ಉಜಿರೆ: ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆ, ಉಜಿರೆಯಲ್ಲಿ ಸೆ. 7ರಂದು ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಶಿಕ್ಷಕರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಿದ್ದರು. ಶಾಲೆಯ ಎಲ್ಲಾ ಶಿಕ್ಷಕರು, ಬಿ.ಎಡ್. ಪ್ರಶಿಕ್ಷಣಾರ್ಥಿಗಳು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು.
ಹಿರಿಯ ಶಿಕ್ಷಕರಾದ ಚಂದ್ರಶೇಖರ್ ಅವರು ಶಿಕ್ಷಕರ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳು ಅವರ ಜನ್ಮದಿನವನ್ನು ಆಚರಿಸಲು ಬಯಸಿದ ಸಂದರ್ಭದಲ್ಲಿ, ತಮ್ಮ ಜನ್ಮದಿನವನ್ನು ಆಚರಿಸುವ ಬದಲು ಅದನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವಂತೆ ಅವರು ಆಶಯ ವ್ಯಕ್ತಪಡಿಸಿದ ಹಿನ್ನೆಲೆಯನ್ನು ವಿವರಿಸಿದರು. ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ, ಮೌಲ್ಯಗಳು ಹಾಗೂ ಜೀವನದ ಆದರ್ಶಗಳನ್ನು ಕಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿದ್ಯಾ. ಟಿ. ಮಾತನಾಡಿ, “ಒಬ್ಬ ಉತ್ತಮ ಶಿಕ್ಷಕನು ಪುಸ್ತಕದ ಜ್ಞಾನವನ್ನು ಮಾತ್ರ ನೀಡುವುದಿಲ್ಲ; ಜೀವನವನ್ನು ಹೇಗೆ ಎದುರಿಸಬೇಕು ಎಂಬುದನ್ನೂ ಕಲಿಸುತ್ತಾನೆ” ಎಂದು ಹೇಳಿದರು.
10ನೇ ತರಗತಿಯ ವಿದ್ಯಾರ್ಥಿನಿಯರು ಪ್ರಾರ್ಥನೆ ನೆರವೇರಿಸಿದರು. ವಿದ್ಯಾರ್ಥಿನಿಯರಾದ ಸಿಂಚನಾ, ಶರಣ್ಯ ಹಾಗೂ ಫಾತೀಮಾ ಸಫಾ ಅವರು ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಕುರಿತು ಭಾಷಣ ಮಾಡಿದರು. ಆತ್ಮಿ ಹಾಗೂ ಜ್ಞಾನವಿ ಸ್ವಾಗತಿಸಿದರು. ಚಂದನ ಅವರು ಆಟೋಟ ಸ್ಪರ್ಧೆಗಳ ವಿಜೇತರ ಪಟ್ಟಿಯನ್ನು ವಾಚಿಸಿದರು.
ಶಾಲಾ ನಾಯಕಿ ರಂಸೀನಾ ಭಾನು ವಂದಿಸಿದರು. ಕಾವ್ಯ ಹಾಗೂ ಭಾಗ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.












