ಉಜಿರೆ: ಎಸ್.ಡಿ.ಎಂ. ಆಂಗ್ಲ ಮಾಧ್ಯಮ(ಸಿ.ಬಿ.ಎಸ್.ಇ.) ಶಾಲೆಯ ವತಿಯಿಂದ “Library Vision 2026 – Towards Systematic and Efficient Libraries” ಎಂಬ ಶೀರ್ಷಿಕೆಯಡಿ ಸಿ.ಬಿ.ಎಸ್.ಇ. ಹಾಗೂ ಐ.ಸಿ.ಎಸ್.ಇ. ಶಾಲೆಗಳ ಗ್ರಂಥಪಾಲಕರಿಗಾಗಿ ಕಾರ್ಯಾಗಾರವನ್ನು ಆಯೋಜಿಸಲಾಯಿತು.
ಉಜಿರೆಯ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ರತ್ನತ್ರಯ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ ಗ್ರಂಥಾಲಯಗಳ ಕಾರ್ಯವೈಖರಿಯನ್ನು ವ್ಯವಸ್ಥಿತಗೊಳಿಸುವುದು, ಪರಿಣಾಮಕಾರಿಯಾಗಿ ನಿರ್ವಹಿಸುವುದು ಹಾಗೂ ಆಧುನಿಕ ಗ್ರಂಥಾಲಯ ವ್ಯವಸ್ಥೆಗಳ ಕುರಿತು ಗ್ರಂಥಪಾಲಕರಿಗೆ ಅಗತ್ಯವಾದ ಮಾರ್ಗದರ್ಶನ ನೀಡುವುದು ಪ್ರಮುಖ ಉದ್ದೇಶವಾಗಿತ್ತು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಎಸ್.ಡಿ.ಎಂ. ಐ.ಟಿ. ಕಾಲೇಜಿನ ಉಜಿರೆಯ ಮುಖ್ಯ ಗ್ರಂಥಪಾಲಕರಾದ ಡಾ. ರಾಜತಾ ಪಿ. ಶೆಟ್ಟಿ ಭಾಗವಹಿಸಿ, ವ್ಯವಸ್ಥಿತ ಹಾಗೂ ಪರಿಣಾಮಕಾರಿ ಗ್ರಂಥಾಲಯಗಳ ನಿರ್ಮಾಣ, ಗ್ರಂಥಾಲಯ ನಿರ್ವಹಣೆಯ ವಿವಿಧ ಆಯಾಮಗಳು ಹಾಗೂ ಉತ್ತಮ ಗ್ರಂಥಾಲಯ ಸೇವೆಗಳ ಕುರಿತು ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು.
ಕರ್ನಾಟಕ ರಾಜ್ಯ ಕಾಲೇಜು ಶಿಕ್ಷಕರ ಸಂಘದಿಂದ ಮಂಗಳೂರು ವಿಭಾಗ ಮಟ್ಟದ ‘ಅತ್ಯುತ್ತಮ ಗ್ರಂಥಪಾಲಕ ಪ್ರಶಸ್ತಿ’ ಪಡೆದ ಹಿನ್ನೆಲೆಯಲ್ಲಿ ಸಂಪನ್ಮೂಲ ವ್ಯಕ್ತಿ ಡಾ. ರಾಜತಾ ಪಿ. ಶೆಟ್ಟಿ ಅವರನ್ನು ಶಾಲೆಯ ವತಿಯಿಂದ ಗೌರವಿಸಲಾಯಿತು.
ಕಾರ್ಯಾಗಾರದಲ್ಲಿ AICS ಸಂಸ್ಥೆಗಳ ಗ್ರಂಥಪಾಲಕರು ಭಾಗವಹಿಸಿ, ಗ್ರಂಥಾಲಯ ನಿರ್ವಹಣೆಗೆ ಸಂಬಂಧಿಸಿದ ವಿವಿಧ ವಿಚಾರಗಳ ಕುರಿತು ಮಾಹಿತಿ ಪಡೆದುಕೊಂಡರು. ಕಾರ್ಯಾಗಾರವು ಗ್ರಂಥಪಾಲಕರ ವೃತ್ತಿಪರ ಜ್ಞಾನವನ್ನು ವೃದ್ಧಿಸುವುದರೊಂದಿಗೆ ಶಾಲಾ ಗ್ರಂಥಾಲಯಗಳನ್ನು ಇನ್ನಷ್ಟು ವ್ಯವಸ್ಥಿತ ಹಾಗೂ ಪರಿಣಾಮಕಾರಿಯಾಗಿ ರೂಪಿಸಲು ಸಹಕಾರಿಯಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಶ್ರೀಮತಿ ಸವಿತಾ ವೇದಪ್ರಕಾಶ್ ಸ್ವಾಗತಿಸಿದರು. ಶಾಲೆಯ ಪ್ರಾಂಶುಪಾಲರಾದ ಮನಮೋಹನ್ ನಾಯ್ಕ್ ಕೆ.ಜಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
“ವ್ಯವಸ್ಥಿತ ಗ್ರಂಥಾಲಯವೇ ಜ್ಞಾನಪೂರ್ಣ ಕಲಿಕೆಯ ಬಾಗಿಲು” ಎಂಬ ಆಶಯದೊಂದಿಗೆ ನಡೆದ ಕಾರ್ಯಾಗಾರವು ಯಶಸ್ವಿಯಾಗಿ ನೆರವೇರಿತು.











