25.4 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಜಪಾನ್-ನ ಸಿ.ಡಬ್ಲ್ಯು.ಬಿ ಮತ್ತು ಉಜಿರೆ ಎಸ್.ಡಿ.ಎಂ ಕಾಲೇಜು ನಡುವೆ ಅಂತಾರಾಷ್ಟ್ರೀಯ ಸಾಂಸ್ಕೃತಿಕ-ಶೈಕ್ಷಣಿಕ ವಿನಿಮಯ ಒಪ್ಪಂದ

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಮತ್ತು ಜಪಾನಿನ ಸಿ.ಡಬಿ (ಕಮ್ಯುನಿಟಿ ವರ್ಕ್ ಬಿಯಾಂಡ್ ಬಾರ್ಡ-ರ್ಸ್) ನಡುವೆ ಸಾಂಸ್ಕೃತಿಕ, ಶೈಕ್ಷಣಿಕ, ವೃತ್ತಿಪರ ತರಬೇತಿ ಮತ್ತು ಮತ್ತು ಇಂಟರ್ನ್‌ಶಿಪ್ ನೀಡುವ ಕುರಿತಾಗಿ ಒಪ್ಪಂದ (ಎಂಒಯು) ನಡೆದಿದೆ. ಅಕ್ಟೋಬರ್ 8, 2026 ರಿಂದ ಜಾರಿಗೆ ಬರುವಂತೆ ಮುಂದಿನ ಎರಡು ಕಾಲ ಈ ಒಪ್ಪಂದ ಜಾರಿಯಲ್ಲಿರಲಿದ್ದು, ಇದಕ್ಕೆ ಉಜಿರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಸತೀಶ್ಚಂದ್ರ ಎಸ್. ಇವ ಮಾರ್ಗದರ್ಶನದಂತೆ ಕಾಲೇಜಿನ ಪರವಾಗಿ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ್ ಪಿ. ಹಾಗೂ ಜಪಾನಿನ ಸಿ.ಡಬ್ಲ್ಯು.ಬಿ ಪರವಾಗಿ ಸ್ಥಾಪಕರಾದ ಪ್ರೊ. ಮಾಸ ಕಟಾವೋಕಾ ಸಹಿ ಹಾಕಿದ್ದಾರೆ.

ಒಪ್ಪಂದದ ಉದ್ದೇಶ:
ಈ ಎಂಒಯು ಭಾರತ ಮತ್ತು ಜಪಾನ್ ಜೊತೆಗೆ ಸಿಡಬ್ಲ್ಯೂಬಿ ಸಂಸ್ಥೆಯ ನೆಟ್‌ವರ್ಕ್‌-ಗೆ ಸೇರಿರುವ ನೇಪಾಳ, ಮ್ಯಾನ್‌ಮಾರ್, ಕಾಂಬೋಡಿಯಾ, ಇಂಡೋನೇಷ್ಯಾ, ಟಿಮೋರ್-ಲೆಸ್ತೆ ಮತ್ತು ಫಿಲಿಪೈನ್ಸ್‌ನಂತಹ ದೇಶಗಳ ನಡುವೆ ಸಾಂಸ್ಕೃತಿಕ, ಶೈಕ್ಷಣಿಕ, ವೃತ್ತಿಪರ ಮತ್ತು ಇಂಟರ್ನ್‌ಶಿಪ್ ವಿನಿಮಯಕ್ಕೆ ಸಂಬಂಧಿಸಿದ ಒಪ್ಪಂದ ರೂಪಿಸಿದೆ. ಇದರನ್ವಯ ಎಸ್‌ಡಿಎಂ ಕಾಲೇಜಿನ ಕಲಾಕೇಂದ್ರ, ಪತ್ರಿಕೋದ್ಯಮ ವಿಭಾಗ ಹಾಗೂ ಇತರ ಶೈಕ್ಷಣಿಕ ಘಟಕಗಳು ಈ ಕಾರ್ಯಕ್ರಮದ ಭಾಗವಾಗಲಿವೆ.

ಕಮ್ಯುನಿಟಿ ವರ್ಕ್ಸ್ ಬಿಯಾಂಡ್ ಬಾರ್ಡರ್ಸ್’ (ಸಿಡಬ್ಲ್ಯೂಬಿ) ಜಪಾನ್‌ನಲ್ಲಿ ಸಾಂಸ್ಕೃತಿಕ, ಕೃಷಿ ಮತ್ತು ಸಮುದಾಯಾಧಾರಿತ ಚಟುವಟಿಕೆಗಳಲ್ಲಿ ತೊಡಗಿರುವ ಸಂಸ್ಥೆಯಾಗಿದೆ. ಆಯಾ ದೇಶಗಳ ಯುವ ಸಮುದಾಯಕ್ಕೆ ಉದ್ಯೋಗ ಸೃಷ್ಟಿಯಂತಹ ಯೋಜನೆಯ ಜೊತೆಗೆ ವಿವಿಧ ದೇಶಗಳ ಸಾಂಪ್ರದಾಯಿಕ ಸಂಸ್ಕೃತಿ ಮತ್ತು ಕೌಶಲ್ಯಗಳನ್ನು ಉಳಿಸಿ ಬೆಳೆಸುವ ಗುರಿಯನ್ನೂ ಹೊಂದಿದೆ.

ಒಪ್ಪಂದದಡಿ ಬರುವ ಕ್ಷೇತ್ರಗಳು:
ಪ್ರಸ್ತುತ ಎಂ.ಓ.ಯು-ನಡಿ ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ವಿಸ್ತರಿಸಲು ಸಿ.ಡಬ್ಲ್ಯೂ.ಬಿ ಹಾಗೂ ಉಜಿರೆ ಎಸ್.ಡಿ.ಎಂ ಕಾಲೇಜು ಬದ್ಧವಾಗಿವೆ. ಅದರನ್ವಯ, ಸಾಂಸ್ಕೃತಿಕ ವಿನಿಮಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತೀಯ ಮತ್ತು ಜಪಾನೀ ಸಂಸ್ಕೃತಿ ಹಾಗೂ ಪರಂಪರೆಗೆ ಸಂಬಂಧಿಸಿದ ಕಾರ್ಯಾಗಾರಗಳು, ಪ್ರದರ್ಶನಗಳು ಮತ್ತು ಕಲಿಕಾ ಅವಕಾಶಗಳನ್ನು ನೀಡಲಾಗುತ್ತದೆ.

ಸಾಂಪ್ರದಾಯಿಕ ಕಲೆ ವಿಭಾಗದಡಿಯಲ್ಲಿ ಸಿಡಬ್ಲ್ಯೂಬಿ ನೆಟ್‌ವರ್ಕ್‌ನ ವಿದ್ಯಾರ್ಥಿಗಳು ಎಸ್‌ಡಿಎಂ ಕಲಾ ಕೇಂದ್ರದ ಮೂಲಕ ಯಕ್ಷಗಾನ, ಭರತನಾಟ್ಯ, ಜಾನಪದ ನೃತ್ಯ, ಸೇರಿದಂತೆ ಭಾರತೀಯ ಕಲೆಗಳನ್ನು ಕಲಿಯಲು ಅವಕಾಶ ನೀಡಲಾಗಿದೆ. ಜೊತೆಗೆ ಎಸ್‌ಡಿಎಂ ವಿದ್ಯಾರ್ಥಿಗಳಿಗೆ ಸಿಡಬ್ಲ್ಯೂಬಿ ನೆಟ್ವರ್ಕ್-ನಡಿಯಲ್ಲಿರುವ ದೇಶಗಳ ಸಾಂಪ್ರದಾಯಿಕ ನೃತ್ಯ ಮತ್ತು ಸಾಂಸ್ಕೃತಿಕ ಕಲೆಗಳನ್ನು ಕಲಿಯುವ ಅವಕಾಶ ಮಾಡಿಕೊಡಲಾಗಿದೆ.

ಶೈಕ್ಷಣಿಕ ವಿನಿಮಯ ಕ್ಷೇತ್ರದಡಿಯಲ್ಲಿ ಉಭಯ ದೇಶಗಳಲ್ಲಿ ಆಯ್ದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ವಿಷಯಕ್ಕೆ ಸಂಬಂಧಿಸಿದಂತೆ ಜ್ಞಾನ ಹಂಚಿಕೆ ಹಾಗೂ ಅಧ್ಯಯನ ಭೇಟಿ ನೀಡುವ ಅವಕಾಶಗಳನ್ನು ಕಲ್ಪಿಸಲಾಗಿದೆ.

ಇಂಟರ್ನ್-ಶಿಫ್ ಅವಕಾಶ:
ಇಂಟರ್ನ್‌ಶಿಪ್ ಮತ್ತು ಪ್ರಾಯೋಗಿಕ ಕಲಿಕೆ ವಿಸ್ತರಿಸುವ ಉದ್ದೇಶದಿಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದಡಿಯಲ್ಲಿ ಇಂಟರ್ನ್ ಶಿಫ್ ನೀಡುವ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರನ್ವಯ ವಿದೇಶಿ ವಿದ್ಯಾರ್ಥಿಗಳಿಗೆ ಮಾಧ್ಯಮ ಕಲಿಕೆ, ಸಾಂಸ್ಕೃತಿಕ ಅಧ್ಯಯನ, ಕೃಷಿ, ಸಮುದಾಯ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಅಧ್ಯಯನ ಮತ್ತು ದಾಖಲೀಕರಣ ಪ್ರಕ್ರಿಯೆಯ ಕುರಿತು ತರಬೇತಿ ನೀಡಲಾಗುತ್ತದೆ.

ಇದರ ಜೊತೆಗೆ ಪತ್ರಿಕೋದ್ಯಮ ವಿಭಾಗದಡಿಯಲ್ಲಿ ಛಾಯಾಗ್ರಹಣ, ವೀಡಿಯೋಗ್ರಫಿ, ಡಿಜಿಟಲ್ ಸ್ಟೋರಿ, ಡಾಕ್ಯುಮೆಂಟರಿ ನಿರ್ಮಾಣ, ನುಡಿಚಿತ್ರ, ಲೇಖನ ರಚನೆ ಹೀಗೆ ಮಾಧ್ಯಮದ ವಿವಿಧ ಆಯಾಮಗಳ ಕುರಿತು ತರಬೇತಿ ನೀಡುವ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಜಪಾನ್-ನಿಂದ ಈ ಎಂ.ಓ.ಯು-ನಡಿಯಲ್ಲಿ ಇಂಟರ್ನ್-ಶಿಫ್ ಗಾಗಿ ಬರುವ ವಿದ್ಯಾರ್ಥಿಗಳಿಗೆ ಉಜಿರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಉಚಿತ ವಸತಿ ಮತ್ತು ಊಟವನ್ನು ಒದಗಿಸುತ್ತದೆ. ಒಟ್ಟಿನಲ್ಲಿ ಈ ಅಂತಾರಾಷ್ಟ್ರೀಯ ಒಪ್ಪಂದವು ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಕಲೆ, ಸಂಸ್ಕೃತಿಯ ಕಲಿಕೆಯ ಅನುಭವ, ಸಾಂಸ್ಕೃತಿಕ ವಿನಿಮಯ ಮತ್ತು ಪ್ರಾಯೋಗಿಕ ಕಲಿಕೆಯ ಹೊಸ ಅವಕಾಶಗಳನ್ನು ತೆರೆಯುವುದಲ್ಲದೆ, ಜಪಾನ್ ಮತ್ತು ಏಷ್ಯಾದ ಇತರ ದೇಶಗಳೊಂದಿಗೆ ಸಮುದಾಯಾಧಾರಿತ ಸುಸ್ಥಿರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸೇತುವೆಯಾಗಲಿದೆ.

ಈ ಒಪ್ಪಂದಕ್ಕೆ ಸಹಿ ಹಾಕುವ ವೇಳೆ ಕಾರ್ಯಕ್ರಮದ ಸಂಯೋಜಕಿ ಹಾಗೂ ಜಪಾನಿನ ಸಿ.ಡಬ್ಲ್ಯು.ಬಿ ಸಂಸ್ಥೆಯ ಸಲಹೆಗಾರ್ತಿಯಾದ ಶ್ರೀಮತಿ ಮನೋರಮಾ ಭಟ್, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಐ.ಟಿ ಹಾಗೂ ಹಾಸ್ಟೆಲ್ ಅಡ್ಮಿನಿಸ್ಟ್ರೇಶನ್-ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಪೂರನ್ ವರ್ಮ, ಸಿ.ಡಬ್ಲ್ಯು.ಬಿ ಸದಸ್ಯೆ ಒಕುಟಾನಿ ಕ್ಯೂಕೋ, ತನಾಕ ಅಕೇಮಿ, ಸಿ.ಡಬ್ಲ್ಯು.ಬಿ ಸಂಸ್ಥೆಯ ಸ್ವಯಂಸೇವಕಿ ನೇಪಾಳದ ಸುಜನ ಶಾಕ್ಯ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಸುನಿಲ್ ಹೆಗ್ಡೆ, ಇಂಟರ್ನಿಗಳಾದ ಗೋಟೋ ರೋಹೆ ಮತ್ತು ಇಕೆಡಾ ಅಕಾರಿ ಉಪಸ್ಥಿತರಿದ್ದರು.
*

Related posts

ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಎ ಸಿ ಎಫ್ ಭೇಟಿ

Suddi Udaya

ಅರಸಿನಮಕ್ಕಿ ಧ.ಗ್ರಾ. ಯೋಜನೆಯ ಎ ಮತ್ತು ಬಿ ಒಕ್ಕೂಟದ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

Suddi Udaya

ನಕ್ಸಲ್ ನಾಯಕ ರೂಪೇಶ್ 3 ದಿನ ಬೆಳ್ತಂಗಡಿ ಪೊಲೀಸ್ ಕಸ್ಟಡಿಗೆ

Suddi Udaya

ಜಿಲ್ಲಾ ಮಟ್ಟದ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸ್ಪರ್ಧೆ: ಉಜಿರೆ ಶ್ರೀ ಧ.ಮಂ. ಪದವಿ ಪೂರ್ವ ಕಾಲೇಜಿಗೆ ಹಲವಾರು ಪ್ರಶಸ್ತಿ

Suddi Udaya

ಮದ್ದಡ್ಕ ಸಮೀಪ ನೇರಳಕಟ್ಟೆಯಲ್ಲಿ ಚಿನ್ನಾಭರಣ ಕಳವು ಪ್ರಕರಣ: ಅಂದಾಜು 56 ಗ್ರಾಂ ಚಿನ್ನಾಭರಣ ಕಳವುಗೈದು ಪರಾರಿಯಾದ ಕಳ್ಳರು

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ, ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕ ಸಿ ಎನ್ ಬಾಲಕೃಷ್ಣ ಭೇಟಿ

Suddi Udaya
error: Content is protected !!