ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ (ರಿ.) ಹಳೆಕೋಟಿ, ಬೆಳ್ತಂಗಡಿ, ವಾಣಿ ಸಹಕಾರ್ಯ ಕೋ-ಆಪರೇಟಿವ್ ಸೊಸೈಟಿ (ನಿ.) ಬೆಳ್ತಂಗಡಿ ಹಾಗೂ ಸ್ಪಂದನಾ ಸೇವಾ ಸಂಘ, ಬೆಳ್ತಂಗಡಿ ಇವರ ಸಹಯೋಗದಲ್ಲಿ, ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ನೇತೃತ್ವದಲ್ಲಿ ಮುಂಬರುವ ನ. 22 ರಂದು ನಡೆಯಲಿರುವ ಬೆಳ್ತಂಗಡಿ ತಾಲೂಕು ಮಟ್ಟದ ‘ಗೌಡರೆ ಗೌಜಿ ಗಮ್ಮತ್ತು’ ತುಳು ಸಾಂಸ್ಕೃತಿಕ ಪರ್ವ-2026 ಕಾರ್ಯಕ್ರಮದ ಪೂರ್ವಭಾವಿಯಾಗಿ ನಾವೂರು ಗ್ರಾಮ ಸಮಿತಿ ಸಭೆಯು ಅತ್ಯಂತ ಉತ್ಸಾಹದಿಂದ ಜರುಗಿತು.

ಈ ಸಭೆಯಲ್ಲಿ ಗ್ರಾಮ ಸಮಿತಿ ಅಧ್ಯಕ್ಷ ಪೂವಪ್ಪ ಗೌಡ ಪುಂಕೇತ್ಯಾರು ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಯುವವೇದಿಕೆ ನಿರ್ದೇಶಕರು ಹಾಗೂ ಗೌರವ ಸಲಹೆಗಾರರಾದ ನವೀನ್ ಬಿ.ಕೆ. ಮತ್ತು ಯುವವೇದಿಕೆ ಸಂಘಟನ ಕಾರ್ಯದರ್ಶಿ ಪ್ರದೀಪ್ ಗೌಡ ನಾಗಾಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾರ್ಗದರ್ಶನ ನೀಡಿದರು.
ಗ್ರಾಮ ಸಮಿತಿ ಕಾರ್ಯದರ್ಶಿ ದಿನೇಶ್ ಗೌಡ ಹಾಗೂ ಗಣೇಶ್ ಗೌಡ ಸಭೆಯ ಕಾರ್ಯಕ್ರಮಗಳ ಕುರಿತು ಮಾಹಿತಿ ಹಂಚಿಕೊಂಡರು. ಸುಧಾ ದಿನೇಶ್ ಸ್ವಾಗತಿಸಿ ಧನ್ಯವಾದವಿತ್ತರು. ಸಭೆಯಲ್ಲಿ ಗ್ರಾಮ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಸುಮಾರು 70 ಕ್ಕೂ ಅಧಿಕ ಸ್ವಜಾತಿ ಬಾಂಧವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ವಿಶೇಷತೆಗಳು:
ಹಳೆಕೋಟೆಯ ಗೌಡರ ಯಾನೆ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಲಿರುವ ಈ ಮಹಾಸಮ್ಮೇಳನದಲ್ಲಿ ಆಕರ್ಷಕ ಪಥಸಂಚಲನ, ತುಳುನಾಡ ಸಾಂಸ್ಕೃತಿಕ ಸ್ಪರ್ಧೆಗಳು, ಹಗ್ಗಜಗ್ಗಾಟ (ಪುರುಷ ಮತ್ತು ಮಹಿಳಾ ವಿಭಾಗ), ವಾಲಿಬಾಲ್ ಮತ್ತು ಥ್ರೋಬಾಲ್ ಸ್ಪರ್ಧೆಗಳು ನಡೆಯಲಿವೆ. ಜೊತೆಗೆ ನಿವೃತ್ತ ಶಿಕ್ಷಕರು, ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿಶೇಷ ಸಾಧನೆಗೈದ ಸಮಾಜ ಬಂಧುಗಳಿಗೆ ಸನ್ಮಾನ ಸಮಾರಂಭವು ಜರುಗಲಿದೆ.













