ಅರಸಿನಮಕ್ಕಿ: ಹತ್ಯಡ್ಕ ಗ್ರಾಮದ ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಫೆ.22 ರಂದು ವೈದಿಕ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಸಭೆಯು ನಡೆಯಿತು.
ಬೆಳಿಗ್ಗೆ ಪುಣ್ಯಾಹ, ಗಣಪತಿ ಹೋಮ, ರೆಖ್ಯ ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ, ಶ್ರೀ ದೇವರ ಪ್ರತಿಷ್ಠೆ, ಜೀವಕಲಶಾಭಿಷೇಕ, ಅಷ್ಟಬಂಧ ಪ್ರತಿಷ್ಠೆ, ಪರಿವಾರಗಳ ಪ್ರತಿಷ್ಟೆ, ಪ್ರತಿಷ್ಠಾ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ದಿಕ್ಪಾಲಕ ಹೋಮ, ದಿಕ್ಪಾಲ ಪ್ರತಿಷ್ಠೆ, ಮಾತೃ ಪ್ರತಿಷ್ಠೆ, ನಿರ್ಮಾಲ್ಯಧಾರಿ ಪ್ರತಿಷ್ಠೆ, ಮಹಾಬಲಿ ಪೀಠಾಧಿವಾಸ ನಡೆಯಿತು.
ಸಂಜೆ ಕಳೆಂಜ ಶ್ರೀ ಸತ್ಯಾನಾರಾಯಣ ಭಜನಾ ಮಂಡಳಿ ನೀರಪಾದೆ, ಶ್ರೀ ವನದುರ್ಗಾ ಮಹಿಳಾ ಭಜನಾ ಮಂಡಳಿ ಅರಸಿನಮಕ್ಕಿ, ಕಳೆಂಜ ಶ್ರೀ ಸದಾಶಿವೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಮತ್ತು ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಅರಸಿನಮಕ್ಕಿ ಗ್ರಾ.ಪಂ. ಉಪಾಧ್ಯಕ್ಷ, ಉದ್ಯಮಿ ಸುಧೀರ್ ಕುಮಾರ್ ಎಂ.ಎಸ್. ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಶೇಖರ್ ನಾರಾವಿರವರು ಧರ್ಮ ಸಂದೇಶ ನೀಡಿದರು.
ಮುಖ್ಯ ಅತಿಥಿಗಳಾಗಿ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಹಾಗೂ ಶಾಸಕ ಹರೀಶ್ ಪೂಂಜ, ಉಜಿರೆ ಕಾರ್ತಿಕ್ ಎಂಟರ್‌ಪ್ರೈಸಸ್ ಮಾಲಕ ಧರ್ಮಣ್ಣ ಗೌಡ, ತುಂಬೆಲ್ತಡ್ಕ ಕಾಲಬೈರವ ಮಾರಿಯಮ್ಮ ದೇವಸ್ಥಾನದ ಸುರೇಶ್ ಆಗಮಿಸಿದ್ದರು.
ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀರಂಗ ದಾಮ್ಲೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಕಾಶ್ ಪಿಲಿಕ್ಕಬೆ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಜಯರಾಮ ನೆಲ್ಲಿತ್ತಾಯ, ಆಡಳಿತ ಸಮಿತಿ ಅಧ್ಯಕ್ಷ ಪದ್ಮಯ್ಯ ಬಾರಿಗ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರುಗಳಾದ ನಾರಾಯಣ ಗೌಡ ಬರಮೇಲು, ವಿಶ್ವನಾಥ ಆಚಾರ್‍ಯ ಸಂಕೇಶ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಿವೃತ್ತ ಸುಭೇದಾರ್ ಮಹಾಬಲ ಕೆ. ದಂಪತಿಗಳನ್ನು ಸನ್ಮಾನಿಸಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಮುರುಳೀಧರ ಶೆಟ್ಟಿಗಾರ್ ಸ್ವಾಗತಿಸಿದರು. ಧನಿಷ್ಠ ಮತ್ತು ದಿಶಾ ಪ್ರಾರ್ಥಿಸಿದರು. ಸ್ವಯಂ ಸೇವಕ ಸಮಿತಿ ಸಂಚಾಲಕ ಅವಿನಾಶ್ ಭಿಡೆ ವಂದಿಸಿದರು. ಸಭೆ ಮತ್ತು ಸಾಂಸ್ಕೃತಿಕ ಸಮಿತಿ ಸದಸ್ಯ ಪ್ರವೀಣ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.
ರಾತ್ರಿ ಮೂಲ್ಕಿ ನವ ವೈಭವ ಕಲಾವಿದರಿಂದ ತುಳುನಾಡ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.