ಉಜಿರೆ : ಮಂಗಳೂರಿನ ಪ್ರತಿಷ್ಠಿತ ಮಂಗಳ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿ ಕಾಲೇಜಿನ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೇರಿಸಿದ್ದಾರೆ. ವಿವಿಧ ಗುಂಪು ಹಾಗೂ ವೈಯಕ್ತಿಕ ಕ್ರೀಡಾ ವಿಭಾಗಗಳಲ್ಲಿ ಅಸಾಧಾರಣ ಸಾಧನೆ ತೋರಿದ ಎಸ್.ಡಿ.ಎಂ ಕಾಲೇಜಿನ ಕ್ರೀಡಾಪಟುಗಳು ಹಲವಾರು ಪ್ರಥಮ ಸ್ಥಾನಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ವಿಭಾಗ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಅರ್ಹತೆ ಪಡೆದು ಹೊಸ ದಾಖಲೆ ಬರೆದಿದ್ದಾರೆ.
ಗುಂಪು ಕ್ರೀಡಾ ವಿಭಾಗಗಳಲ್ಲಿ ಎಸ್.ಡಿ.ಎಂ ಕಾಲೇಜಿನ ತಂಡಗಳು ಸಂಪೂರ್ಣ ಪ್ರಾಬಲ್ಯ ಮೆರೆದವು. ಪುರುಷರ ವಾಲಿಬಾಲ್ ಹಾಗೂ ಮಹಿಳೆಯರ ವಾಲಿಬಾಲ್ ತಂಡಗಳು ಅತ್ಯುತ್ತಮ ಆಟದ ಮೂಲಕ ಪ್ರಥಮ ಸ್ಥಾನ ಗಳಿಸಿದರೆ, ಪುರುಷರ ಮತ್ತು ಮಹಿಳೆಯರ ಹ್ಯಾಂಡ್‌ಬಾಲ್ ತಂಡಗಳು ಸಹ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿ ಅಗ್ರಸ್ಥಾನ ಪಡೆದವು. ಇದೇ ರೀತಿ ಪುರುಷರ ಹಾಗೂ ಮಹಿಳೆಯರ ನೆಟ್‌ಬಾಲ್ ತಂಡಗಳು ಕೂಡ ಎದುರಾಳಿ ತಂಡಗಳನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದವು. ಆರು ಗುಂಪು ಕ್ರೀಡೆಗಳಲ್ಲಿಯೂ ಪ್ರಥಮ ಸ್ಥಾನ ಗಳಿಸಿರುವುದು ಕಾಲೇಜಿನ ಕ್ರೀಡಾ ವಿಭಾಗದ ವ್ಯವಸ್ಥಿತ ತರಬೇತಿ, ಕ್ರೀಡಾಪಟುಗಳ ಶ್ರಮ ಹಾಗೂ ಸಮರ್ಪಣೆಯ ಪ್ರತೀಕವಾಗಿದೆ.
ವೈಯಕ್ತಿಕ ಕ್ರೀಡಾ ವಿಭಾಗಗಳಲ್ಲಿಯೂ ಎಸ್.ಡಿ.ಎಂ ಕಾಲೇಜಿನ ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಮಂಜು ಎಂ. ಅವರು 100 ಮೀಟರ್ ಓಟದಲ್ಲಿ ವೇಗದ ಓಟಗಾರನಾಗಿ ಹೊರಹೊಮ್ಮಿ ಚಿನ್ನದ ಪದಕ ಪಡೆದರು. ಆಕಾಶ್ ಎಸ್. ಕುಂದರ್ ಅವರು ಶಾಟ್‌ಪುಟ್ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಬೆಳ್ಳಿ ಪದಕಕ್ಕೆ ಭಾಜನರಾದರು. ನಿತಿನ್ ಯು.ಎಲ್. ಅವರು 5000 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದರೆ, ದರ್ಶನ್ ಅವರು 10,000 ಮೀಟರ್ ಓಟದಲ್ಲಿ ಅಗ್ರಸ್ಥಾನ ಪಡೆದು ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಕಿಶೋರ್ ಅವರು ಜಾವೆಲಿನ್ ಥ್ರೋ ವಿಭಾಗದಲ್ಲಿ ಅತ್ಯುತ್ತಮ ಎಸೆತದ ಮೂಲಕ ಚಿನ್ನದ ಪದಕ ಗೆದ್ದರು. ಪ್ರಣವ್ ಅವರು 400 ಮೀಟರ್ ಓಟದಲ್ಲಿ ಅಸಾಧಾರಣ ಪ್ರದರ್ಶನ ನೀಡಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.
ವಿದ್ಯಾರ್ಥಿಗಳಿಗೆ ಎಸ್.ಡಿ.ಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಎಚ್, ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ಶಾರದಾ , ಸುದೀನ್ ಪುಜಾರಿ ಮತ್ತು ಸಂದೇಶ್ ಪೂಂಜಾ ವಿದ್ಯಾರ್ಥಿಗಳ ತರಬೇತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಕ್ರೀಡಾಪಟುಗಳ ಈ ಸಾಧನೆಯು ಕೇವಲ ವೈಯಕ್ತಿಕ ಯಶಸ್ಸಾಗಿರದೇ, ಕಾಲೇಜಿನ ಕ್ರೀಡಾ ಪರಂಪರೆ, ತರಬೇತಿ ವ್ಯವಸ್ಥೆ ಹಾಗೂ ಕ್ರೀಡೆಗೆ ನೀಡುತ್ತಿರುವ ನಿರಂತರ ಪ್ರೋತ್ಸಾಹದ ಪ್ರತಿಫಲವಾಗಿದೆ. ನಿರಂತರ ಅಭ್ಯಾಸ, ಕಠಿಣ ಪರಿಶ್ರಮ, ಆತ್ಮವಿಶ್ವಾಸ ಮತ್ತು ಕ್ರೀಡಾ ಮನೋಭಾವದಿಂದ ಈ ಯಶಸ್ಸು ಸಾಧ್ಯವಾಗಿದೆ.
ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಎಸ್.ಡಿ.ಎಂ ಕಾಲೇಜಿನ ಕ್ರೀಡಾಪಟುಗಳು ಇದೀಗ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದು, ಅಲ್ಲಿಯೂ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಲಿದ್ದಾರೆ ಎಂಬ ವಿಶ್ವಾಸವಿದೆ. ಅವರ ಸಾಧನೆಯು ಇತರ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಿದ್ದು, ಕಾಲೇಜಿನ ಕ್ರೀಡಾ ಕ್ಷೇತ್ರಕ್ಕೆ ಹೊಸ ಉತ್ಸಾಹವನ್ನು ತುಂಬಿದೆ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಪ್ರಶಂಸೆ ವ್ಯಕ್ತಪಡಿಸಿದರು.
ಕ್ರೀಡಾಪಟುಗಳ ಈ ಗಮನಾರ್ಹ ಸಾಧನೆಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸೇರಿದಂತೆ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರನ್ ವರ್ಮ, ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಪಿ., ಎಸ್.ಡಿ.ಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಹೆಚ್., ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ಶಾರದಾ, ಸುದೀನ್ ಪೂಜಾರಿ, ಸಂದೇಶ್ ಪೂಂಜಾ ಸೇರಿದಂತೆ ಇತರೆ ತರಬೇತುದಾರರು, ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ಹಂತದ ಸ್ಪರ್ಧೆಗಳಲ್ಲಿಯೂ ಇದೇ ರೀತಿಯ ಸಾಧನೆ ಮುಂದುವರಿಯಲಿ ಎಂದು ಶುಭ ಹಾರೈಸಿದ್ದಾರೆ.












