November 21, 2026
Uncategorizedಪ್ರತಿಭಟನೆಪ್ರಮುಖ ಸುದ್ದಿಬೆಳ್ತಂಗಡಿ

ನಾರಾವಿ: ಕಾಂಗ್ರೆಸ್ ಸರ್ಕಾರದ ವೈಫಲ್ಯ, ಬೆಲೆ ಏರಿಕೆ ವಿರುದ್ಧ ಬಿಜೆಪಿ ಜನಾಂದೋಲನ- ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಮೋಸ, ರೈತರ ಬೆಳೆವಿಮೆ ಹಣಕ್ಕೂ ಕತ್ತರಿ: ಶಾಸಕ ಹರೀಶ್ ಪೂಂಜ

ನಾರಾವಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ, ಬೆಲೆ ಏರಿಕೆ ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಬಿಜೆಪಿ ಬೆಳ್ತಂಗಡಿ ಮಂಡಲದ ನೇತೃತ್ವದಲ್ಲಿ ನಾರಾವಿ ಮತ್ತು ಕುತ್ಲೂರು ಶಕ್ತಿ ಕೇಂದ್ರಗಳ ವತಿಯಿಂದ ನ.18ರಂದು ನಾರಾವಿ ಪೇಟೆಯಲ್ಲಿ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜ’ ಧ್ಯೇಯದಡಿ ಬೃಹತ್ ಪಾದಯಾತ್ರೆ ಹಾಗೂ ಪ್ರತಿಭಟನಾ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಶಾಸಕ ಹರೀಶ್ ಪೂಂಜ ಅವರು, ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದರೂ ಅವುಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ವಿಫಲವಾಗಿದೆ. ಗೃಹಲಕ್ಷ್ಮಿ ಹಣಕ್ಕಾಗಿ ರೈತರ ಬೆಳೆವಿಮೆ ಯೋಜನೆಯ ಹಣಕ್ಕೆ ಕತ್ತರಿ ಹಾಕಲಾಗಿದೆ. ಬಸ್ ಪ್ರಯಾಣ ದರ, ಹಾಲಿನ ದರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ. ವೃದ್ಧಾಪ್ಯ ಹಾಗೂ ವಿಧವಾ ವೇತನಗಳನ್ನು ಸ್ಥಗಿತಗೊಳಿಸಲಾಗಿದೆ. ರಾಜ್ಯದ ಹಣ ಎಲ್ಲಿ ಹೋಗುತ್ತಿದೆ ಎಂಬುದನ್ನು ಜನರು ಚುನಾವಣೆಯ ಸಂದರ್ಭದಲ್ಲಿ ಮನೆಬಾಗಿಲಿಗೆ ಬರುವ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ದಿಕ್ಸೂಚಿ ಭಾಷಣ ಮಾಡಿದ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ಹಾಗೂ ರೈತ ನಾಯಕ ಶಾಂತಿಪ್ರಸಾದ್ ಹೆಗ್ಡೆ ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಮತ್ತು ಜನವಿರೋಧಿ ನೀತಿಗಳನ್ನು ಎಳೆಎಳೆಯಾಗಿ ವಿವರಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಬಿಜೆಪಿ ಸರ್ಕಾರದ ಜನಪರ ಹಾಗೂ ಅಭಿವೃದ್ಧಿಪರ ಯೋಜನೆಗಳನ್ನು ವಿವರಿಸಿ, ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯವನ್ನು ಖಂಡಿಸಿದರು.

ಈ ಸಂದರ್ಭದಲ್ಲಿ ಮಂಗಳೂರು ವಿಭಾಗ ಸಂಘಟನಾ ಸಹ ಪ್ರಭಾರಿ ಜಯಂತ್ ಕೋಟ್ಯಾನ್, ಬಿಜೆಪಿ ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ ಪಾರಂಕಿ, ಮಂಡಲ ಉಪಾಧ್ಯಕ್ಷ ಮೋಹನ್ ಅಂಡಿಂಜೆ, ಮಂಡಲ ಕಾರ್ಯದರ್ಶಿ ಸುಂದರ ಹೆಗ್ಡೆ, ಬಿಜೆಪಿ ಯುವ ಮೋರ್ಚಾ ಮಂಡಲ ಕಾರ್ಯದರ್ಶಿ ವಿನೀತ್ ಕೋಟ್ಯಾನ್ ಸಾವ್ಯ, ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಭಂಡಾರಿ, ಉಪಾಧ್ಯಕ್ಷ ಜಗದೀಶ್ ಹೆಗ್ಡೆ, ನಾರಾವಿ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ರಾಜವರ್ಮ ಜೈನ್, ಉಪಾಧ್ಯಕ್ಷೆ ಸುಮಿತ್ರ, ನಾರಾವಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ದಯಾನಂದ ಪೂಜಾರಿ, ಕುತ್ಲೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷೆ ರಾಜಶ್ರೀ, ಕಾಮಧೇನು ಡೈರಿ ಫಾರ್ಮ್ ಮಾಲಕ ಚಂದ್ರಶೇಖರ್ ಶೆಟ್ಟಿ ಉಪಸ್ಥಿತರಿದ್ದರು. ಪಕ್ಷದ ಪ್ರಮುಖ ಪದಾಧಿಕಾರಿಗಳು, ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು, ಹಾಲು ಉತ್ಪಾದಕರ ಸಹಕಾರಿ ಸಂಘಗಳ ನಿರ್ದೇಶಕರು, ಮಾಜಿ ಗ್ರಾಮ ಪಂಚಾಯತ್ ಸದಸ್ಯರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಉದಯ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಮಹಾಶಕ್ತಿ ಕೇಂದ್ರ ನಾರಾವಿ ಪ್ರಧಾನ ಕಾರ್ಯದರ್ಶಿ ಅಭಿಜಿತ್ ಜೈನ್ ಸ್ವಾಗತಿಸಿದರು. ಮಹಾಶಕ್ತಿ ತಂಡದ ಸದಸ್ಯ ರವೀಶ್ ಕುತ್ಲೂರು ವಂದೇ ಮಾತರಂ ಹಾಡಿದರು. ವಸಂತ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಬೂತ್ ಸಮಿತಿ ಪ್ರಮುಖ್ ಸದಾನಂದ ಬಂಗೇರ ಧನ್ಯವಾದಗೈದರು.

Related posts

ಈದ್ ಹಬ್ಬದ ಪ್ರಯುಕ್ತ ಅಪ್ಸರಾ ಫ್ಯಾಶನ್ ಸೆಂಟರ್ ಹಾಗೂ ಮಿಷ್‌ಮಷ್ ಫ್ಯಾನ್ಸಿ & ಗಿಫ್ಟ್ ಸೆಂಟರಿನಲ್ಲಿ ಶೇ.20 ಡಿಸ್ಕೌಂಟ್ ಸೇಲ್: ಶಾಲಾ ಮಕ್ಕಳ ಬುಕ್ಸ್, ಬ್ಯಾಗ್‌ಗಳು, ಕೊಡೆ, ಸ್ಟೇಷನರಿ ವಸ್ತುಗಳು ರಿಯಾಯಿತಿ ದರದಲ್ಲಿ ಲಭ್ಯ

Suddi Udaya

ಉಜಿರೆಯ ಅಂಗಡಿ ಪಕ್ಕದಲ್ಲಿ ನಿಲ್ಲಿಸಿದ್ದ ರೂ. 6.50 ಲಕ್ಷ ಮೌಲ್ಯದ ಕಾರು ಕಳವು

Suddi Udaya

ಎಸ್ ಡಿ ಎಮ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ

Suddi Udaya

ಗ್ಯಾರಂಟಿಗಳ ತೊಳಲಾಟಗಳಲ್ಲೇ ಮುಳುಗಿರುವ ರಾಜ್ಯದಲ್ಲಿ ಅಧಿಕಾರವಿರುವ ಕಾಂಗ್ರೇಸ್‌ ಸರಕಾರ ರಾಜ್ಯದ ರೈತರನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದೆ : ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್

Suddi Udaya

ಆ.15ರಿಂದ ಶೃಂಗೇರಿಯ ಶಾರದಾಂಬೆ ದರ್ಶನಕ್ಕೆ ‘ವಸ್ತ್ರ ಸಂಹಿತೆ’ ಜಾರಿ!

Suddi Udaya

ಮೇಲಂತಬೆಟ್ಟು: ಶ್ರೀ ಮಂಜುನಾಥೇಶ್ವರ ಭಜನಾ ಮಂದಿರದಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya
error: Content is protected !!