May 6, 2026
ಧಾರ್ಮಿಕ

ಜೈನರಲ್ಲಿ ದೀಪಾವಳಿ ಮಹಾವೀರ ಶಕ

ಭಾರತ ಸರ್ವಧರ್ಮಗಳ ನೆಲೆವೀಡು. ಇಲ್ಲಿ ಪ್ರತಿಯೊಂದು ಧರ್ಮ, ಮತ, ಪಂಗಡಗಳು ತನ್ನದೇ ಆದ ಸಂಪ್ರದಾಯ ಆಚರಣೆಗಳನ್ನು ಹೊಂದಿದೆ.‌ ಈ ಎಲ್ಲಾ ಸಂಪ್ರದಾಯಗಳಿಗೂ ಅದರದೇ ಆದ ಹಿನ್ನಲೆಗಳಿವೆ. ಹಾಗೆಯೇ ಜೈನರ ದೀಪಾವಳಿಗೂ ವಿಶೇಷ ಮಹತ್ವವಿದೆ.‌ ಜೈನರಲ್ಲಿ ವರ್ತಮಾನ ಕಾಲದಲ್ಲಿ 24 ತೀರ್ಥಂಕರರ ಮಾನ್ಯತೆ ಇದೆ. ಒಬ್ಬ ತೀರ್ಥಂಕರರ ಮುಕ್ತಿಯ ನಂತರ ಇನ್ನೊಬ್ಬ ತೀರ್ಥಂಕರರಾಗುವ ಜೀವದ ಉಗಮವಾಗುತ್ತದೆ. ಹಾಗೆಯೇ ಭಗವಾನ್ ಆದಿನಾಥರಿಂದ ಮೊದಲ್ಗೊಂಡು 23 ನೇ ತೀರ್ಥಂಕರ ಪಾರ್ಶ್ವನಾಥರವರೆಗೆ ಮುಂದುವರೆಯುತ್ತದೆ. ಭಗವಾನ್ ಪಾರ್ಶ್ವನಾಥರ ಮುಕ್ತಿಯ ನಂತರ ಕೊನೆಯ ತೀರ್ಥಂಕರ ಭಗವಾನ್ ಮಹಾವೀರರ ಜನನವಾಗುತ್ತದೆ.

ಭಗವಾನ್ ಮಹಾವೀರರು ಪ್ರೌಢರಾಗುತ್ತಾ ಕರ್ಮಸಂಕೋಲೆಗಳಿಂದ ಬಿಡುಗಡೆಗೊಳ್ಳಲು ಧ್ಯಾನಕ್ಕೆ ಶರಣಾದರು. ಅಷ್ಟಕರ್ಮಗಳಲ್ಲಿ ನಾಲ್ಕು ಕರ್ಮಗಳನ್ನು ಆತ್ಮನ ಆವರಣದಿಂದ ದೂರೀಕರಿಸಿದರು. ಪರಮ ಜ್ಞಾನದ ಧಾರಕರಾಗಿ ಸರ್ವಜೀವಿಗಳನ್ನು ಉಪದೇಶಗೈಯ್ಯಲು ಸಮವಸರಣದಲ್ಲಿ ಆರೂಢರಾದರು. ಸಮವಸರಣದಲ್ಲಿ ಭವ್ಯ ಜೀವಿಗಳಿಗೆ ಬದುಕು, ಬದುಕಲು ಬಿಡು ಎಂಬ ಪ್ರಧಾನ ತತ್ವಸಹಿತವಾದ ವಿಚಾರಗಳನ್ನು ಹಾಗೂ ಮುಕ್ತಿಯ ಬೋಧೆಯನ್ನು ದಿವ್ಯವಾಣಿಯಲ್ಲಿ ಅರುಹಿದರು.

ಪ್ರತಿಯೊಬ್ಬ ತೀರ್ಥಂಕರರೂ ಸಮವಸರಣದಲ್ಲಿ ಉಪದೇಶಗೈಯ್ಯುತ್ತಾ ಕೊನೆಗೆ ಶುಕ್ಲಧ್ಯಾನಗೈದು ಮುಕ್ತಿಲೋಕವನ್ನು ಸೇರುತ್ತಾರೆ. ಭಗವಾನ್ ಮಹಾವೀರರೂ ಕೂಡ ಸಮವಸರಣವನ್ನು ತೊರೆದು ತ್ರಯೋದಶಿಯ ದಿನ ಶುಕ್ಲಧ್ಯಾನ ಸಾಧನೆ ಮಾಡಲು ತೊಡಗುತ್ತಾರೆ. ಈ ತ್ರಯೋದಶಿಯು ಕಾರ್ತಿಕ ಮಾಸದ ಅಮವಾಸ್ಯೆ ಪೂರ್ವದ್ದು ಆಗಿರುತ್ತದೆ. ಈ ತ್ರಯೋದಶಿಯು ಹಿಂದೂಗಳಲ್ಲಿ ಧನ ತ್ರಯೋದಶಿಯೆಂದು ಆಚರಿಸಲ್ಲಡುತ್ತದೆ. ಆದರೆ ಜೈನರಲ್ಲಿ ಭಗವಾನ್ ಮಹಾವೀರರು ಮುಕ್ತಿಲೋಕಕ್ಕಾಗಿ ಬಾಕಿ ಇರುವ ಒಂದೇ ಒಂದು ಮೆಟ್ಟಿಲನ್ನು ಏರಲಿಕ್ಕಾಗಿ ಧ್ಯಾನವನ್ನು ಮಾಡಲು ತೊಡಗಿಸಿಕೊಳ್ಳುವುದರಿಂದ ಇದನ್ನು ಧ್ಯಾನ ತ್ರಯೋದಶಿ ಎನ್ನಲಾಗುತ್ತಿದೆ. ತ್ರಯೋದಶಿಯಂದು ಆರಂಭವಾದ ಭಗವಾನ್ ಮಹಾವೀರರ ಶುಕ್ಲಧ್ಯಾನವು ಚತುರ್ದಶಿಯ ಅಂತಿಮ ಪ್ರಹರ ಅಂದರೆ ಅಮವಾಸ್ಯೆಯ ಪ್ರಾರಂಭ ಅಂದರೆ ಅಮವಾಸ್ಯೆಯ ಬೆಳಗಿನ ಜಾವದಲ್ಲಿ ( 04.55 am ) ಕೊನೆಯಾಗಿ ಭಗವಂತರು ಮತ್ತಷ್ಟೂ ಊರ್ಧ್ವಗಮನರಾಗಿ ಮುಕ್ತಿಲೋಕವನ್ನು ಸಂದರು. ಭಗವಂತರ ಕೇಶ ಮತ್ತು ಉಗುರುಗಳು ಅಷ್ಟೇ ಉಳಿದಿದ್ದವು. ಬಾಕಿ ಶರೀರ ಕರ್ಪೂರದಂತೆ ಕರಗಿ ಅದೃಶ್ಯವಾಗಿತ್ತು. ಉಳಿದ ಕೇಶ ಉಗುರುಗಳನ್ನು ಸ್ವರ್ಗದಿಂದ ಇಳಿದುಬಂದ ದೇವತೆಗಳು ದಹಿಸಿ ಕ್ಷೀರಸಾಗರದಲ್ಲಿ ವಿಸರ್ಜನೆ ಮಾಡುತ್ತಾರೆ. ಭಗವಾನ್ ಮಹಾವೀರರು ನಿರ್ವಾಣ ಹೊಂದಿದ ಕ್ಷಣದಿಂದಲೇ ಜೈನರಿಗೆ ಮಹಾವೀರ ಶಕ ಪ್ರಾರಂಭವಾಗುತ್ತದೆ. ಜೈನರಲ್ಲಿ ಇಂದೂ ಕೂಡ ಮಹಾವೀರರ ಶಾಸನಕಾಲವೇ ಚಾಲ್ತಿಯಲ್ಲಿದೆ. ಭವಿಷ್ಯ ಕಾಲದಲ್ಲಿ ಇನ್ನೊಬ್ಬ ತೀರ್ಥಂಕರರ ಕಾಲದವರೆಗೆ ಮಹಾವೀರ ಶಾಸನವೇ ನಡೆಯುತ್ತಿರುತ್ತದೆ.

ಪಾವಾಪುರಿಯಲ್ಲಿ ದೇವತೆಗಳು ಹಾಗೂ ನಾಡಿನ ಜನತೆ ಭಗವಾನ್ ಮಹಾವೀರರ ಮುಕ್ತಿ ಗಮನವನ್ನು ಸಂಭ್ರಮ ಉಲ್ಲಾಸಗಳಿಂದ ಆಚರಿಸುತ್ತಾರೆ. ಶುಚಿರ್ಭೂತರಾಗಿ ಜಿನಂಮದಿರಗಳಿಗೆ ತೆರಳಿ ವಿವಿಧ ರೀತಿಯಲ್ಲಿ ಭಕ್ತಿಯ ಸೇವೆಗೈದರು. ಸಾಲು ಸಾಲು ದೀಪಗಳನ್ನು ಹಚ್ಚುತ್ತಾರೆ. ನಿರ್ವಾಣಲಡ್ಡುವನ್ನು ಸಮರ್ಪಿಸುತ್ತಾರೆ. ( ನಿರ್ವಾಣ ಲಡ್ಡು ಗೋಲಾಕಾರವಾಗಿರುತ್ತದೆ. ಗೋಲಾಕಾರಕ್ಕೆ ಆರಂಭವೂ ಇಲ್ಲ , ಅಂತ್ಯವೂ ಇರುವುದಿಲ್ಲ. ಹಾಗೆಯೇ ಇದು ಅಖಂಡತ್ವವನ್ನು ಸೂಚಿಸುತ್ತದೆ. ಆತ್ಮನೂ ಕೂಡ ಅಖಂಡನಿದ್ದಾನೆ. ಲಡ್ಡುವಿನ ಸಿಹಿಯು ಅನಂತಸುಖದ ಸಂಕೇತವಾಗಿದೆ ) . ಇಂದಿಗೂ ಕೂಡ ನಿರ್ವಾಣ ಮಹೋತ್ಸವದ ಆಚರಣೆಯಲ್ಲಿ ಪ್ರಾದೇಶಿಕವಾರು ವ್ಯತ್ಯಾಸಗಳಿವೆ.

ಭಗವಾನ್ ಮಹಾವೀರರ ನಿರ್ವಾಣನಂತರ ಭಕ್ತರಿಗೆ ಒಂದು ರೀತಿಯಲ್ಲಿ ಆತಂಕ ಮನೆಮಾಡಿತು. ನಮಗೆಲ್ಲ ಇಷ್ಟರವರೆಗೆ ಭಗವಾನ್ ಮಹಾವೀರರು ಮೊಕ್ಷಮಾರ್ಗಕ್ಕೆ ದಾರಿದೀಪಕರಾಗಿದ್ದರು. ಇನ್ನು ಮುಂದೆ ನಮಗೆ ಯಾರು ಜ್ಞಾನವನ್ನು ಎರೆಯುತ್ತಾರೆ ಎಂಬ ಕಸಿವಿಸಿ ಮನೆಮಾಡಿತು. ಆದರೆ ಈ ಆತಂಕ ಕೆಲವೇ ಕ್ಷಣಗಳಲ್ಲಿ ದೂರವಾಯಿತು. ಭಗವಾನ್ ಮಹಾವೀರರ ಪರಮಶಿಷ್ಯ , ಮುಖ್ಯ ಗಣಧರ ಗೌತಮರಿಗೆ ಅಮವಾಸ್ಯೆಯ ಸಂಜೆಯೇ ಕೇವಲಜ್ಞಾನ ಪ್ರಾಪ್ತಿಯಾಯಿತು. ಭಕ್ತಜನ ಸಂಭ್ರಮದಿಂದ ಅಮಾವಾಸ್ಯೆಯ ಸಂಜೆ ದೀಪಗಳ ಸಾಲು ಮಾಡಿ ದೀಪ ಹಚ್ಚಿ ಭಕ್ತಿಲೋಕವನ್ನು ಸೃಷ್ಟಿಸಿದರು. ಇದುವೇ ಜೈನರ ದೀಪಾವಳಿ ಆಗಿರುತ್ತದೆ. ಜೈನರ ಹಬ್ಬಗಳು ಮೋಜುಮಸ್ತಿಗೆ ಅನ್ವಯವಾಗದೇ ಆತ್ಮಕಲ್ಯಾಣ ಹಾಗೂ ಆತ್ಮನ ಉನ್ನತಿಗೆ ಮೂಲಭೂತ ಅವಶ್ಯಕತೆಯಾದ ಜ್ಞಾನವನ್ನು ಪ್ರಾಪ್ತಿಮಾಡಿಕೊಳ್ಳುವುದಕ್ಕಾಗಿಯೇ ನಿಮಿತ್ತವಾಗಿರುತ್ತದೆ. ಸರ್ವರಿಗೂ ಭಗವಾನ್ ಮಹಾವೀರರ ನಿರ್ವಾಣ ಮಹೋತ್ಸವ ಹಾಗೂ ದೀಪಾವಳಿಯ ಶುಭಾಶಯಗಳು.

  • ನಿರಂನ್ ಜೈನ್ ಕುದ್ಯಾಡಿ

Related posts

ಪರಸ್ಪರ ಯುವಕ ಮಂಡಲ ಈದು-ನಾರಾವಿ ಇದರ ನೇತೃತ್ವದಲ್ಲಿ “ಮಹಾ ಚಂಡಿಕಾಯಾಗ”ದ ವೈಭವದ ಹಸಿರುವಾಣಿ ಹೊರೆಕಾಣಿಕೆ

Suddi Udaya

ಮಾ.20-27: ಶ್ರೀ ರಾಮಕ್ಷೇತ್ರದಲ್ಲಿ ಶ್ರೀ ರಾಮ ನಾಮ ತಾರಕ ಮಂತ್ರ ಸಪ್ತಾಹ- ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ಮಹಾ ಬ್ರಹ್ಮರಥೋತ್ಸವ

Suddi Udaya

ಮನೋಜವಂ ಮಾರುತ ತುಲ್ಯವೇಗಂ; ಅಳದಂಗಡಿಯಲ್ಲಿ ಹನುಮ ನಾಮ ಸ್ಮರಣೆ ಹನುಮೋತ್ಸವ-2025, : ಹನುಮ ಯಾಗಕ್ಕೆ ಚಾಲನೆ

Suddi Udaya

ಸುರ್ಯ: ಕೊಡಮಣಿತ್ತಾಯ – ಪಿಲಿಚಾಮುಂಡಿ, ಕಲ್ಕುಡ – ಕಲ್ಲುರ್ಟಿ, ಮಹಮ್ಮಾಯಿ ದೈವ ಸನ್ನಿಧಿಯಲ್ಲಿ ದೊಂಪದಬಲಿ ಉತ್ಸವ

Suddi Udaya

ನಾರಾವಿ ಶ್ರೀ ಸೂರ್ಯನಾರಾಯಣ ದೇವರಿಗೆ ಬ್ರಹ್ಮಕಲಶಾಭಿಷೇಕ- ಕಣ್ತುಂಬಿಕೊಂಡ ಸಾವಿರಾರು ಭಕ್ತರು

Suddi Udaya

ನಾವೂರು ಬಡೆಕ್ಕಾವು ದೈವ ಕಂಬಳ ಮುಹೂರ್ತ

Suddi Udaya
error: Content is protected !!