23.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಜಮಲಾಬಾದ್ ಕೋಟೆಗೆ(ಗಡಾಯಿ ಕಲ್ಲು) ರೋಪ್‌ವೇ ನಿರ್ಮಾಣಕ್ಕೆ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರಿಗೆ ರಕ್ಷಿತ್ ಶಿವರಾಂ ಮನವಿ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಐತಿಹಾಸಿಕ ಜಮಲಾಬಾದ್ ಕೋಟೆ (ಗಡಾಯಿ ಕಲ್ಲು) ಪ್ರವಾಸಿ ತಾಣಕ್ಕೆ ರೋಪ್‌ವೇ ನಿರ್ಮಿಸುವಂತೆ ಕರ್ನಾಟಕ ಸರ್ಕಾರದ ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಮನವಿ ಸಲ್ಲಿಸಿದ್ದಾರೆ.

ಬ್ರಿಟಿಷರ ವಿರುದ್ಧ ಹೋರಾಟದ ಕಹಳೆ ಮೊಳಗಿಸಿದ ಟಿಪ್ಪು ಸುಲ್ತಾನ್ ನಿರ್ಮಿಸಿದ ಜಮಲಾಬಾದ್ ಕೋಟೆ ಐತಿಹಾಸಿಕ ಮಹತ್ವದ ಜೊತೆಗೆ ವಿಶಿಷ್ಟ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಪ್ರವಾಸಿ ತಾಣವಾಗಿದೆ. ಸಮುದ್ರಮಟ್ಟದಿಂದ ಸುಮಾರು 1,700 ಅಡಿ ಎತ್ತರದಲ್ಲಿರುವ ಕೋಟೆಯನ್ನು ತಲುಪಲು 1,800ಕ್ಕೂ ಅಧಿಕ ಮೆಟ್ಟಿಲುಗಳನ್ನು ಏರಬೇಕಾಗಿರುವುದರಿಂದ ಹಿರಿಯ ನಾಗರಿಕರು, ಮಕ್ಕಳು, ದಿವ್ಯಾಂಗರು ಹಾಗೂ ಆರೋಗ್ಯ ಸಮಸ್ಯೆ ಹೊಂದಿರುವ ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೋಪ್‌ವೇ ನಿರ್ಮಾಣ ಮಾಡಿದರೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಕೋಟೆಯನ್ನು ಸುಲಭವಾಗಿ ವೀಕ್ಷಿಸಲು ಸಾಧ್ಯವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ರೋಪ್‌ವೇ ನಿರ್ಮಾಣದಿಂದ ಜಮಲಾಬಾದ್ ಕೋಟೆಗೆ ರಾಜ್ಯ, ದೇಶ ಹಾಗೂ ವಿದೇಶಗಳಿಂದ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವುದರೊಂದಿಗೆ ಬೆಳ್ತಂಗಡಿ ತಾಲೂಕಿನ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಚೈತನ್ಯ ದೊರೆಯಲಿದೆ. ಸ್ಥಳೀಯ ಯುವಕರಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅವಕಾಶಗಳು ಸೃಷ್ಟಿಯಾಗಲಿದ್ದು, ಹೋಂಸ್ಟೇ, ಹೋಟೆಲ್, ಸಾರಿಗೆ, ಸ್ಥಳೀಯ ವ್ಯಾಪಾರ ಹಾಗೂ ಕೃಷಿ ಉತ್ಪನ್ನಗಳಿಗೂ ಹೆಚ್ಚಿನ ಮಾರುಕಟ್ಟೆ ದೊರೆಯಲಿದೆ ಎಂದು ರಕ್ಷಿತ್ ಶಿವರಾಂ ಅವರು ಅಭಿಪ್ರಾಯಪಟ್ಟಿದ್ದಾರೆ.

ಜಮಲಾಬಾದ್ ಕೋಟೆ ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪರಿಸರ ಸ್ನೇಹಿ ಹಾಗೂ ಸುಸ್ಥಿರ ತಂತ್ರಜ್ಞಾನವನ್ನು ಬಳಸಿಕೊಂಡು ರೋಪ್‌ವೇ ಯೋಜನೆಯನ್ನು ರೂಪಿಸಬೇಕು. ಈ ಯೋಜನೆ ಅನುಷ್ಠಾನಗೊಂಡಲ್ಲಿ ಜಮಲಾಬಾದ್ ಕೋಟೆಯನ್ನು ಕರ್ನಾಟಕದ ಪ್ರಮುಖ ಹೆರಿಟೇಜ್, ಸಾಹಸ ಮತ್ತು ಇಕೋ-ಟೂರಿಸಂ ತಾಣವಾಗಿ ಅಭಿವೃದ್ಧಿಪಡಿಸಲು ಸಾಧ್ಯವಾಗಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ರೋಪ್‌ವೇ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಕ್ಷಣ ಪ್ರಾಥಮಿಕ ಕಾರ್ಯಸಾಧ್ಯತಾ ಅಧ್ಯಯನ (Feasibility Study) ಕೈಗೊಳ್ಳಬೇಕು. ಪ್ರವಾಸೋದ್ಯಮ, ಅರಣ್ಯ ಹಾಗೂ ಪುರಾತತ್ವ ಇಲಾಖೆಗಳ ಸಮನ್ವಯದಲ್ಲಿ ಸಮಗ್ರ DPR ಸಿದ್ಧಪಡಿಸಿ, ರಾಜ್ಯ ಸರ್ಕಾರದ ವಿಶೇಷ ಯೋಜನೆ ಅಥವಾ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ರಕ್ಷಿತ್ ಶಿವರಾಂ ಅವರು ಮನವಿ ಮಾಡಿದ್ದಾರೆ.

ಇದರ ಜೊತೆಗೆ ಪ್ರವಾಸಿಗರ ಅನುಕೂಲಕ್ಕಾಗಿ ವಾಹನ ನಿಲುಗಡೆ, ಶೌಚಾಲಯ, ಕುಡಿಯುವ ನೀರು, ಮಾಹಿತಿ ಕೇಂದ್ರ, ಭದ್ರತಾ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವಂತೆಯೂ ಅವರು ಮನವಿ ಸಲ್ಲಿಸಿದ್ದಾರೆ.

“ಜಮಲಾಬಾದ್ ಕೋಟೆಗೆ ರೋಪ್‌ವೇ ನಿರ್ಮಾಣವು ಕೇವಲ ಪ್ರವಾಸೋದ್ಯಮ ಯೋಜನೆಯಲ್ಲ; ಇದು ಬೆಳ್ತಂಗಡಿ ತಾಲೂಕಿನ ಆರ್ಥಿಕ ಅಭಿವೃದ್ಧಿ, ಯುವಕರಿಗೆ ಉದ್ಯೋಗ ಸೃಷ್ಟಿ ಹಾಗೂ ಸ್ಥಳೀಯ ಜನರ ಜೀವನೋಪಾಯಕ್ಕೆ ಹೊಸ ಅವಕಾಶಗಳನ್ನು ಕಲ್ಪಿಸುವ ಮಹತ್ವದ ಯೋಜನೆಯಾಗಿದೆ. ಸರ್ಕಾರ ಈ ಯೋಜನೆಯನ್ನು ಆದ್ಯತೆಯ ಮೇರೆಗೆ ಪರಿಗಣಿಸಿ ಶೀಘ್ರ ಕ್ರಮ ಕೈಗೊಳ್ಳಬೇಕು” ಎಂದು ರಕ್ಷಿತ್ ಶಿವರಾಂ ಅವರು ಮನವಿ ಸಲ್ಲಿಸಿದರು .ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ಉಪಸ್ಥಿತರಿದ್ದರು.

Related posts

ಗುಂಡೂರಿ ಸ.ಕಿ.ಪ್ರಾ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಬೆಳ್ತಂಗಡಿ :ವಿಶೇಷ ವಿಮಾನದಲ್ಲಿ ಅಯೋಧ್ಯೆಗೆ ಪ್ರಯಾಣ ಬೆಳೆಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಮತ್ತು ರವಿಶಂಕರ್ ಗುರೂಜಿ

Suddi Udaya

ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೆಳ್ತಂಗಡಿ ಉಪ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ

Suddi Udaya

ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ಶಿಕ್ಷಕ-ಪೋಷಕರ ಸಭೆ

Suddi Udaya

ಬೆಳ್ತಂಗಡಿ ಕಚೇರಿಗೆ ಆಗಮಿಸಿದ ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಂತಿ

Suddi Udaya

ಕಣಿಯೂರು ಸ.ಉ.ಪ್ರಾ. ಶಾಲೆಯಲ್ಲಿ ಪೋಕ್ಸೋ ಕಾಯಿದೆಯ ಜಾಗೃತಿ ಅಭಿಯಾನ

Suddi Udaya
error: Content is protected !!