ಬೆಳ್ತಂಗಡಿ: ಇತೀಚೆಗೆ ಎ.ಜೆ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿ ವೈದ್ಯರ ನಿರ್ಲಕ್ಷ್ಯದ ಆರೋಪಕ್ಕೆ ಜೀವವನ್ನೇ ಕಳೆದುಕೊಂಡ ವೇಣೂರಿನ ಶಿಲ್ಪಾ ಆಚಾರ್ಯ ಮನೆಗೆ ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ನಿಯೋಗ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನವನ್ನು ವ್ಯಕ್ತಪಡಿಸಿದೆ.
ಶಿಲ್ಪಾ ಆಚಾರ್ಯಳ ಹೆರಿಗೆಗಾಗಿ ನಡೆದ ಶಸ್ತ್ರಚಿಕಿತ್ಸೆಯ ವೇಳೆ ಎಡವಟ್ಟಾಗಿ ಗರ್ಭಕೋಶವನ್ನು ಕಳೆದುಕೊಂಡಿದ್ದಲ್ಲದೆ ಮೆದುಳು ನಿಷ್ಕ್ರಿಯಗೊಂಡು ಕೋಮಕ್ಕೆ ತೆರಳಿ ಪ್ರಾಣವನ್ನು ಕಳೆದುಕೊಳ್ಳುವಂತಹ ಸ್ಥಿತಿಗೆ ಕಾರಣರಾದ ವೈದ್ಯರ ಹಾಗೂ ಎಜೆ ಆಸ್ಪತ್ರೆಯ ವಿರುದ್ಧ ಜಿಲ್ಲಾಡಳಿತ ಕಠಿಣ ಕಾನೂನು ಕ್ರಮಕೈಗೊಳ್ಳಲು ಹಾಗೂ ಸಾವಿಗೆ ನ್ಯಾಯಯುತ ಪರಿಹಾರವನ್ನು ಒದಗಿಸಿಕೊಡುವವರೆಗೂ ಕುಟುಂಬ ನಡೆಸುವ ಹೋರಾಟದ ಜೊತೆ ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಸಂಪೂರ್ಣವಾಗಿ ಬೆಂಬಲ ವ್ಯಕ್ತಪಡಿಸಲು ನಿರ್ಧರಿಸಿದೆ ಹಾಗೂ ಹೋರಾಟವನ್ನು ಇನ್ನಷ್ಟು ತೀವೃಗೊಳಿಸಲು ಎಲ್ಲಾ ಸಹಕಾರವನ್ನು ನೀಡಲಿದೆ ಎಂದು ನಿಯೋಗದಲ್ಲಿ ಇದ್ದವರು ಹೇಳಿದರು.
ನಿಯೋಗದಲ್ಲಿ ಡಿವೈಎಫ್ಐ ದ.ಕ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ , ಡಿವೈಎಫ್ಐ ಜಿಲ್ಲಾ ಮುಖಂಡರಾದ ಯುವ ವಕೀಲ ಮನೋಜ್ ವಾಮಂಜೂರು, ಶ್ರೀನಾಥ್ ಕಾಟಿಪಳ್ಳ, ಮಿಥುನ್ ಕುತ್ತಾರ್, ಸಿಪಿಐಎಂ ಗುರುಪುರ ವಲಯ ಸಮಿತಿ ಕಾರ್ಯದರ್ಶಿ ಸದಾಶಿವದಾಸ್ , ಸಿಪಿಐಎಂ ಜಿಲ್ಲಾ ಮುಖಂಡರಾದ ವಸಂತಿ ಕುಪ್ಪೆಪದವು, ಕುಸುಮ ಆಚಾರಿ, ನೋಣಯ್ಯ ಗೌಡ, ಸಾಮಾಜಿಕ ಕಾರ್ಯಕರ್ತರಾದ ಬಾವಾ ಪದರಂಗಿ ಮುಂತಾದವರು ಉಪಸ್ಥಿತರಿದ್ದರು.