್ಯಾರ್ಥಿ ಮತ್ತು ಮತ್ತು ಶಿಕ್ಷಕರ ತಂಡದ ನಡುವೆ ಕ್ರಿಕೇಟ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿತ್ತು.

ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ಉಪ ಪ್ರಾಂಶುಪಾಲರಾದ ನಂದ ಕುಮಾರಿ ಹಾಗು ಎಸ್.ಡಿ.ಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಉಪನ್ಯಾಸಕರು, ಸಿಬ್ಬಂದಿಗಳು ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕ ದೀಕ್ಷಿತ್ ರೈ ನಿರೂಪಿಸಿ, ವಂದಿಸಿದರು. ಕ್ರೀಡಾ ಕೂಟವನ್ನು ಪದವಿ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರಾದ ಶಾರದಾ, ಸುದೀನ್ ಪೂಜಾರಿ, ಸಂದೇಶ್ ಬಿ ಪೂಂಜ ಸಂಯೋಜಿಸಿ,ಸಂಸ್ಥೆಯ ವಿವಿಧ ವಿಭಾಗಗಳ ಇತರೆ ದೈಹಿಕ ಶಿಕ್ಷಣ ಉಪನ್ಯಾಸಕರು ಸಹಕರಿಸಿದರು.

42 ತಂಡಗಳಿಂದ ನಾನ ಸಂದೇಶಗಳ ಪಥಸಂಚಲನ :

ಕ್ರೀಡಾ ಕೂಟದಲ್ಲಿ ಕಾಲೇಜಿನ 42 ವಿಭಾಗಳಿಂದ ನಾನ ಧ್ಯೇಯ, ಸಂದೇಶಗಳ ಭಿತಿ ಫಲಕ ಮತ್ತು ಬಾವುಟವನ್ನು ಹಿಡಿದು ಅತಿಥಿ ಅಭ್ಯಾಗತರ ಸಮ್ಮುಖದಲ್ಲಿ ಪಥಸಂಚಲನ ಮಾಡಿದರು. ಬಳಿಕ ಎಸ್.ಡಿ.ಎಂ ಕ್ರೀಡಾ ಸಂಘದ ರಾಷ್ಟ ಮಟ್ಟದ ವಾಲಿಬಾಲ್ ಕ್ರೀಡಾಪಟು ಹರೀಣಾಕ್ಷಿ ಮತ್ತು ಸಂಗೀತ, ರಾಷ್ಟ್ರ ಮಟ್ಟದ ಅಥ್ಲೇಟಿಕ್ ಭೂಮಿಕಾ ಡಿ.ಸಿ ಮತ್ತು ನವ್ಯ ಶ್ರೀ , ರಾಷ್ಟ್ರ ಮಟ್ಟದ ವೈಟ್ ಲಿಫ್ಟರ್ ಸ್ವಪ್ನ ವೈ.ಟಿ , ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಟ್ಟದಲ್ಲಿ ನೆಟ್ ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಅಂತಾರಾಷ್ಟ್ರ ಮಟ್ಟದ ನೆಟ್ ಬಾಲ್ ತರಬೇತಿ ಶಿಬಿರದಲ್ಲಿ ಭಾಗವಹಿಸಿದ ಚಿಂತನ್ ಬಿ.ಸಿ ಮತ್ತು ಪುನೀತ್ ಕುಮಾರ್ ಸೇರಿದಂತೆ ರಾಷ್ಟ್ರ ಮಟ್ಟದ ನೆಟ್ ಬಾಲ್ ಆಟಗಾರ್ತಿ ವರ್ಷಿತಾ ಎಮ್ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಕಾಲೇಜಿನ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದವರೆಗೆ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಅತಿಥಿಗಳಿಗೆ ಹಸ್ತಾಂತರಿಸಿದರು. ರಾಷ್ಟ್ರ ಮಟ್ಟದ ನೆಟ್ ಬಾಲ್ ಕ್ರೀಡಾ ಪಟುಗಳಾದ ಸುರಕ್ಷಾ ಆಚಾರ್ಯ, ಪಲ್ಲವಿ, ಧನಶ್ರೀ ಎಚ್.ಆರ್ ಹಾಗು ರಾಷ್ಟ್ರ ಮಟ್ಟದ ಟೆನಿಸ್ ವಾಲಿಬಾಲ್ ಕ್ರೀಡಾಪಟು ರಕ್ಷಿತಾ ಎಮ್.ಯು ಕ್ರೀಡಾ ಧ್ವಜವನ್ನು ಹಿಡಿದರು. ಅತಿಥಿಗಳಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

“ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಾಗುತ್ತಿರುವ ಉಜಿರೆಯ ಎಸ್.ಡಿ.ಎಂ ಕ್ರೀಡಾ ಸಂಘ ಅನೇಕ ರಾಷ್ಟ್ರೀಯ ಕ್ರೀಡಾ ಪಟುಗಳನ್ನು ಈ ಸಮಾಜಕ್ಕೆ ನೀಡಿದೆ. ಇಲ್ಲಿನ ಆಡಳಿತ ಮಂಡಳಿ, ದೈಹಿಕ ಶಿಕ್ಷಣ ಉಪನ್ಯಾಸಕರ ವೃಂದ , ತರಬೇತಿ ಮತ್ತು ಕ್ರೀಡಾಂಗಣ, ಸುಸಜ್ಜಿ ಆಧುನಿಕ ವ್ಯವಸ್ಥೆಗಳು ಎಲ್ಲವೂ ವಿದ್ಯಾರ್ಥಿಗಳ ಕ್ರೀಡಾ ಬೆಳವಣಿಗೆಗೆ ಪೂರಕವಾಗಿದೆ. ವಿದ್ಯಾರ್ಥಿಗಳು ಈ ವ್ಯವಸ್ಥೆಗಳ ಲಾಭವನ್ನು ಪಡೆದು ಕ್ರೀಡಾ ಕ್ಷೇತ್ರದಲ್ಲಿ ಬೆಳಗಬೇಕು “
– ಜೋಸೆಫ್ ಪಿ.ಎಸ್
ತಾಲೂಕು ಹಿಂದುಳಿದ ವರ್ಗಗಳ ಕ್ಷೇಮ ಪಾಲನಾಧಿಕಾರಿ ಬೆಳ್ತಂಗಡಿ

Related posts

ದ.ಕ ಜಿಲ್ಲೆಯಲ್ಲಿ ಕಾಡಿದ ಕುಡಿಯುವ ನೀರಿನ ಸಮಸ್ಯೆ ಜಿಲ್ಲಾಡಳಿತ ಕೂಡಲೇ ಶಾಸಕರುಗಳ ಸಭೆ ಕರೆಯುವಂತೆ ಎಂಎಲ್‌ಸಿ ಪ್ರತಾಪಸಿಂಹ ನಾಯಕ್ ಆಗ್ರಹ

Suddi Udaya

ಜೂ5: ಸಿರಿಕನ್ನಡ ವಾಹಿನಿಯಲ್ಲಿ ‘ಸಖತ್ ಜೋಡಿ’ ರಿಯಾಲಿಟಿ ಶೋ ನಿರೂಪಕನಾಗಿ ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಕಾಪಿನಡ್ಕ

Suddi Udaya

ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ದೆಹಲಿಯಲ್ಲಿ ಭೇಟಿಯಾದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ

Suddi Udaya

ಬೆಳ್ತಂಗಡಿ ತಾಲೂಕಿನ ಎಲ್ಲಾ ಅಂಗನವಾಡಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ

Suddi Udaya

ನೀಟ್ ಫಲಿತಾಂಶದಲ್ಲಿ ರಾಷ್ಟ್ರಮಟ್ಟದಲ್ಲಿ ಅಮೋಘ ಸಾಧನೆ ಮಾಡಿದ ಪ್ರಜ್ವಲ್ ಹೆಚ್.ಎಂ. ಗೆ ಎಕ್ಸೆಲ್ ಕಾಲೇಜಿನ ವತಿಯಿಂದ ಭವ್ಯ ಮೆರವಣಿಗೆ ಮೂಲಕ ಗೌರರ್ವಾಪಣೆ

Suddi Udaya

ಮೈಸೂರಿನಲ್ಲಿ ಬಾಲಕಿಯರ ವಿಭಾಗದ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟ: ಜಿದ್ದಾಜಿದ್ದಿನ ಪಂದ್ಯಾವಳಿಯಲ್ಲಿ ಸತತ 9ನೇ ಬಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಬಂದಾರು ಶಾಲೆ

Suddi Udaya
error: Content is protected !!