ಮಂಗಳೂರು: ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ತಾಂತ್ರಿಕ ವಿಭಾಗದ ಸಹಾಯಕ ಎಂಜಿನಿಯರ್ ರೂಪಾ ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರ ಕೈಗೆ ಫೆ. 21ರಂದು ಸಿಕ್ಕಿಬಿದ್ದ ಘಟನೆ ನಡೆದಿದೆ.
ಬೆಳ್ತಂಗಡಿ ತಾಲ್ಲೂಕಿನ ಪರಿಶಿಷ್ಟ ಜಾತಿಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದ ಸಭಾಂಗಣ ನಿರ್ಮಾಣ ಕಾಮಗಾರಿಯೊಂದರ ಅಂತಿಮ ಬಿಲ್ ಪಾವತಿಗೆ ಸಂಬಂಧಿಸಿದ ಕಡತಕ್ಕೆ ಸಹಿ ಹಾಕಲು ರೂಪಾ 10 ಸಾವಿರ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಬೆಳ್ತಂಗಡಿ ತಾಲ್ಲೂಕಿನ ಗುರಿಪಲ್ಲದ ಕನ್ಯಾಡಿ ಗ್ರಾಮದ ಗುತ್ತಿಗೆದಾರರೊಬ್ಬರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
‘ದೂರುದಾರರು 2 ಸಾವಿರವನ್ನು ರೂಪಾ ಅವರಿಗೆ ಮೊದಲೇ ನೀಡಿದ್ದರು. ರೂಪಾ ಅವರು ಫೆ.19ರಂದು ಸೋಮವಾರ ದೂರುದಾರರಿಂದ 8 ಸಾವಿರ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ. ಅವರನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಂಡಿದ್ದೇವೆ’ ಎಂದು ಮಂಗಳೂರು ವಿಭಾಗದ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಸಿ.ಎ.ಸೈಮನ್ ಮಾಹಿತಿ ನೀಡಿದಾರೆ.
ಲೋಕಾಯುಕ್ತ ಪೊಲೀಸ್ ಡಿವೈಎಸ್‌ಪಿಗಳಾದ ಕಲಾವತಿ ಕೆ., ಚಲುವರಾಜು ಬಿ., ಇನ್‌ಸ್ಪೆಕ್ಟರ್ ಅಮಾನುಲ್ಲ ಎ. ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.