ಬೆಳ್ತಂಗಡಿ: ಕರ್ನಾಟಕ ಗಮಕ ಕಲಾ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕರ್ನಾಟಕ ಗಮಕ ಕಲಾ ಪರಿಷತ್ತು ಬೆಳ್ತಂಗಡಿ ತಾಲೂಕು ನೇತೃತ್ವದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸೆಕೆಂಡರಿ ಶಾಲೆ, ಉಜಿರೆ ಇವರ ಆಶ್ರಯದಲ್ಲಿ ಜಿಲ್ಲಾ ಗಮಕ ಸಮ್ಮೇಳನವನ್ನು ಅ. 24 ಮತ್ತು ಅ. 25 ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸೆಕೆಂಡರಿ ಶಾಲೆ, ಉಜಿರೆಯಲ್ಲಿ ನಡೆಯಲಿದೆ ಎಂದು ದ. ಕ. ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಪ್ರೊ.ಮಧೂರು ಮೋಹನ ಕಲ್ಲೂರಾಯ ತಿಳಿಸಿದರು.
ಅವರು ಅ.19ರಂದು ಬೆಳ್ತಂಗಡಿ ಪತ್ರಿಕಾ ಭವನ ದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ತಾಲೂಕಿನ ಹಿರಿಯ ಗಮಕಿಗಳಾದ ಗಮಕಿ ಜಯರಾಮ ಕುದ್ರೆತ್ತಾಯರು ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿಕೊಂಡು ಜಿಲ್ಲಾ ಸಮ್ಮೇಳನವನ್ನು ನಡೆಸಿಕೊಡಲಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಮತ್ತು ಹರ್ಷೇಂದ್ರ ಕುಮಾರ್ ಧರ್ಮಸ್ಥಳ, ಕಾರ್ಯದರ್ಶಿಗಳು ಮಂಜುನಾಥೇಶ್ವರ ಎಜುಕೇಶನ್ ಟ್ರಸ್ಟ್ ಇವರ ಮಾರ್ಗದರ್ಶನದೊಂದಿಗೆ ಈಗಾಗಲೇ ಹಲವಾರು ಪೂರ್ವಭಾವಿ ಸಭೆಗಳನ್ನು ಮಾಡಿಕೊಳ್ಳಲಾಗಿದೆ. ಸಮ್ಮೇಳನದ ಯಶಸ್ಸಿಗೆ ಅಗತ್ಯವಿರುವ ಹಲವಾರು ಸಮಿತಿಗಳನ್ನು ರಚಿಸಿ ಸಂಚಾಲಕರು, ಉಪಸಂಚಾಲಕರು ಮತ್ತು ಸದಸ್ಯರುಗಳಿಗೆ ನಿರ್ದಿಷ್ಟ ಜವಾಬ್ದಾರಿಗಳನ್ನು ಹಂಚಲಾಗಿದೆ.
ಅ. 24 ಬೆಳಿಗ್ಗೆ 10 ಗಂಟೆಗೆ ಸಮ್ಮೇಳನದ ಸರ್ವಾಧ್ಯಕ್ಷರನ್ನು ಮೆರವಣಿಗೆಯ ಮೂಲಕ ಕರೆ ತರಲಾಗುವುದು. ಸಮ್ಮೇಳನವನ್ನು ನಂತರ 10:30ಕ್ಕೆ ಜಗದ್ಗುರು ಶಂಕರಾಚಾರ್ಯ ಶ್ರೀ ತೋಟಕಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠ ಕಾಸರಗೋಡಿನ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದೀಪ ಬೆಳಗುವ ಮೂಲಕ ಉದ್ಘಾಟಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಪೂರ್ವಾಧ್ಯಕ್ಷ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು ಇವರು ಸಮ್ಮೇಳನದ ಸ್ಮರಣ ಸಂಚಿಕೆಯಾದ ಗಮಕ ಜನಾರ್ದನವನ್ನು ಅನಾವರಣಗೊಳಿಸಲಿದ್ದಾರೆ. ಕರ್ನಾಟಕ ಕಲಾಶ್ರೀ ಪ್ರೊ ಮಧೂರು ಮೋಹನ ಕಲ್ಲೂರಾಯರ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲಿನ ಅನುವಂಶಿಕ ಅರ್ಚಕ ಲಕ್ಷ್ಮಿನಾರಾಯಣ ದಾಸ ಆಸ್ರಣ್ಣ, ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮೂಡಬಿದ್ರೆ ತಾಲೂಕಿನ ಗಮಕ ಕಲಾ ಪರಿಷತ್ತಿನ ಗೌರವಾಧ್ಯಕ್ಷ ಶ್ರೀಪತಿ ಭಟ್ ಮೂಡಬಿದ್ರೆ, ಕಿನ್ನಿಗೋಳಿಯ ಯುಗಪುರುಷದ ಭುವನಾಭಿರಾಮ ಉಡುಪ, ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಶಶಿಧರ ಜಿ.ಎಸ್. ಮತ್ತು ಎಸ್ ಡಿ ಎಂ ಸೆಕೆಂಡರಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ವಿದ್ಯಾ ಕಿರಣ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಲ್ಕೂರ ಪ್ರತಿಷ್ಠಾನ ಮಂಗಳೂರು ಪ್ರಾಯೋಜಿತ ಪಾವಂಜೆ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಈ ಸಂದರ್ಭದಲ್ಲಿ ನಡೆಯಲಿದೆ. ಗಮಕ ಕ್ಷೇತ್ರಕ್ಕೆ ವಿಶೇಷ ಕೊಡುಗೆಯನ್ನು ನೀಡಿದ ಕೆ ಸುರೇಶ್ ಕುದ್ರೆಂತಾಯ, ಪ್ರೊ. ವೇದವ್ಯಾಸ ರಾಮಕುಂಜ, ಹರಿದಾಸ ತೋನ್ಸೆ ಪುಷ್ಕಳ ಕುಮಾರ್, ಕೆಯ್ಯರು ನಾರಾಯಣ ಭಟ್, ಗಮಕಿ ಶ್ರೀಮತಿ ಸುವರ್ಣ ಕುಮಾರಿ ಕೆ ಆರ್. ಗಮಕಿ ಏ.ಡಿ ಸುರೇಶ್ ಇವರನ್ನು ಪ್ರಶಸ್ತಿಯೊಂದಿಗೆ ಸನ್ಮಾನಿಸಲಾಗುತ್ತದೆ.
ಗೋಷ್ಠಿಗಳು : ಅಳಿವಿನ ಅಂಚಿನಲ್ಲಿರುವ ಗಮಕ ಕಲೆಯನ್ನು ಉಳಿಸಿ ಪೋಷಿಸುವ ಅನಿವಾರ್ಯತೆ ಇದ್ದು, ಯುವ
ಜನತೆಯತ್ತ ಗಮಕ ಎಂಬ ಧೈಯ ವಾಕ್ಯದೊಂದಿಗೆ ಜಿಲ್ಲಾ ಸಮ್ಮೇಳನವನ್ನು ಆಯೋಜಿಸಲಾಗಿದೆ. ಸಮ್ಮೇಳನವು ಶೈಕ್ಷಣಿಕವಾಗಿ ಮಹತ್ವವನ್ನು ಹೊಂದಿದ್ದು ಹಲವಾರು ರಾಜ್ಯ ಮಟ್ಟದ ಗಮಕಿಗಳು ಗೋಷ್ಠಿಗಳಲ್ಲಿ ಪಾಲ್ಗೊಂಡು ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ.
ಸಮ್ಮೇಳನದಲ್ಲಿ ಪ್ರಯೋಗ ಪ್ರಾತ್ಯಕ್ಷಿಕೆ ಮತ್ತು ಪರಾಮರ್ಶೆ ಎಂಬ ತತ್ವದಡಿಯಲ್ಲಿ ಗಮಕವಾಚನ ವೈವಿಧ್ಯ. ಗಮಕ ನೃತ್ಯ ರೂಪಕ, ಯಕ್ಷ ಗಮಕ ಪ್ರಯೋಗ, ಯುವ ಗಮಕ, ಯೋಗ ಗಮಕ, ಮತ್ತು ಗಮಕಾರ್ಥಗಾರಿಕೆ ಎಂಬ ಆರು ಗೋಷ್ಠಿಗಳು ನಡೆಯಲಿವೆ. ಸಂಪನ್ಮೂಲ ವ್ಯಕ್ತಿಗಳಾಗಿ ಗಮಕಿ ಯಜೇಶ ಆಚಾರ್ಯ, ಗಮಕಿ ದಿವಾಕರ ಆಚಾರ್ಯ, ಗಮಕಿ ಜಯಂತಿ ಹೆಬ್ಬಾರ್, ಗಮಕಿ ಮಂಜುಳಾ ಮಂಚಿ, ಗಮಕಿ ಮೇಧ ಅಶೋಕ್, ಕುಮಾರಿ ಶ್ರೀವಿದ್ಯಾ ಐತಾಳ್, ಡಾ. ಶ್ರೀಕೃಷ್ಣ ಭಟ್ ಸುಣ್ಣಂಗುಳಿ, ಕುಮಾರಿ ದರಿತ್ರಿ ಭಿಡೆ, ಕುಮಾರಿ ಹಂಸಿನಿ ಭಿಡೆ, ಡಾ ಸುಬ್ರಹ್ಮಣ್ಯ ಭಟ್ ಪದ್ಯಾಣ, ವಿಜಯಕುಮಾರ್ ಎಂ. ಮಾ. ಸನತ್ ಕುಮಾರ್ ಪದ್ಯಾಣ, ಮಾ. ಕಾರ್ತಿಕೇಯ ಮಯ್ಯ, ಕು. ಸೃಜನ್ಯ ಮತ್ತು ಕು. ನೇತ್ರಾವತಿ, ಕು ದೀಪ್ತಿ ಕುಬಣೂರಾಯ, ಕು ಮಾಯಾಲಕ್ಷ್ಮಿ, ಕು. ಬ್ರಾಹ್ಮ ಎಸ್ ಭಟ್, ಗಮಕಿ ಸುರೇಶ್ ರಾವ್ ಅತ್ತೂರು, ಡಾ. ಮಹಾವೀರ ಜೈನ್, ಗುರುರಾಜ ಭಟ್, ಜಗದೀಶ ಭಟ್, ಡಾ. ಕಾರ್ತಿಕ್ ತಾಮ್ಹನ್ಮರ್, ಗಮಕಿ ಮಧೂರು ವಿಷ್ಣು ಪ್ರಸಾದ ಕಲ್ಲೂರಾಯ , ಸುರೇಶ್ ಕುದ್ರೆಂತಾಯ, ರಾಮಕೃಷ್ಣ ಭಟ್ ಉಜಿರೆ ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಖ್ಯಾತ ಹಿರಿಯ ಕಲಾವಿದರಾದ ಕುಮಾರವ್ಯಾಸ ಪ್ರಶಸ್ತಿ ವಿಜೇತ ಗಮಕಿ ಕರ್ನಾಟಕ ಕಲಾಶ್ರೀ ಶ್ರೀಮತಿ ಗಂಗಮ್ಮ ಕೇಶವಮೂರ್ತಿ, ಸಂತೋಷ್ ಎನ್ ಭಾರದ್ವಾಜ್, ಕರ್ನಾಟಕ ಕಲಾಶ್ರೀ ಗಣೇಶ್ ಉಡುಪ, ಮುನಿರಾಜ ರೆಂಜಾಳ ಇವರ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮಗಳು ನಡೆಯಲಿದೆ. ಚಿತ್ರ ಗಮಕ ಕಾರ್ಯಕ್ರಮದಲ್ಲಿ ಚಿತ್ರಕಲಾಶಿಕ್ಷಕರಾದ ವಿ ಕೆ ವಿಟ್ಲ ಕಲಾವಿದರಾಗಿ ಪಾಲ್ಗೊಳ್ಳಲಿದ್ದಾರೆ. ಗೋಷ್ಠಿಗಳ ಪರಾಮರ್ಶೆಯನ್ನು ರಾಮಕೃಷ್ಣ ಭಟ್ ಚೊಕ್ಕಾಡಿ, ಕೆಯ್ಯರು ನಾರಾಯಣ ಭಟ್, ಡಾ ದಿವಾ ಕೊಕ್ಕಡ, ಪ್ರೊ . ವೇದವ್ಯಾಸ ರಾಮಕುಂಜ, ಡಾ ವಾರಿಜಾ ದೇವಿ ನೀರಬೈಲು, ಡಾ ಪ್ರದೀಪ್ ಆಟಿಕುಕ್ಕೆ ನೆರವೇರಿಸಲಿದ್ದಾರೆ.
ಅ . 25. ಅಪರಾಹ್ನ 3:30ಗೆ ಕರ್ನಾಟಕ ಕಲಾ ಶ್ರೀಮಧೂರು ಮೋಹನ ಕಲ್ಲೂರಾಯರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಕರ್ನಾಟಕ ಗಮಕಲಾಪರಿಷತ್ ಬೆಂಗಳೂರು ಇಲ್ಲಿಯ ನಿಕಟ ಪೂರ್ವ ರಾಜ್ಯ ಕಾರ್ಯದರ್ಶಿಗಳಾದ ಶ್ರೀ ದಕ್ಷಿಣಾಮೂರ್ತಿಯವರು ಸಮಾರೋಪ ಭಾಷಣ ಮಾಡಲಿದ್ದಾರೆ. ಡಿ ಹರ್ಷೇಂದ್ರ ಕುಮಾರ್ ಧರ್ಮಸ್ಥಳ, ಹರೀಶ್ ಕುಮಾರ್ ಮೆಸ್ಕಾಂ ಅಧ್ಯಕ್ಷರು, ಡಾ ಸತೀಶ್ ಚಂದ್ರ ಎಸ್ .ಎಸ್ ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು, ಉಜಿರೆ ಜನಾರ್ಧನ ದೇವಸ್ಥಾನದ ಅನುವಂಶಿಕ ಆಡಳಿತ ಮೊತ್ತೇಸರರಾದ ಶರತ್ ಕೃಷ್ಣ ಪಡುವೆಟ್ನಾಯ, ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಕೆ ಪ್ರತಾಪ್ ಸಿಂಹ ನಾಯಕ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಶ್ರೀನಾಥ್ ಎಂ ಪಿ. ಪಾವಂಜೆ ಹರಿದಾಸ ಲಕ್ಷ್ಮಿ ನಾರ್ಣಪ್ಪಯ್ಯ ಪ್ರತಿಷ್ಠಾನದ ಪ್ರದೀಪ್ ಕುಮಾರ ಕಲ್ಕೂರ, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ.ರಾಜಶ್ರೀ ಬಿ. ಶ್ರೀಶ ಮುಚ್ಚಿನ್ನಾಯ, ಶ್ರೀ ಭುಜಬಲಿ ಮತ್ತಿತರರು ಉಪಸ್ಥಿತರಿರುವರು.
ವಿಶೇಷತೆ:- ಕನ್ನಡ ಕಾವ್ಯ ಪರಂಪರೆಯಲ್ಲಿ ಹಳೆಗನ್ನಡ, ನಡುಗನ್ನಡ ಸಾಹಿತ್ಯವು ಭಾರತೀಯ ಸಾಂಸ್ಕೃತಿಕ ಮತ್ತು
ಜೀವನ ಮೌಲ್ಯಗಳಲ್ಲಿ ವಿಶೇಷ ಸ್ಥಾನ ಹೊಂದಿದೆ. ಇಂತಹ ಮೌಲ್ಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗಮಕ ಕಲೆಯನ್ನು ಪ್ರಚುರಪಡಿಸುವುದು ಮತ್ತು ಶೈಕ್ಷಣಿಕವಾಗಿ ಆಸಕ್ತಿ ಬೆಳೆಸುವುದು, ಯುವ ಜನತೆಯತ್ತ ಗಮಕವನ್ನು ವಿಸ್ತರಿಸುವುದು ಸಮ್ಮೇಳನದ ಉದ್ದೇಶವಾಗಿದೆ. ಇದಕ್ಕಾಗಿ ಉಜಿರೆಯ ಜನತೆ ಸಮ್ಮೇಳನದ ಯಶಸ್ಸಿನಲ್ಲಿ ತೊಡಗಿಕೊಂಡಿದೆ. ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ, ಮಾನ್ಯ ಹಷೇಂ೯ದ್ರ ಕುಮಾರ್ ರವರ ಮಾರ್ಗದರ್ಶನದಲ್ಲಿ ಸಮ್ಮೇಳನದ ರೂಪುರೇಷೆಗಳನ್ನು ಸಿದ್ದಗೊಳಿಸಿದೆ. ಶ್ರೀ ಧ. ಮಂ. ಪ್ರೌಢಶಾಲೆಯ ಶಿಕ್ಷಕ ಸಿಬ್ಬಂದಿಗಳೆಲ್ಲರ ಕ್ರಿಯಾಶೀಲತೆ, ಸಮಿತಿಯ ಸದಸ್ಯರ ತೊಡಗಿಕೊಳ್ಳುವಿಕೆಯಲ್ಲಿ ಒಟ್ಟು ಕಾರ್ಯಕ್ರಮಗಳ ವ್ಯವಸ್ಥೆ ಸಿದ್ಧವಾಗುತ್ತಿದೆ. ಎರಡು ದಿನಗಳಲ್ಲಿ ಸುಮಾರು 1500 ಮಂದಿಯ ನಿರೀಕ್ಷೆಯಲ್ಲಿ ಊಟೋಪಚಾರದ ವ್ಯವಸ್ಥೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಹೆಚ್ಚು ತೊಡಗಿಸಿಕೊಳ್ಳಲು ಶಿಕ್ಷಣ ಇಲಾಖೆಯವರು ಸಹಕಾರ ನೀಡುತ್ತಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಗಮಕ ಕಲಾ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ರಾಮಕೃಷ್ಣ ಭಟ್ ಉಜಿರೆ, ಸಮ್ಮೇಳನ ಸಮಿತಿಯ ಜೊತೆ ಕಾರ್ಯದರ್ಶಿ ರಮೇಶ್ ಮಯ್ಯ, ಖಜಾಂಚಿಯಾದ ಶ್ರೀಮತಿ ಮೇಧಾ ಉಜಿರೆ, ಆರ್ಥಿಕ ಸಮಿತಿಯ ಸಹ ಸಂಚಾಲಕ ಅಶೋಕ ಭಟ್ ಉಜಿರೆ ಉಪಸ್ಥಿತರಿದ್ದರು.












