ಬೆಳ್ತಂಗಡಿ: ರಾಜ್ಯ ಸರಕಾರ ದ.ಕ.ಜಿಲ್ಲೆಯ ಕಡಲ ತೀರದ ಕೊರೆತವನ್ನು ತಡೆಗಟ್ಟಲು 2012 ರಿಂದ 2018 ರವರೆಗೆ ಸುಮಾರು ರೂ. 3೦೦ ಕೋಟಿಯಷ್ಟು ವೆಚ್ಚ ಮಾಡಿದ್ದರೂ ಅಲ್ಲಿನ ಸಮಸ್ಯೆ ಹಾಗೆಯೇ ಇದ್ದು ಯಾವುದೇ ಪರಿಹಾರ ಸಿಕ್ಕಿಲ್ಲ. ಮಂಗಳೂರು ವಿಧಾನ ಸಭಾ ಕ್ಷೇತ್ರದ ಉಳ್ಳಾಲ ಸಮುದ್ರ ತೀರದ ಕೆಲವು ಪ್ರದೇಶಗಳು ಅಪಾಯದಂಚಿನಲ್ಲಿದ್ದು ಅಲ್ಲಿನ ನಿವಾಸಿಗಳ ಜೀವಭಯದಿಂದ ಒದ್ದಾಡುತ್ತಿದ್ದಾರೆ. ಸರಕಾರದ ಮಂತ್ರಿಗಳಿಗೆ, ಅಧಿಕಾರಿಗಳಿಗೆ ಅದೊಂದು ವಿಸಿಟಿಂಗ್ ಸ್ಪಾಟ್ ಆಗಿದೆ. ಇದಕ್ಕೆ ಶಾಶ್ವತ ಪರಿಹಾರ ಸಿಗಲೇಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಆಗ್ರಹಿಸಿದ್ದಾರೆ. ಅವರು ವಿಧಾನಪರಿಷತ್ತಿನಲ್ಲಿ ಜು. ೫ ರಂದು ರಾಜ್ಯದ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರ ಮಂಕಾಳ ವೈದ್ಯ ಅವರಿಗೆ ಚುಕ್ಕೆ ಗುರುತಿನ ಪ್ರಶ್ನೆಯಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ, ಸೋಮೇಶ್ವರ ಉಚ್ಛಿಲ-ಬಟ್ಟಪಾಡಿ ಇತ್ಯಾದಿ ಸಮುದ್ರ ತೀರದಲ್ಲಿ ಭೀಕರ ಸಮುದ್ರ ಕೊರೆತದಿಂದ ಅಪಾರ ಹಾನಿ ಸಂಭವಿಸುತ್ತಿದ್ದು, ಸತತ ಕಡಲ್ಕೊರೆತದಿಂದ ಉಂಟಾಗಬಹುದಾದ ಸಂಭಾವ್ಯ ಅನಾಹುತಗಳನ್ನು ತಡೆಗಟ್ಟಲು ಸರಕಾರ ಕೈಗೊಂಡಿರುವ ಮುಂಜಾಗ್ರತಾ ಸುರಕ್ಷತಾ ಕ್ರಮಗಳೇನು. ಕೊರೆತ ಸಂಭವಿಸಿದ ಪ್ರದೇಶಗಳಲ್ಲಿ ಯಾವೆಲ್ಲ ಪ್ರತಿಬಂಧಕ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆಗುವ ಅನಾಹುತಗಳನ್ನು ತಡೆಗಟ್ಟಲು ಸರಕಾರ ಏನೆಲ್ಲಾ ಶಾಶ್ವತ ಪರಿಹಾರಗಳನ್ನು ಮಾಡಿದೆ ಎಂದು ಲಿಖಿತ ಪ್ರಶ್ನೆಯನ್ನು ಕೇಳಿದ್ದರು. ಸಚಿವರು, ದ.ಕ.ಜಿಲ್ಲೆಯ ಸೋಮೇಶ್ವರದಲ್ಲಿ 2.90 ಕೋಟಿ ರೂ ಹಾಗೂ 2.10 ಕೋಟಿ ಮೊತ್ತದ ಸಮುದ್ರ ಕೊರೆತ ತಡೆಗೋಡೆ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ. ಬಟ್ಟಂಪಾಡಿ ಪ್ರದೇಶದಲ್ಲಿ ಮಳೆಗಾಲದಲ್ಲಿ ಹೆಚ್ಚಿನ ಹಾನಿ ತಪ್ಪಿಸಲು ರಾಜ್ಯ ವಿಪತ್ತು ಪರಿಹಾರ ನಿಧಿಯಡಿಯಲ್ಲಿ ರೂ. 55.೦೦ ಲಕ್ಷ ವೆಚ್ಚದಲ್ಲಿ 100 ಮೀಟರ್ ಉದ್ದದ ತುರ್ತು ತಡೆಗೋಡೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಉಳ್ಳಾಲ ಹಾಗೂ ಸೋಮೇಶ್ವರ ಪ್ರದೇಶದ ಸಮುದ್ರ ಕೊರೆತಕ್ಕೆ ಸಂಬಂಧಿಸಿದಂತೆ ಈಗಾಗಲೇ ಏಷಿಯನ್ ಡೆವಲೆಪ್‌ಮೆಂಟ್ ಬ್ಯಾಂಕ್ ನ ನೆರವಿನೊಂದಿಗೆ ಸುಸ್ಥಿರ ಕರಾವಳಿ ತೀರ ಸಂರಕ್ಷಣೆ ಮತ್ತು ಯೋಜನೆಯಲ್ಲಿ ಅಲೆತಡೆಗೋಡೆಗಳ ಪುನರ್ ನಿರ್ಮಾಣ ಕಾಮಗಾರಿಗಳನ್ನು ರು. 246.11ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಮರಳು ಪೋಷಣೆಗಳ ಹಾಗು ಇನ್ನಿತರ ಕಾಮಗಾರಿಗಳನ್ನು ಸುಮಾರು ರೂ. 128.27 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಉಚ್ಚಿಲ ಬಟ್ಟಪಾಡಿಯಲ್ಲಿ ಪ್ರತಿವರ್ಷ ಸಂಭವಿಸುವ ಸತತ ಕಡಲ್ಕೊರೆತದಿಂದ ಆಗುವ ಅನಾಹುತಗಳನ್ನು ತಡೆಗಟ್ಟಲು 5೦೦ ಮೀ. ಉದ್ಧದ ತಡೆಗೋಡೆಯನ್ನು ಮಂಡ್ಯದ ಕರ್ನಾಟಕ ಇಂಜಿನಿಯರಿಂಗ್ ರಿಸರ್ಚ್ ಸ್ಟೇಶನ್ ಸಂಸ್ಥೆಯವರು ನೀಡಿದ ನವೀನ ಮಾದರಿಯ ವಿನ್ಯಾಸದಂತೆ ರೂ. 12 ಕೋಟಿ ವೆಚ್ಚದಲ್ಲಿ ಸಮುದ್ರ ಕೊರೆತ ಪ್ರತಿಬಂಧಕ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳುವ ಪ್ರಸ್ತಾವನೆಯು ಪರಿಶೀಲನೆಯಲ್ಲಿದೆ. ಕೊರೆತ ಸಂಭವಿಸಿದ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳಿಗಾಗಿ ರಾಜ್ಯ ವಿಪತ್ತು ಪರಿಹಾರ ನಿಧಿಯಡಿ ಉಚ್ಚೀಲ ಬಟ್ಟಪಾಡಿ ಮೀನಕಲಿಯ ಮತ್ತು ಸುರತ್ಕಲ್ ಲೈಟ್ ಹೌಸ ಪ್ರದೇಶದ ತಡೆಗೋಡೆ ಕಾಮಗಾರಿಗೆ ರೂ. 5 ಕೋಟಿಯ ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದೆ ಎಂದು ಉತ್ತರ ನೀಡಿದ್ದಾರೆ.
ಆದರೆ ಜಗತ್ತು ವೈಜ್ಞಾನಿಕವಾಗಿ ಇಷ್ಟೆಲ್ಲಾ ಮುಂದುವರಿದಿದ್ದರೂ ಹಲವಾರು ವರ್ಷಗಳಿಂದ ಆಗುತ್ತಿರುವ ಕಡಲ್ಕೊರೆತಕ್ಕೆ ಯಾವುದೇ ಪರಿಹಾರ ಕಂಡುಕೊಳ್ಳದಿರುವುದು ದುರಂತ. ಕಳೆದ ಸರಕಾರ ತಾತ್ಕಾಲಿಕ ವ್ಯವಸ್ಥೆಗೋಸ್ಕರ ಹಣ ಬಿಡುಗಡೆ ಮಾಡಿತ್ತು. ಆದರೆ ಈ ಸರಕಾರ ಕಾಮಗಾರಿಗಳನ್ನು ನಿಲ್ಲಿಸಲು ಆದೇಶ ನೀಡಿದೆ. ಈ ರೀತಿ ಆದರೆ ಅಲ್ಲಿನ ನಿವಾಸಿಗಳು ಬದುಕುವುದು ಹೇಗೆ ? ಇನ್ನಾದರೂ ಶಾಶ್ವತ ಪರಿಹಾರ ಸಿಗುವ ದಿಕ್ಕಿನಲ್ಲಿ ಪ್ರಯತ್ನ ಸಾಗಬೇಕು ಎಂದು ನಾಯಕ್ ಆಗ್ರಹಿಸಿದ್ದಾರೆ.