ಬೆಳ್ತಂಗಡಿ: ಸಮಾಜದಲ್ಲಿ ವಿಭಿನ್ನವಾಗಿ ಕಾಣುವವರೊಂದಿಗೆ ಸಹೋದರತ್ವ ಹಾಗೂ ಸಮಾನತೆಯ ಸಂದೇಶ ಸಾರುವ ಉದ್ದೇಶದಿಂದ ರಾಜಕೇಸರಿ ಸೇವಾ ಟ್ರಸ್ಟ್, ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ನವಸಹಜ ಸಮುದಾಯ ಸಂಘಟನೆ ದಕ್ಷಿಣ ಕನ್ನಡ ಜಿಲ್ಲೆ ಇವರ ಸಹಯೋಗದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರೊಂದಿಗೆ ವಿಶಿಷ್ಟ ರೀತಿಯಲ್ಲಿ ರಕ್ಷಾಬಂಧನ ಸಂಭ್ರಮವನ್ನು ಆಚರಿಸಲಾಯಿತು.

ಮಂಗಳೂರಿನ ಪೊಲೀಸ್ ಲೇನ್‌ನ ಮುನೀಶ್ವರ ಮಹಾಗಣಪತಿ ಕಲಾಮಂಟಪದಲ್ಲಿ ಆ.30 ರಂದು ನಡೆದ ಕಾರ್ಯಕ್ರಮದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಪರಸ್ಪರ ರಾಖಿ ಕಟ್ಟುವ ಮೂಲಕ ರಕ್ಷಾಬಂಧನ ಆಚರಿಸಿದರು. ಈ ಮೂಲಕ ಸಮಾಜದಲ್ಲಿ ವಿಭಿನ್ನವಾಗಿ ಕಾಣುವವರೂ ನಮ್ಮ ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಎಲ್ಲರೂ ಸಮಾನರು ಎಂಬ ಸಂದೇಶವನ್ನು ಸಾರಲಾಯಿತು.
ರಾಜಕೇಸರಿ ಸೇವಾ ಟ್ರಸ್ಟ್ ಕರ್ನಾಟಕದ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ರವರು ಕಾರ್ಯಕ್ರಮ ದುದ್ದಕ್ಕೂ ಉಪಸ್ಥಿತರಿದ್ದು ಇಂಥಹ ಕಾರ್ಯಕ್ರಮ ರಾಜ್ಯದಲ್ಲೇ ಪ್ರಥಮ ಎಂದು ಸಂತಸ ವ್ಯಕ್ತಪಡಿಸಿ ಇಂತಹ ವಿನೂತನ ಪರಿಕಲ್ಪನೆಯ ಕಾರ್ಯಕ್ರಮಗಳು ಇನ್ನಷ್ಟು ರಾಜಕೇಸರಿ ಸೇವಾ ಟ್ರಸ್ಟ್ ನಿಂದ ನಡೆಯಲಿ ಎಂದು ಶ್ಲಾಘಿಸಿದರು.
ನವಸಹಜ ಸಮುದಾಯ ಸಂಘಟನೆ ದಕ್ಷಿಣ ಕನ್ನಡ ಜಿಲ್ಲೆ ಅಧ್ಯಕ್ಷೆ ನಿಖಿಲಾ ಕೃತಿ ಮಾತನಾಡಿ ನಾಗರಿಕ ಸಮಾಜದಲ್ಲಿ ತಾರತಮ್ಯಕ್ಕೆ ಒಳಗಾಗಿ ಸಂಕಷ್ಟದಲ್ಲಿರುವ ನಮ್ಮನ್ನು ಒಟ್ಟುಗೂಡಿಸಿ ಭ್ರಾತೃತ್ವ ಬೆಸೆಯುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಮಹಾನಗರ ಧರ್ಮ ಜಾಗರಣ ಸಂಯೋಜಕ ಚರಣ್ ಅಳಪೆ, ನವಸಹಜ ಸಮುದಾಯ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಅರುಂಧತಿ ಯವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ರಾಜಕೇಸರಿ ಸೇವಾ ಟ್ರಸ್ಟ್‌ನ ಸದಸ್ಯರಾದ ಮನೋಜ್ ಕುಂದರ್ ರವರನ್ನು ಅಭಿನಂದಿಸಲಾಯಿತು. ರಾಜಕೇಸರಿ ಸೇವಾ ಟ್ರಸ್ಟ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಸಂತೋಷ್ ಕೊಲ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕೇಶ್ ಕುಲಾಲ್ ಮಂಗಳಾದೇವಿ, ಸಂಘಟನಾ ಕಾರ್ಯದರ್ಶಿ ವರುಣ್ ಕುಮಾರ್ ಬಪ್ಪನಾಡು, ಕ್ರೀಡಾ ಸಂಚಾಲಕರಾದ ಸಂದೀಪ್ ಸಾಲಿಯಾನ್, ಕಾರ್ಯದರ್ಶಿ ಶರತ್ ಚಿಲಿಂಬಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಮಾಜದಲ್ಲಿ ಸಮಾನತೆ, ಸಹೋದರತ್ವ ಮತ್ತು ಮಾನವೀಯತೆಯ ಮೌಲ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಮುಂದುವರಿಸುವ ಸಂಕಲ್ಪವನ್ನು ಸಂಘಟಕರು ವ್ಯಕ್ತಪಡಿಸಿದರು.











