ಬಳಂಜ: ಜಿಲ್ಲೆಯ ಪ್ರಸಿದ್ದ ಭಜನಾ ತಂಡಗಳೊಂದಾದ ಬಳಂಜ ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿ ವತಿಯಿಂದ ದೀಪಾವಳಿ ಆಚರಣೆ ಹಾಗೂ ಭಜನಾ ಪಟುಗಳಿಗೆ ವಿವಿಧ ಪರಿಕರ ವಿತರಣಾ ಸಮಾರಂಭವು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದ ವಠಾರದಲ್ಲಿ ನ.12 ರಂದು ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ವಹಿಸಿ ಮಾತನಾಡಿ ಜಿಲ್ಲೆಯಲ್ಲಿಯೇ ಸುಮಾರು 900 ಕ್ಕೂ ಹೆಚ್ಚು ಭಜನಾ ತಂಡಗಳಿದ್ದು ಬಳಂಜ ಬ್ರಹ್ಮಶ್ರೀ ಕುಣಿತಾ ಭಜನಾ ತಂಡವು ರಾಜ್ಯದ ನಾನಾ ಕಡೆಗಳಲ್ಲಿ ಕುಣಿತಾ ಭಜನೆ ಮಾಡಿ ಅತ್ಯಂತ ಪ್ರಸಿದ್ದ ಪಡೆದಿದೆ. ಹರೀಶ್ ವೈ ಚಂದ್ರಮರವರ ಸಂಚಾಲಕತ್ವದಲ್ಲಿ ನಡೆಯುವ ತಂಡಕ್ಕೆ ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಪ್ರಶಸ್ತಿಗಳು ದೊರೆಯಲಿ ಎಂದು ಹಾರೈಸಿದರು.
ಬಳಂಜ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಸದಾನಂದ ಸಾಲಿಯಾನ್ ಮಾತನಾಡಿ ಭಜನೆಯಿಂದ ಮಕ್ಕಳಲ್ಲಿ ಹಲವಾರು ಬದಲಾವಣೆಯನ್ನು ಕಂಡಿದ್ದೇವೆ, ಉತ್ತಮವಾದ ಸಂಸ್ಕಾರ, ಶಿಸ್ತು ದೊರೆತಾಗ ಸಾರ್ಥಕ ಬದುಕು ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.
ಪತ್ರಕರ್ತ ಜಗದೀಶ್ ಬಳಂಜ ಮಾತನಾಡಿ ಬಳಂಜ ಸಾಧಕರನ್ನು ಹೊಂದಿರುವ ಊರು. ಇಲ್ಲಿ ನೂರಾರು ಪ್ರತಿಭೆಗಳಿದ್ದಾರೆ. ಚಿಕ್ಕದಾಗಿ ಪ್ರಾರಂಭಿಸಿದ ಭಜನಾ ತಂಡ ಪ್ರತಿಭೆಯ ಮೂಲಕ ಜಗದಗಳ ಹಬ್ಬಿದೆ ಎಂದರು.
ವೇದಿಕೆಯಲ್ಲಿ ಯುವಶಕ್ತಿ ತಂಡದ ಸದಸ್ಯ ಕರುಣಾಕರ ಹೆಗ್ಡೆ, ಬಳಂಜ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಶರತ್ ಅಂಚನ್, ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿಯ ಸಹ ಸಂಚಾಲಕ ಪ್ರಣಾಮ್ ಶೆಟ್ಟಿ ಉಪಸ್ಥಿತರಿದ್ದರು.
ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿಯ ಭಜನಾ ಪಟು ಮಾನ್ಯ ಪ್ರಾರ್ಥಿಸಿ, ಸಂಚಾಲಕ ಹರೀಶ್ ವೈ ಚಂದ್ರಮ ಸ್ವಾಗತಿಸಿ,ಅಧ್ಯಕ್ಷೆ ಜ್ಯೋತಿ ವಂದಿಸಿದರು. ಭಜನಾ ತಂಡದ ಎಲ್ಲಾ ಭಜನಾ ಪಟುಗಳು ಸಹಕರಿಸಿದರು.