
ಬೆಳ್ತಂಗಡಿ: ಯೋಗವೆಂದರೆ ಕೇವಲ ಆಸನವಲ್ಲ, ಅದು ಸಾಧನೆ, ತಪಸ್ಸು, ತಾಳ್ಮೆ. ಇದನ್ನು 11 ವರ್ಷಗಳ ನಿರಂತರಅಭ್ಯಾಸದಿಂದ ಸಾಬೀತುಪಡಿಸಿದ್ದಾರೆ, ಬೆಳ್ತಂಗಡಿಯ ಯುವ ಪ್ರತಿಭೆ ವಿಕಾಸ್ ಕೆ.ಪೂಜಾರಿ.
ಸರ್ವಾಂಗಾಸನದಲ್ಲಿ ಅತ್ಯಂತ ಸುದೀರ್ಘ ಕಾಲ ಸಮತೋಲನ ಕಾಯ್ದುಕೊಂಡು ಆಸನ ನಿರ್ವಹಿಸಿದ ಅದ್ಭುತ ಸಾಧನೆಗಾಗಿ, ಮೂಡುಬಿದಿರೆಯ ಪ್ರತಿಷ್ಠಿತ ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪತಿ ಅಂಡ್ ಯೋಗಿಕ್ ಸೈನ್ಸಸ್‌ನ ತೃತೀಯ ವರ್ಷದ ವಿದ್ಯಾರ್ಥಿಯಾಗಿರುವ ವಿಕಾಸ್ ಅವರಿಗೆ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಿಂದ ವಿಶ್ವ ದಾಖಲೆಯ ಗರಿ ಲಭಿಸಿದೆ. ಇದು ಕೇವಲ ವಿಕಾಸ್‌ರಿಗೆ ಮಾತ್ರವಲ್ಲ, ಇಡೀ ಕರಾವಳಿಗೇ ಹೆಮ್ಮೆಯ ಕ್ಷಣ.
ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಪ್ರತಿಷ್ಠಿತ ಪಂರ್ದ ಗುತ್ತು ತರವಾಡು ಮನೆಯ ಯಜಮಾನ ಕೃಷ್ಣಪ್ಪ ಪೂಜಾರಿ ಮತ್ತು ಬಾರ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಶೀಲಾವತಿ ದಂಪತಿಗಳ ಸುಪುತ್ರ ವಿಕಾಸ್. ಐದನೇ ತರಗತಿಯಲ್ಲಿ ಯೋಗಾಭ್ಯಾಸ ಆರಂಭಿಸಿದ ಈ ಬಾಲಕ, ಕಳೆದ ೧೧ ವರ್ಷಗಳಿಂದ ಒಂದೇ ಒಂದು ದಿನವೂ ತಪ್ಪದೆ ಯೋಗವನ್ನೇ ಉಸಿರಾಗಿಸಿಕೊಂಡಿದ್ದಾರೆ. ಅವರ ಸರ್ವಾಂಗಾಸನದ ಪ್ರದರ್ಶನದಲ್ಲಿ ಕೇವಲ ದೇಹದ ನಮ್ಯತೆಯಷ್ಟೇ ಅಲ್ಲ, ಅಚಲವಾದ ಏಕಾಗ್ರತೆ, ಅಪ್ರತಿಮ ಸಹನಶಕ್ತಿ, ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ಸ್ಥಿರತೆ ಅನಾವರಣಗೊಂಡಿದೆ ಎಂದು ವಿಶ್ವ ದಾಖಲೆ ಪ್ರಮಾಣಪತ್ರದಲ್ಲೇ ಶ್ಲಾಘಿಸಲಾಗಿದೆ.
2021ರಲ್ಲಿ ಹೈದರಾಬಾದ್ ರಾಷ್ಟ್ರೀಯ ಮಟ್ಟದಲ್ಲಿ ದ್ವಿತೀಯ,2022ರಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ 2023, 3024, 2025 ಸತತ ಮೂರು ಬಾರಿ ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸ್ಪರ್ಧೆಯಲ್ಲಿ ದ್ವಿತೀಯ, 2024ರಲ್ಲಿ ನವದೆಹಲಿಯ ಎಐಐಎಂಎಸ್‌ನಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧೆಯಲ್ಲಿ ಆಯ್ಕೆ
2025ರಲ್ಲಿ ಇವೈಯುಎಸ್ ವೈದ್ಯಕೀಯ ಸಂಸ್ಥೆಯ ರಾಷ್ಟ್ರೀಯ ಸ್ಪರ್ಧೆಯಲ್ಲಿ ದ್ವಿತೀಯ. ಇವರು ಸ್ಪರ್ಧಿಯಾಗಿ ಮಾತ್ರವಲ್ಲ, ಯೋಗ ಸ್ಪರ್ಧೆಗಳ ತೀರ್ಪುಗಾರರಾಗಿ ಕೂಡ ಸೇವೆ ಸಲ್ಲಿಸುತ್ತಾ ಬೆಳೆಯುತ್ತಿದ್ದಾರೆ.








