ಚಾರ್ಮಾಡಿ : ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಬೆಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಇಲಾಖೆ ಬೆಳ್ತಂಗಡಿ ತಾಲೂಕು, ಚಾರ್ಮಾಡಿ ಗ್ರಾಮ ಪಂಚಾಯತ್ ಹಾಗೂ ತ್ರಿವರ್ಣ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ (ರಿ ) ಇವರ ಜಂಟಿ ಆಶ್ರಯದಲ್ಲಿ ತ್ಯಾಜ್ಯ ನಿರ್ವಹಣೆ ಮಳೆನೀರು ಇಂಗಿಸುವಿಕೆ ಹಾಗೂ ಸೌರ ಶಕ್ತಿ ಯೋಜನೆಗಳ ಬಗ್ಗೆ ಮಾಹಿತಿ ಕಾರ್ಯಗಾರವನ್ನು ಚಾರ್ಮಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಚಾರ್ಮಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ್ ಕಾರ್ಯಕ್ರಮ ಉದ್ಘಾಟಿಸಿ ಪರಿಸರ ಉಳಿಸುವ ನಿಟ್ಟಿನಲ್ಲಿ ಮಾಹಿತಿ ನೀಡುವ ಸಂಸ್ಥೆಗಳ ಉದ್ದೇಶಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಲ್ಲಿ ಪಡೆಯುವ ಮಾಹಿತಿ ಪ್ರತಿ ಮನೆಯಲ್ಲಿ, ಗ್ರಾಮದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಗ್ರಾಮ ಮಾದರಿ ಗ್ರಾಮ ಆಗಲು ಬೇಕಾದ ಎಲ್ಲಾ ಮಾಹಿತಿ ಪಡೆದು ಅದರ ಅಳವಡಿಕೆ ಬಗ್ಗೆ ಕಾರ್ಯಪ್ರವೃತ್ತರಾಗಬೇಕು ಎಂದರು. ಭಾರತೀಯ ವಿಕಾಸ ಟ್ರಸ್ಟ್ ಇದರ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ ಮಾತನಾಡುತ್ತಾ ಗ್ರಾಮೀಣ ಪ್ರದೇಶದಲ್ಲಿ ತ್ಯಾಜ್ಯ ನಿರ್ವಹಣೆ ಹಾಗೂ ಸೌರಶಕ್ತಿ ಬಳಕೆ ಬಗ್ಗೆ ತಿಳಿದು ನಮ್ಮ ಮಕ್ಕಳಿಗೆ ತಿಳಿಸಬೇಕು. ನಾವು ಪಡೆದ ಮಾಹಿತಿಯನ್ನು ನಮ್ಮ ಮನೆಯಲ್ಲಿ ಮೊದಲು ಅಳವಡಿಸಿ ಗ್ರಾಮದ ಜನತೆ ಅಳವಡಿಸಲು ಪ್ರಯತ್ನ ಪಟ್ಟರೆ ನಮ್ಮ ಗ್ರಾಮ ಸ್ವಚ್ಛ ಗ್ರಾಮ ಆಗಬಹುದು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಗೌತಮ್ ತ್ಯಾಜ್ಯ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. NRLM ತಾಲೂಕಿನ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಪ್ರತಿಮಾ, NRLM ಕೃಷಿಯೇತರ ತಾಲೂಕು ವ್ಯವಸ್ಥಾಪಕರಾದ ನಿತೇಶ್, ವಲಯ ಮೇಲ್ವಿಚಾರಕರಾದ ಜಯಾನಂದ, ಒಕ್ಕೂಟದ ಅಧ್ಯಕ್ಷೆ ಶುಭ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುಸ್ತಕ ಬರಹಗಾರರಾದ ಭವ್ಯ ಕಾರ್ಯಕ್ರಮವನ್ನು ನಿರೂಪಿಸಿ, ಕೃಷಿ ಸಖಿ ಅಶ್ವಿನಿ ಸ್ವಾಗತಿಸಿದರು.
ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸ್ವಸಹಾಯ ಸಂಘದ ಸದಸ್ಯರು, ಬೆಳ್ತಂಗಡಿ ತಾಲೂಕಿನ ಎಂಬಿಕೆಗಳು ಮತ್ತು ತ್ಯಾಜ್ಯ ನಿರ್ವಹಣೆಯ ಸಿಬ್ಬಂದಿಗಳು ಕಾರ್ಯಗಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.












