ಉಜಿರೆ: ಶ್ರೀ ಧ. ಮಂ. ಅ. ಹಿ. ಪ್ರಾ. ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಉಜಿರೆ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂಬತ್ತನೇ ವರ್ಷದ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಿದರು. ಎಸ್‌ಡಿಎಂ ಯೋಗ ವಿಜ್ಞಾನ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಸಹಾಯಕ ಪ್ರೊ| ಶ್ರೀಮತಿ ವರ್ಷಿಣಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಯೋಗಗೀತೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮತ್ತು ಸೂರ್ಯ ನಮಸ್ಕಾರ ಕುರಿತ ಬಿತ್ತಿ ಪತ್ರ ಬಿಡುಗಡೆಗೊಳಿಸುವುದರ ಮೂಲಕ ಉದ್ಘಾಟಿಸಲಾಯಿತು.

ವರ್ಷಿಣಿ ಅವರು ತಮ್ಮ ಉದ್ಘಾಟನ ನುಡಿಗಳಲ್ಲಿ ‘ ಯೋಗವು ದೇಹ ಮತ್ತು ಮನಸ್ಸನ್ನು ಸಂಪರ್ಕಿಸುವ ಸಾಧನ. ಯೋಗವು ಪರಸ್ಪರರನ್ನು ಬೆಸೆಯುವಲ್ಲಿ ಸಹಕರಿಸುತ್ತದೆ, ಅದು ಪರಸ್ಪರರಲ್ಲಿನ ಗೊಂದಲಗಳನ್ನು ದೂರ ಮಾಡಿ ವಸುದೈವ ಕುಟುಂಬಕಂ ತತ್ವವನ್ನು ಅನುಷ್ಠಾನಗೊಳ್ಳುವಂತೆ ಮಾಡುತ್ತದೆ’ ಎಂದು ಹೇಳಿದರು.

ಮನಸ್ಸಿನ ಕಲ್ಮಶಗಳನ್ನು ದೂರಗೊಳಿಸಿ ನಡತೆಯನ್ನು ಉತ್ತಮಗೊಳಿಸುವಲ್ಲಿ ಯೋಗವು ತುಂಬಾ ಸಹಕಾರಿ ಎಂದು ಯೋಗದ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು.

ಹತ್ತು ದಿನಗಳವರೆಗೆ ಯೋಗ ತರಬೇತಿ ನೀಡಿದ ಎಸ್‌ಡಿಎಂ ಯೋಗ ವಿಜ್ಞಾನ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ವಿದ್ಯಾರ್ಥಿಗಳಾದ ಕುಮಾರಿ ಅಶ್ವಿತಾ ಮತ್ತು ಕುಮಾರಿ ಪ್ರಾರ್ಥನಾ ಅವರಿಗೆ ಶಾಲಾ ಮುಖ್ಯ ಶಿಕ್ಷಕರು ಸ್ಮರಣಿಕೆ ನೀಡಿ ಗೌರವಿಸಿದರು. ಸಹ ಶಿಕ್ಷಕಿ ಕಾವ್ಯ ಸ್ವಾಗತಿಸಿದರು, ಸಹ ಶಿಕ್ಷಕಿ ಶ್ರೀಮತಿ ಜ್ಯೋತಿ ಧನ್ಯವಾದ ಸಮರ್ಪಿಸಿದರು, ಸಹಶಿಕ್ಷಕಿ ಶ್ರೀಮತಿ ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಗಿರೀಶ್ ಅವರ ಮುಂದಾಳುತ್ವದಲ್ಲಿ ಜರುಗಿದ ಈ ಕಾರ್ಯಕ್ರಮಕ್ಕೆ ಎಲ್ಲಾ ಶಿಕ್ಷಕರು ಸಹಕರಿಸಿದರು. ಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ಜರುಗಿತು.

Leave a Comment

error: Content is protected !!