November 2, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಸ್.ಡಿ.ಎಂ ಕಾಲೇಜು: ಜಿಲ್ಲಾಮಟ್ಟದ ಬಾಲಕ–ಬಾಲಕಿಯರ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ

ಉಜಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಹಾಗೂ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ಬಾಲಕ–ಬಾಲಕಿಯರ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾತನಾಡಿ, ಕ್ರೀಡೆಗಳು ಮಾನವನ ಜೀವನದ ಅವಿಭಾಜ್ಯ ಅಂಗವಾಗಿದ್ದು, ಪ್ರಾಚೀನ ಕಾಲದಿಂದಲೂ ವಿವಿಧ ಚಟುವಟಿಕೆಗಳ ರೂಪದಲ್ಲಿ ಕ್ರೀಡೆಗಳು ಬೆಳೆದು ಬಂದಿವೆ. ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಶಿಸ್ತು, ಸಮರ್ಪಣೆ, ಸೋಲು–ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಮತ್ತು ಜೀವನದ ಹೊಸ ಅನುಭವಗಳನ್ನು ಕಲಿಸುತ್ತವೆ. ಪಠ್ಯೇತರ ಚಟುವಟಿಕೆಗಳಲ್ಲಿ ಕ್ರೀಡೆಗಳಿಗೆ ವಿಶೇಷ ಮಹತ್ವವಿದೆ.

ಹಿಂದಿನ ಕಾಲದಲ್ಲಿ ಕಬಡ್ಡಿ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಪುರುಷರ ಪಾಲ್ಗೊಳ್ಳುವಿಕೆ ಹೆಚ್ಚಾಗಿತ್ತು. ಇಂದು ಬಾಲಕಿಯರೂ ಕ್ರೀಡಾಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವುದು ಸಂತಸದ ಸಂಗತಿ. ಎಸ್‌ಡಿಎಂ ಶಿಕ್ಷಣ ಸಂಸ್ಥೆಯು ಕ್ರೀಡೆಗಳಿಗೆ ಅಗತ್ಯವಾದ ಪ್ರೋತ್ಸಾಹ ಮತ್ತು ಸೌಲಭ್ಯಗಳನ್ನು ನಿರಂತರವಾಗಿ ಒದಗಿಸುತ್ತಿದ್ದು, ಉಚಿತ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳ ಜೊತೆಗೆ ಅಂತರರಾಷ್ಟ್ರೀಯ ಮಟ್ಟದ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದೆ. ಈ ಸೌಲಭ್ಯಗಳು ಸಂಸ್ಥೆಯ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಸ್ಥಳೀಯ ಹಾಗೂ ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳಿಗೂ ಅನುಕೂಲವಾಗಲಿವೆ. ಕ್ರೀಡೆಯಲ್ಲಿ ಸೋಲು ಗೆಲುವಿನ ಜೊತೆಗೆ ಭಾಗವಹಿಸುವುದು ಮುಖ್ಯ. ಪ್ರತಿಯೊಬ್ಬರೂ ಆಸಕ್ತಿಯಿಂದ ಪಾಲ್ಗೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ದಕ್ಷಿಣ ಕನ್ನಡ ಜಿಲ್ಲೆಯ ಉಪನಿರ್ದೇಶಕಿ ರಾಜೇಶ್ವರಿ ಮಾತನಾಡಿ, ಎಸ್‌ಡಿಎಂ ಸಂಸ್ಥೆಯು ನಿರಂತರವಾಗಿ ವಿವಿಧ ಕ್ರೀಡಾ ಕೂಟಗಳನ್ನು ಅಚ್ಚುಕಟ್ಟಾಗಿ ಮತ್ತು ಯಶಸ್ವಿಯಾಗಿ ಆಯೋಜಿಸುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಸದಾ ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಹಲವು ಅವಕಾಶಗಳಿದ್ದು, ಸದುಪಯೋಗಪಡಿಸಿಕೊಳ್ಳಬೇಕು. ಕ್ರೀಡೆಗಳು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತವೆ ಎಂದರು.

ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಅಥ್ಲೆಟಿಕ್ ತರಬೇತುದಾರ ಸೇಸಪ್ಪ ಗೌಡ ಪಂದ್ಯಾಟದಲ್ಲಿ ಭಾಗವಹಿಸಿದ ಎಲ್ಲ ತಂಡಗಳಿಗೂ ಶುಭ ಹಾರೈಸಿದರು. ಜಿಲ್ಲಾ ಕ್ರೀಡಾ ಸಂಯೋಜಕ ಹಾಗೂ ಎಡಪದವು ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಪ್ರೇಮನಾಥ ಶೆಟ್ಟಿ ಮಾತನಾಡಿ, ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ತಂಡದ ಮನೋಭಾವವನ್ನು ಬೆಳೆಸುತ್ತವೆ. ಈ ಕಾರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯು ಕಳೆದ ಬಾರಿ ರಾಜ್ಯಮಟ್ಟದಲ್ಲಿ 16 ಕ್ರೀಡೆಗಳಲ್ಲಿ ಜಯ ಸಾಧಿಸಿರುವುದು ಕ್ರೀಡಾ ಸಾಧನೆಯ ಮಹತ್ವವನ್ನು ತೋರಿಸುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ. ಮಾತನಾಡಿ, ಎಸ್‌ಡಿಎಂ ಶಿಕ್ಷಣ ಸಂಸ್ಥೆಯು ಶಿಕ್ಷಣದ ಜೊತೆಗೆ ಕ್ರೀಡೆಗಳಿಗೂ ವಿಶೇಷ ಆದ್ಯತೆ ನೀಡುತ್ತಾ ಬಂದಿದೆ. ಸಂಸ್ಥೆಯ ವಿದ್ಯಾರ್ಥಿಗಳು ವಿವಿಧ ಕ್ರೀಡಾಕೂಟಗಳಲ್ಲಿ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿದ್ದು, ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಕ್ರೀಡಾಪಟುಗಳ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಅಗತ್ಯ ತರಬೇತಿ, ಸೌಲಭ್ಯ ಮತ್ತು ಪ್ರೋತ್ಸಾಹ ನೀಡುವ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಲು ಸಂಸ್ಥೆ ನಿರಂತರವಾಗಿ ಸಹಕರಿಸುತ್ತಿದೆ. ವಿದ್ಯಾರ್ಥಿಗಳು ಕ್ರೀಡೆಯನ್ನು ಕೇವಲ ಸ್ಪರ್ಧೆಯಾಗಿ ಪರಿಗಣಿಸದೆ, ಶಿಸ್ತು, ಪರಿಶ್ರಮ, ತಂಡದ ಒಗ್ಗಟ್ಟು ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವ ಅವಕಾಶವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪದವಿಪೂರ್ವ ಕಾಲೇಜು ಹಾಗೂ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ವತಿಯಿಂದ ಮುಖ್ಯ ಅತಿಥಿ ರಾಜೇಶ್ವರಿ, ಸೇಸಪ್ಪ ಗೌಡ ಹಾಗೂ ಲಕ್ಷ್ಮಣ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ರಾಜೇಶ್ , ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಎಚ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.‌ ಈ ಸಂದರ್ಭದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ದೈಹಿಕ ಶಿಕ್ಷಣ ನಿರ್ದೇಶಕರು ಸೇರಿದಂತೆ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಕಾಲೇಜಿನ ಉಪನ್ಯಾಸಕಿ ಸುಪ್ರೀತಾ ಪಡಿವಾಳ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಸ್ಮಿತಾ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸಂದೇಶ್ ಪೂಂಜಾ ವಂದಿಸಿದರು.
ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ಕೃಷ್ಣಾನಂದ ರಾವ್, ಶಾರದಾ, ಸುದೀನ್ ಪುಜಾರಿ, ಸಂದೇಶ್ ಪೂಂಜಾ ಮತ್ತು ಜಶ್ವಂತ್ ಗೌಡ ಸಹಕರಿಸಿದರು.

Related posts

ಕಲ್ಮಂಜ: ಡಾ| ಉದಯ ಹೆಬ್ಬಾರ್ ನಿಧನ

Suddi Udaya

ಬಳಂಜ: ವೇಣೂರು ಆರಕ್ಷಕ ಠಾಣೆಯ ವತಿಯಿಂದ ಬೀಟ್ ಪೋಲೀಸ್ ಪಂಪಾಪತಿಯವರಿಂದ ಸಾರ್ವಜನಿಕರಿಗೆ ಸೈಬರ್ ಕ್ರೈಂ ,ಸಂಚಾರ ನಿಯಮ ಪಾಲನೆ ಹಾಗೂ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಮಾಹಿತಿ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ದ್ವಿತೀಯ ಪಿಯುಸಿ ಸಾಧಕ ರಾಮಕೃಷ್ಣ ಶರ್ಮಾರಿಗೆ ಗೌರವ

Suddi Udaya

ನಿವೃತ್ತ ಬ್ಯಾಂಕ್ ಉದ್ಯೋಗಿ‌ ಅಮ್ಮು ಕುಮಾರ್ ಹೃದಯಾಘಾತದಿಂದ ನಿಧನ

Suddi Udaya

ಕಸ್ತೂರಿ ರಂಗನ್ ವರದಿ ವಿರುದ್ಧ ಪ್ರತಿಭಟನೆಗೆ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಸಂಪೂರ್ಣ ಬೆಂಬಲ

Suddi Udaya

ಬೆಳ್ತಂಗಡಿ : ಧನು ಪೂಜೆಗೆ ಹೋದ ಬಾಲಕನ ಶವ ಕೆರೆಯಲ್ಲಿ ಪತ್ತೆ ಪ್ರಕರಣ: ಪೊಲೀಸರಿಂದ ತೀವ್ರಗೊಂಡ ಶೋಧ ಕಾರ್ಯ

Suddi Udaya
error: Content is protected !!