ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ), ಉಜಿರೆಯ ಗ್ರಂಥಾಲಯದಲ್ಲಿ ಸರಸ್ವತಿ ಪೂಜಾ ಕಾರ್ಯಕ್ರಮವನ್ನು ಭಕ್ತಿಭಾವ ಮತ್ತು ಶ್ರದ್ಧೆಯಿಂದ ನೆರವೇರಿಸಲಾಯಿತು.
ವಿದ್ಯೆ, ಜ್ಞಾನ, ಕಲೆ ಮತ್ತು ಬುದ್ಧಿವಂತಿಕೆಯ ಅಧಿದೇವತೆಯಾದ ಸರಸ್ವತಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಆಚರಿಸಲಾಯಿತು. ಶಿಕ್ಷಣ ಸಂಸ್ಥೆಗಳಲ್ಲಿ ಜ್ಞಾನಾರಾಧನೆಗೆ ವಿಶೇಷ ಮಹತ್ವವಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಜ್ಞಾನವೃದ್ಧಿ ಹಾಗೂ ಉತ್ತಮ ಭವಿಷ್ಯಕ್ಕಾಗಿ ದೇವಿಯ ಆಶೀರ್ವಾದವನ್ನು ಕೋರಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ವಸತಿ ನಿಲಯ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಪೂರನ್ ವರ್ಮ, ಎಸ್ಡಿಎಂ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ., ಉಪಪ್ರಾಂಶುಪಾಲೆ ನಂದಕುಮಾರಿ ಕೆ.ಪಿ., ಆಡಳಿತ ವಿಭಾಗದ ರಿಜಿಸ್ಟ್ರಾರ್ ಶ್ರೀಧರ ಎನ್. ಭಟ್, ಎಸ್ಡಿಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ. ಸೌಮ್ಯ ಬಿ.ಪಿ. ಸೇರಿದಂತೆ ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕೇಂದ್ರ ಕಚೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾಲೇಜಿನ ಮುಖ್ಯ ಗ್ರಂಥಪಾಲಕ ಯೋಗೀಶ್ ಹಾಗೂ ಗ್ರಂಥಾಲಯದ ಸಿಬ್ಬಂದಿ ವರ್ಗದವರು ಶಾರದಾ ಪೂಜೋತ್ಸವ ಕಾರ್ಯಕ್ರಮವನ್ನು ಸಂಯೋಜಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು ಹಾಗೂ ಸಿಬ್ಬಂದಿ ವರ್ಗದವರು ಸರಸ್ವತಿ ದೇವಿಗೆ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿ, ದೇವರ ಪ್ರಸಾದವನ್ನು ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಎಸ್.ಡಿ.ಎಂ ಗ್ರಂಥಾಲಯ ಸಿಬ್ಬಂದಿ ವರ್ಗದವರು ಹಾಗು ಇತರೆ ಸಿಬ್ಬಂದಿ ವರ್ಗದವರ ಸಹಯೋಗದಲ್ಲಿ ಭಜನಾ ಕಾರ್ಯಕ್ರಮ ಜರುಗಿತು.
ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಜ್ಞಾನಕ್ಕೆ ನೀಡಲಾಗುವ ಗೌರವದ ಸಂಕೇತವಾಗಿರುವ ಸರಸ್ವತಿ ಪೂಜೆಯು ಶೈಕ್ಷಣಿಕ ಸಂಸ್ಥೆಗಳಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಇಂತಹ ಕಾರ್ಯಕ್ರಮಗಳು ಶಿಕ್ಷಣದೊಂದಿಗೆ ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯಗಳನ್ನು ಬೆಸೆಯುವಲ್ಲಿ ಸಹಕಾರಿಯಾಗುತ್ತವೆ. ಎಸ್ಡಿಎಂ ಕಾಲೇಜಿನ ಗ್ರಂಥಾಲಯದಲ್ಲಿ ನಡೆದ ಈ ಪೂಜಾ ಕಾರ್ಯಕ್ರಮವು ಭಕ್ತಿಪೂರ್ಣಮನೋಭಾವನ್ನು ಎಲ್ಲೆಡೆ ಸಾರಿತು ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ ವಿಶ್ವನಾಥ್ ಪಿ ಅಭಿಪ್ರಾಯ ಪಟ್ಟರು.












