November 13, 2026
ಪ್ರಮುಖ ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳ: ಶ್ರೀರಾಮ ಕ್ಷೇತ್ರದಲ್ಲಿ ಯಕ್ಷ ಸಂಭ್ರಮ ಸಮಾರೋಪ-ಕನ್ಯಾಡಿ ಶ್ರೀಗಳ ಯಕ್ಷಾರಾಧನೆ ಸಮಾಜಕ್ಕೆ ಮಾದರಿ : ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು

ಧರ್ಮಸ್ಥಳ: ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಪೀಠಾಧಿಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ತಮ್ಮ ಚಾತುರ್ಮಾಸ್ಯದ ಸಂದರ್ಭದಲ್ಲಿ ಪ್ರತೀ ದಿನವೂ ಯಕ್ಷಗಾನವನ್ನು ಏರ್ಪಡಿಸುತ್ತಿರುವುದಲ್ಲದೇ, ಶ್ರೀ ಕ್ಷೇತ್ರದಲ್ಲಿಯೂ ಯಕ್ಷಗಾನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ವತಿಯಿಂದ ಬೆಳ್ತಂಗಡಿ ಧರ್ಮಸ್ಥಳದ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಆಶ್ರಯದಲ್ಲಿ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಹಮ್ಮಿಕೊಂಡ “ಯಕ್ಷ ಸಂಭ್ರಮ -2026” ಕಾರ್ಯಕ್ರಮದ ಸಮಾರೋಪದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದರು.

ಇಂದು ಯಕ್ಷಗಾನ ಪ್ರಬುದ್ಧ ಕಲೆಯಾಗಿ ರಾಜ್ಯ ಕಲೆಯಾಗುವ ಎಲ್ಲಾ ಅರ್ಹತೆಯನ್ನು ಪಡೆದಿದೆ. ಕರಾವಳಿ ಜಿಲ್ಲೆಗಳಲ್ಲಿ ದಿನಂಪ್ರತಿ ಹಲವಾರು ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನ ನಡೆದೇ ನಡೆಯುತ್ತದೆ. ಮಳೆಗಾಲದಲ್ಲಿಯೂ ಯಕ್ಷ ಕಲಾವಿದರಿಗೆ ವಿಫುಲ ಅವಕಾಶಗಳು ಸಿಗುತ್ತಿವೆ. ಈ ಕಲೆ ಇಂದು ಕೇವಲ ಪ್ರದರ್ಶನ ಕಲೆಯಾಗಿ ಉಳಿದಿಲ್ಲ, ಬದಲಿಗೆ ತನಗೆ ಸಮರ್ಪಿಸಿಕೊಂಡ ಕಲಾವಿದರು, ಕಲಾ ಸಂಘಟಕರು, ಯಕ್ಷ ಪ್ರೇಮಿಗಳು ಸೇರಿದಂತೆ ಪ್ರತೀಯೊಬ್ಬರ ಬದುಕಿಗೆ ಆಸರೆಯಾಗಿದೆ. ಈ ಕಲೆ ಸಮೃದ್ಧಿಯಿಂದ ಬಾಳಬೇಕು ಎನ್ನುವ ಉದ್ದೇಶದಿಂದ ರಾಜ್ಯ ಕಲೆಯ ಸ್ಥಾನ ಮಾನ ನೀಡಬೇಕು ಎಂದು ಅಕಾಡೆಮಿ ಅಧ್ಯಕ್ಷನಾಗಿ ರಾಜ್ಯದ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದೇನೆ. ಇದಕ್ಕೆ ಕಲಾಭಿಮಾನಿಗಳು ಧ್ವನಿಗೂಡಿಸಬೇಕು ಎಂದು ಅವರು ಮನವಿ ಮಾಡಿದರು.

ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಪೀಠಾಧಿಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಅಂತರಾಳದ ಸಂತೋಷವನ್ನು ಪಡೆಯಲು ನಾವು ಧರ್ಮವನ್ನು ಅನುಸರಿಸಬೇಕು. ಅಂತಹ ಧರ್ಮವನ್ನು ಪಾಲನೆ ಮಾಡಲು ನಮಗೆ ನೆರವಾಗುವುದು ಈ ಯಕ್ಷಗಾನ ಎಂಬ ಕಲೆ. ಧರ್ಮವನ್ನು ನಾವು ಹೇಗೆ ಅನುಸರಿಸಬೇಕು ಎಂಬುದಕ್ಕೆ ಯಕ್ಷಗಾನದ ದಿಗ್ಗಜರು ಪ್ರಸಂಗದ ಮೂಲಕ ತೋರಿಸಿಕೊಟ್ಟಿದ್ದಾರೆ. ಮೌಲ್ಯಾಧಾರಿತ ಸಮಾಜವನ್ನು ನಿರ್ಮಿಸುವುದು ಇಂದಿನ ಶಿಕ್ಷಣ ಪದ್ಧತಿಯಲ್ಲಿ ಸಾಧ್ಯವೇ ಎಂಬುದನ್ನು ನಮ್ಮನ್ನಾಳುವ ಸರಕಾರದ ಮಂದಿಯಲ್ಲಿ ಕೇಳುತ್ತಿದ್ದೇನೆ. ಪಕ್ಷ, ಜಾತಿ ಭೇದ ಮರೆತು ನಾವೆಲ್ಲಾ ಒಂದಾಗಬೇಕು. ಇದಕ್ಕೆ ನಾವು ಯುವ ಪೀಳಿಗೆಗೆ ಸಂಸ್ಕಾರ ಕೊಡಬೇಕು. ಇದಕ್ಕೆ ಪೂರಕವಾಗಿ ಯಕ್ಷಗಾನ ಪ್ರಸಂಗಗಳು ಹುಟ್ಟಿಬರಬೇಕೇ ಹೊರತು ಕೇವಲ ಮನೋರಂಜನೆಗಾಗಿ ಅಲ್ಲ ಎಂಬುದನ್ನು ನಾವು ಅರಿಯಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಸುವರ್ಣ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ.ಸುವರ್ಣ, ಗುರುವಾಯನಕೆರೆ ಎಕ್ಸೆಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಉದ್ಯಮಿ ಪ್ರವೀಣ್ ಫೆರ್ನಾಂಡಿಸ್, ಬೆಳ್ತಂಗಡಿ ನವಜ್ಞಾನ ಸುಧಾ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ನಾಗೇಶ್ ಗೌಡ, ಉಡುಪಿಯ ಖ್ಯಾತ ಸಂಗೀತ ವಿದ್ವಾನ್ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ, ಯಕ್ಷಗಾನ ಅಕಾಡೆಮಿ ಸದಸ್ಯರಾದ ರಾಘವ ಎಚ್. ಗೇರುಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬೆಳಾಲು ಧರ್ಣಪ್ಪ ನಾಯಕ್ ಅವರ ಸಂಸ್ಮರಣೆ ನಡೆಯಿತು. ಅಕಾಡೆಮಿ ಸದಸ್ಯ ದಯಾನಂದ ಪಿ. ಬೆಳಾಲು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು. ಯಕ್ಷ ಸಂಭ್ರಮ ಕಾರ್ಯಕ್ರಮದಲ್ಲಿ ಯಕ್ಷಗಾನ ತಾಳಮದ್ದಲೆ ಹಾಗೂ ಯಕ್ಷಗಾನ ಬಯಲಾಟ ನಡೆಯಿತು.

Related posts

ಉಜಿರೆ ಎಸ್ ಡಿ ಎಂ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಸಿಂಪನ ರಾಷ್ಟ್ರಮಟ್ಟದ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಆಯ್ಕೆ

Suddi Udaya

ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಎಸ್‌.ಡಿ.ಎಂ ಕಾಲೇಜಿನ ಕ್ರೀಡಾಪಟುಗಳ ಅಮೋಘ ಸಾಧನೆ

Suddi Udaya

ಆರ್ಥಿಕ ಇಲಾಖೆಯ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಹೊರಸಂಪನ್ಮೂಲ ನೌಕರರಿಂದ ರಕ್ಷಿತ್ ಶಿವರಾಂ ರವರಿಗೆ ಮನವಿ

Suddi Udaya

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಪ್ರಯುಕ್ತ ಅ.17ರಂದು ವಿದ್ಯುತ್ ನಿಲುಗಡೆ

Suddi Udaya

ಮುಂಡಾಜೆ ಕಾಲೇಜಿನ ಎನ್ ಎಸ್ ಎಸ್ ಶಿಬಿರ ಉದ್ಘಾಟನೆ

Suddi Udaya

ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಆರ್ಥಿಕ ಸಹಾಯಧನ

Suddi Udaya
error: Content is protected !!