ಬೆಳ್ತಂಗಡಿ: ಉತ್ತಮ ಗುಣನಡತೆಗಳಿಂದ ಶ್ರೇಷ್ಠ ವ್ಯಕ್ತಿತ್ವ ರೂಪಿತವಾಗಲು ಸಾಧ್ಯ ಎಂದು ಮಡಂತ್ಯಾರು ಸೇಕ್ರೇಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ನಿವೃತ್ತ ಶಿಕ್ಷಕ ವಿಶ್ವನಾಥ ಶೆಟ್ಟಿ ಹೇಳಿದರು.
ಅವರು ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಗುರುವಂದನೆ ಪ್ರಯುಕ್ತ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ, ಸಮಾಜದಲ್ಲಿ ಯಾರಿಗೂ ತೊಂದರೆ ಕೊಡದೆ, ಯಾವ ಕಾರಣಕ್ಕೂ ಹಿಂಜರಿಯದೆ, ಇನ್ನೊಬ್ಬರ ಬಾಯಿಗೆ ಆಹಾರವಾಗದೆ ಬಾಳಬೇಕು. ಹಣ ಸಂಪಾದನೆ ಮುಖ್ಯ ಉದ್ದೇಶವಾಗದೆ, ಮಾನಸಿಕ ನೆಮ್ಮದಿಯನ್ನು ಹೊಂದಿದವರಾಗಬೇಕು. ವ್ಯಸನಗಳಿಗೆ ಬಲಿಯಾಗದೆ, ಉತ್ತಮ ವಿಚಾರದ ಕುರಿತು ಧ್ಯಾನಾಸ್ತಕರಾಗಿ ಜ್ಞಾನ ಗಳಿಸಬೇಕು. ನಾವಿರುವ ಪರಿಸರ ಸ್ವಚ್ಛವಾಗಿದ್ದರೆ, ಮನಸ್ಸು ಸ್ವಚ್ಛವಾಗಿರುತ್ತದೆ. ನಮಗೆ ತಾಯಿ ತಂದೆ ಜೀವ ಕೊಟ್ಟರೆ, ಗುರು ಜೀವನವನ್ನು ಕೊಡುತ್ತಾರೆ ಎಂದರು.
ಕಾಲೇಜಿನ ಪ್ರಾಂಶುಪಾಲ ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ವಿಷ್ಣುಪ್ರಕಾಶ್ ಎಂ ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಕಾರ್ಯದರ್ಶಿ ಕು| ಪಂಚಮಿ ಸ್ವಾಗತಿಸಿದರು. ಕು|ಮೌನ್ವಿತ ಧನ್ಯವಾದ ಸಲ್ಲಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕು| ನಮೃತಾ ಮತ್ತು ಕು|ಸನುಷಾ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.