ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನಲ್ ಸೊಸೈಟಿಯ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಜಿರೆಯ ಎಸ್‌ಡಿಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (SDMIT) ವಿದ್ಯಾರ್ಥಿಗಳ ಪ್ರತಿಭೆ, ಸೃಜನಶೀಲತೆ, ತಾಂತ್ರಿಕ ಕೌಶಲ್ಯ ಹಾಗೂ ಕ್ರೀಡಾಸ್ಫೂರ್ತಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಅ. 29 ಮತ್ತು 30ರಂದು ಎರಡು ದಿನಗಳ ‘SPARDHAM 2026’ ಅಂತರಕಾಲೇಜು ಸ್ಪರ್ಧೋತ್ಸವ ಆಯೋಜಿಸಲಾಗಿದೆ ಎಂದು ಎಸ್.ಡಿ.ಎಮ್. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಂಶುಪಾಲರು ಡಾ| ಸಂದೀಪ್ ಆರ್ ತಿಳಿಸಿದರು.
ಅವರು ಅ.23ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ನಡೆದ ಪ್ರತಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪಿಯುಸಿ, ಡಿಪ್ಲೊಮಾ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಈ ಸ್ಪರ್ಧೋತ್ಸವವು ಯುವಜನರಲ್ಲಿ ವೈಜ್ಞಾನಿಕ ಮನೋಭಾವ, ನವೀನ ಆಲೋಚನೆ, ಉದ್ಯಮಶೀಲತೆ, ನಾಯಕತ್ವ ಗುಣ, ಸಂವಹನ ಕೌಶಲ್ಯ ಹಾಗೂ ತಂಡದೊಂದಿಗೆ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಪಠ್ಯಪುಸ್ತಕದ ಜ್ಞಾನವನ್ನು ಪ್ರಾಯೋಗಿಕ ಅನುಭವದೊಂದಿಗೆ ಬೆಸೆಯುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಈ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು.
ಪಿಯುಸಿ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ರಸಪ್ರಶ್ನೆ, ನವೀನ ಮಾದರಿ ಪ್ರದರ್ಶನ, ಚರ್ಚಾಸ್ಪರ್ಧೆ, ಟ್ರೆಷರ್ ಹಂಟ್, ಐಡಿಯಾಥಾನ್, ಸಾಂಸ್ಕೃತಿಕ ವೈವಿಧ್ಯ ಪ್ರದರ್ಶನ ಹಾಗೂ ಕ್ರಿಕೆಟ್ ಮತ್ತು ಫುಟ್‌ಬಾಲ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಉದ್ಯಮಶೀಲತಾ ಪರಿಕಲ್ಪನೆಗಳ ಪ್ರಸ್ತುತಿ, ರಿವರ್ಸ್ ಪ್ಲೇಸ್‌ಮೆಂಟ್, ಕೇಸ್ ಸ್ಟಡಿ, ಕೃತಕ ಬುದ್ಧಿಮತ್ತೆ ಆಧಾರಿತ ಪ್ರಾಂಪ್ಟ್ ಚಾಲೆಂಜ್, ತಾಂತ್ರಿಕ ಟ್ರೆಷರ್ ಹಂಟ್, ಪ್ರಾಜೆಕ್ಟ್ ಮತ್ತು ನಾವೀನ್ಯತೆ ಪ್ರದರ್ಶನ, ಪ್ರತಿಭಾ ಪ್ರದರ್ಶನ, ಸ್ಪರ್ಧೋತ್ಸವದ ರೀಲ್ ಸ್ಪರ್ಧೆ ಹಾಗೂ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವುದರ ಜೊತೆಗೆ ಹೊಸ ವಿಚಾರಗಳನ್ನು ಕಲಿಯಲು ಮತ್ತು ಇತರ ಸಂಸ್ಥೆಗಳ ವಿದ್ಯಾರ್ಥಿಗಳೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಲು ಉತ್ತಮ ಅವಕಾಶ ಕಲ್ಪಿಸಲಿವೆ ಎಂದರು.
ಸ್ಪರ್ಧೋತ್ಸವದ ವಿಶೇಷ ಆಕರ್ಷಣೆಯಾಗಿ ಅಕ್ಟೋಬರ್ 30ರಂದು ಸಂಜೆ 7 ಗಂಟೆಗೆ ‘ಸ್ಟಾರ್ ನೈಟ್’ ಸೆಲೆಬ್ರಿಟಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ವಿದ್ಯಾರ್ಥಿಗಳು ಹಾಗೂ ಕಾಲೇಜು ಸಮುದಾಯಕ್ಕೆ ಮನರಂಜನೆ ಮತ್ತು ಸಾಂಸ್ಕೃತಿಕ ಸಂಭ್ರಮದ ಅನುಭವ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ.
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ, ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕರು,ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ರಾಜ್ಯಾದ್ಯಂತದ ಪಿಯುಸಿ, ಡಿಪ್ಲೊಮಾ ಹಾಗೂ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಈ ಸ್ಪರ್ಧೋತ್ಸವದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಎಂದು ತಿಳಿಸಿದರು. ದೂರವಾಣಿ ಸಂಖ್ಯೆ 9008359769, 9008490579, 8277401853, 08256-236961 ಸಂಪರ್ಕಿಸಿ ನೋಂದಾವಣೆ ಮತ್ತು ಹೆಚ್ಚಿನ ಮಾಹಿತಿ ಪಡೆಯಬಹುದು ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಉಪಪ್ರಾಂಶುಪಾಲರಾದ ಡಾ. ಗಿರೀಶ್ ಕುಮಾರ್, ಸಂಯೋಜಕಿ ಹಾಗೂ ಗಣಿತ ವಿಭಾಗದ ಮುಖ್ಯಸ್ಥರು ಡಾ. ವಿದ್ಯಾ ಕೆ., ಗಣಿತ ವಿಭಾಗದ ಶೋಭಾ, ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ರವೀಶ್ ಪಡುಮಲೆ ಉಪಸ್ಥಿತರಿದ್ದರು.












