ಉಜಿರೆ: ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ, ಉಜಿರೆ (ರಾಜ್ಯ ಪಠ್ಯಕ್ರಮ)ದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನಾಚರಣೆಯನ್ನು ಗೌರವಪೂರ್ವಕವಾಗಿ ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನದ ಕಚೇರಿಯ ಐ.ಟಿ. ವಿಭಾಗದ ವ್ಯವಸ್ಥಾಪಕರಾದ ಡಿ. ಮಲ್ಲಿನಾಥ್ ಮಾತನಾಡಿ. ಹೆಗ್ಗಡೆಯವರ ಸಮಾಜಮುಖಿ ಕಾರ್ಯಗಳು, ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆ ಹಾಗೂ ಅವರ ಸೇವಾ ಮನೋಭಾವ ಮತ್ತು ಜೀವನ ಮೌಲ್ಯಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮವನ್ನು ಸ್ಪೂರ್ತಿ ನಿರೂಪಿಸಿದರು. ಅಕ್ಷರ ಹಳೆಮನೆ ಸ್ವಾಗತಿಸಿ. ಸಪ್ತಮಿ ಮುಖ್ಯ ಅತಿಥಿಗಳ ಪರಿಚಯವನ್ನು ಮಾಡಿಕೊಟ್ಟರು. ವಿದ್ಯಾರ್ಥಿ ತನ್ಮಯ್ ಕೃಷ್ಣ ವಂದನಾರ್ಪಣೆ ಸಲ್ಲಿಸಿದರು.
ಹೆಗ್ಗಡೆಯವರ ಜನ್ಮದಿನಾಚರಣೆಯ ಅಂಗವಾಗಿ ಶಾಲೆಯಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು .ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳಾದ ಡಿ. ಮಲ್ಲಿನಾಥ್ ಅವರು ಬಹುಮಾನಗಳನ್ನು ವಿತರಿಸಿ ಅಭಿನಂದಿಸಿದರು.ಇದರೊಂದಿಗೆ ಶಾಲಾ ಆವರಣದಲ್ಲಿ ವಿವಿಧ ಭಿತ್ತಿಪತ್ರಿಕೆಗಳನ್ನು ಪ್ರದರ್ಶಿಸಲಾಯಿತು. ಅವುಗಳಲ್ಲಿ ಪೂಜ್ಯ ಹೆಗ್ಗಡೆಯವರ ಜೀವನ ಮೌಲ್ಯಗಳು, ಸಮಾಜಸೇವೆ, ಶಿಕ್ಷಣ, ಆರೋಗ್ಯ, ಗ್ರಾಮಾಭಿವೃದ್ಧಿ ಹಾಗೂ ಅವರು ಕೈಗೊಂಡಿರುವ ವಿವಿಧ ಜನಪರ ಸೇವಾ ಕಾರ್ಯಗಳ ಕುರಿತಾದ ಮಾಹಿತಿಗಳನ್ನು ಆಕರ್ಷಕವಾಗಿ ಪ್ರಸ್ತುತಪಡಿಸಲಾಯಿತು. ಪೋಷಕರಿಗೆ ಕವನ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.













