ಬೆಳ್ತಂಗಡಿ : ಕಳೆಂಜದ ಗ್ರಾಮದ ಅಮ್ಮಿನಡ್ಕ ಲೋಲಾಕ್ಷ ಎಂಬವರ ಮನೆ ಪಂಚಾಂಗ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಆರ್.ಎಫ್.ಓ ಕತ೯ವ್ಯಕ್ಕೆ ಅಡ್ಡಿಪಡಿಸಿದರೆಂದು ಆರೋಪಿಸಿ ತಡವಾಗಿ ನೀಡಿದ ದೂರಿನಂತೆ ಶಾಸಕ ಹರೀಶ್ ಪೂಂಜರವರ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರಣ್ಯಾಧಿಕಾರಿ ಜಯಪ್ರಕಾಶ್ ನೀಡಿದ ದೂರಿನಲ್ಲಿ ಏನಿದೆ:
ಕಳೆಂಜ ಗ್ರಾಮದ ಸರ್ವೆ ನಂಬ್ರ 309 ರಲ್ಲಿ ಲೋಲಾಕ್ಷ ಗೌಡ ಎಂಬವರು ಮೀಸಲು ಅರಣ್ಯ ಪ್ರದೇಶಕ್ಕೆ ಅತಿಕ್ರಮ ಮಾಡಿ ಮೀಸಲು ಅರಣ್ಯ ಪ್ರದೇಶದಲ್ಲಿ ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಸೂಚನೆಯಂತೆ ಅ.9ರಂದು ತಾನು ಸಿಬ್ಬಂದಿಯೊಂದಿಗೆ ಬೆಳಗ್ಗೆ 7:45 ಕ್ಕೆ ಭೇಟಿ ನೀಡಿದ್ದು, ಲೋಲಾಕ್ಷ ಗೌಡ ಎಂಬವರು ಮೀಸಲು ಅರಣ್ಯ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಲು ಪೌಂಡೇಶನ್ ಹಾಕಿರುವುದು ಕಂಡುಬಂದಿದ್ದು ಕೂಡಲೇ ನಿವೇಶನವನ್ನು ತೆರವು ಮಾಡುವಂತೆ ಲೋಲಾಕ್ಷ ಗೌಡ ಅವರಿಗೆ ಸೂಚಿಸಿದ್ದೆ. ತೆರವುಗೊಳಿಸದೆ ಇರುವುದರಿಂದ ಸದ್ರಿ ಪೌಂಡೇಶನನ್ನು ಸಿಬ್ಬಂದಿ ಮುಖಾಂತರ ತೆರವುಗೊಳಿಸಲು ಮುಂದಾದಾಗ ಆ ಸಮಯ ಶಾಸಕರಾದ ಹರೀಶ್ ಪೂಂಜಾರವರು ತಮ್ಮ ಬೆಂಬಲಿಗರೊಂದಿಗೆ ಸೇರಿ ಫೌಂಡೇಶನ್ ನ್ನು ತೆರವುಗೊಳಿಸಲು ತಡೆದಿದ್ದು ಅಲ್ಲದೆ ಅಧಿಕಾರಿಗಳ ಸಮ್ಮುಖದಲ್ಲಿ ಅಸಂಸದೀಯ ಪದವನ್ನು ಬಳಸಿದ್ದಾರೆ ಆದುದರಿಂದ ಅರಣ್ಯ ಇಲಾಖಾ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹರೀಶ್ ಪೂಂಜಾ ಶಾಸಕರು ಹಾಗೂ ಬೆಂಬಲಿಗರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿದ್ದರು. ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಾನು ಜೈಲಿಗೆ ಹೋದರೂ ಪರವಾಗಿಲ್ಲ, ಕೊನೆಯವರೆಗೂ ಬಡವರ ಪರವಾಗಿಯೇ ನಿಲ್ಲುತ್ತೇನೆ:
ಹರೀಶ್ ಪೂಂಜ
ನಾನು ಶಾಸಕನಾಗಿರುವುದು ನನ್ನ ಜನರ ಸೇವೆಗೆ ಮತ್ತು ಅವರ ರಕ್ಷಣೆಗೆ ಜೈಲಿಗೆ ಹೋಗಲು ಸಿದ್ಧ ಎಂದು ಶಾಸಕ ಹರೀಶ್ ಪೂಂಜರವರ ಪ್ರತಿಕ್ರಿಯಿಸಿದ್ದಾರೆ.
ಬಾಲ್ಯದಿಂದಲೂ ಸುಭಾಷ್ ಚಂದ್ರ ಬೋಸ್, ಸರ್ದಾರ್ ಪಟೇಲ್, ವೀರ ಸಾವರ್ಕರ್, ಭಗತ್ ಸಿಂಗ್ ಮುಂತಾದವರನ್ನು ಆದರ್ಶವಾಗಿ ಇಟ್ಟುಕೊಂಡು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ABVP) ದಿನಗಳಿಂದ ಜನ ಸೇವೆ, ಜನರಿಗಾಗಿ ಸಂಘರ್ಷ ಮಾಡಿಕೊಂಡು ನಾಯಕನಾದವನು. ನಾನು ಜನರಿಂದ ಶಾಸಕನಾಗಿ ಜನರಿಗೋಸ್ಕರ ಇರುವವನು ಅದಕ್ಕಾಗಿ ಯಾವ ಬೆಲೆ ತೆರಲು ಸಿದ್ಧ ಎಂದು ತಿಳಿಸಿದ್ದಾರೆ.
ನನ್ನ ವಿಧಾನಸಭಾ ಕ್ಷೇತ್ರದಲ್ಲಿ, ಅರಣ್ಯದ ಅಂಚಿನಲ್ಲಿ, ನೂರು ವರ್ಷಕ್ಕಿಂತಲೂ ಹಿಂದಿನಿಂದ ಕೃಷಿ ಚಟುವಟಿಕೆ ಮಾಡುತ್ತಾ ಬಂದಿದ್ದ ಕಳೆಂಜದ ದೇವಣ್ಣ ಗೌಡ ಅವರ ಕುಟುಂಬವನ್ನು ಒಕ್ಕಲೆಬ್ಬಿಸಲು ಯತ್ನಿಸಿದ ಅರಣ್ಯ ಇಲಾಖೆಯ ವಿರುದ್ಧ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಶಾಸಕ ಮಿತ್ರರೊಂದಿಗೆ ಮತ್ತು ಕಾರ್ಯಕರ್ತರೊಂದಿಗೆ ಸೇರಿ ಪ್ರತಿಭಟಿಸಿ ಬಡ ಕುಟುಂಬವನ್ನು ಒಕ್ಕಲೆಬ್ಬಿಸುವುದರಿಂದ ತಡೆದಿದ್ದೇವು.
ನೂರಾರು ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ದ ಮನೆಯವರ ಪರವಾಗಿ ನಾನೊಬ್ಬ ಜನಪ್ರತಿನಿಧಿಯಾಗಿ ಧ್ವನಿ ಎತ್ತಿದ್ದು ತಪ್ಪಾ? ನನ್ನ ಕ್ಷೇತ್ರದ ಜನರ ಪರವಾಗಿ ಹೋರಾಡುವ ಹಕ್ಕು ನನಗಿಲ್ಲವೇ? ನನ್ನ ಜನ ನನ್ನಲ್ಲಿ ಸಮಸ್ಯೆ ಹೇಳಿಕೊಂಡಾಗ ಸುಮ್ಮನಿರಬೇಕೆ? ಹೀಗಾದರೆ ಸಾಮಾನ್ಯ ಜನರ ಗತಿಯೇನು? ಜನರ ಸಮಸ್ಯೆಗೆ ಧ್ವನಿಯಾದ ಒಬ್ಬ ಜನಪ್ರತಿನಿಧಿಯನ್ನು ಹೀಗೆಲ್ಲ ಕಾಡುವುದಾದರೆ ಜನಸಾಮಾನ್ಯರು ಕಾಂಗ್ರೆಸ್ ಸರ್ಕಾರದಡಿಯಲ್ಲಿ ಹೇಗೆ ಬದುಕಬೇಕು ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿಗಳೇ, ಅರಣ್ಯ ಸಚಿವರೇ ನಿಮ್ಮ ಈ ಬೆದರಿಕೆ ತಂತ್ರಗಳಿಗೆ ನಾನು ಬೆದರುವುದಿಲ್ಲ. ಮತ್ತೆ ಹೇಳುತ್ತಿದ್ದೇನೆ ಬಡವರಿಗಾಗಿ ಇಂತಹ ನೂರು ಕೇಸು ಹಾಕಿಸಿಕೊಳ್ಳುವುದಕ್ಕೂ ಸಿದ್ಧನಿದ್ದೇನೆ, ಜೈಲು ಸೇರಲೂ ತಯಾರಿದ್ದೇನೆ ಎಂದಿದ್ದಾರೆ.