ಬೆಳ್ತಂಗಡಿ : ಗುರುವಾಯನಕೆರೆ ರತ್ನಗಿರಿ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರದ ಜೀರ್ಣೋದ್ದಾರ ಹಾಗೂ ಪುನರ್ ಪ್ರತಿಷ್ಠಾ ಮಹೋತ್ಸವ ಹಾಗೂ ತುಳುನಾಡ ದೈವಾರಾಧಕರ ಮಹಾ ಸಮ್ಮೇಳನ ಫೆ.27 ರಿಂದ ಪ್ರಾರಂಭಗೊಂಡು ಮಾ. 2 ರವರೆಗೆ ನಡೆಯಲಿದೆ.
ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ಸತೀಶ್ ಕುಮಾರ್ ಆರಿಗ ಚಾಲನೆ ನೀಡಿದರು. ನಂತರ ಶ್ರೀ ಅಯ್ಯಪ್ಪ ನಗರ ಗುರುವಾಯನಕೆರೆಯಿಂದ ತಾಲೂಕಿನ ವಿವಿಧ ಭಜನಾ ತಂಡಗಳಿಂದ ಭಜನಾ ಮಂಗಳೋತ್ಸವದೊಂದಿಗೆ ಮೆರವಣಿಗೆ ಮೂಲಕ ಸಾಗಿ ಹಸಿರುವಾಣಿ ಹೊರೆಕಾಣಿಕೆಯನ್ನು ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಮನೋಜ್ ಕುಮಾರ್ ನೆಕ್ಕಿಲೊಟ್ಟು, ಅಧ್ಯಕ್ಷ ಸಂಪತ್ ಬಿ. ಸುವರ್ಣ, ಕಾರ್ಯಾಧ್ಯಕ್ಷ ವಿಶ್ವೇಶ್ ಕಿಣಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾಮತ್ ಮಂದಾರಗಿರಿ, ಜೊತೆಕಾರ್ಯದರ್ಶಿ ರಾಮಚಂದ್ರ ಶೆಟ್ಟಿ, ಕೋಶಾಧಿಕಾರಿ ಶ್ರೀಧರ ಹೆಗ್ಡೆ, ಉಪಾಧ್ಯಕ್ಷರಾದ ಅಜಿತ್ ಮೋಹನ್, ವಸಂತ್ ಗೌಡ, ವೆಂಕಟರಮಣ ಅನಾರ್ಯ, ಗೌರವ ಸಲಹೆಗಾರರಾದ ರಾಜೇಶ್ ಶೆಟ್ಟಿ ನವಶಕ್ತಿ, ಅರಮಲೆಬೆಟ್ಟ ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರರು ಸುಕೇಶ್ ಕುಮಾರ್ ಜೈನ್, ಪ್ರವೀಣ್ ಕುಮಾರ್ ಅಜ್ರಿ, ಶಿವರಾಮ್ ಪ್ರಭು ಕಾವೇರಿ, ರಾಜುಶೆಟ್ಟಿ ಬೆಂಗತ್ಯಾರು, ದಿನಕರ ಆದೇಲು ಗುರುವಾಯನಕೆರೆ, ಬೆಳ್ತಂಗಡಿ ಗುರುದೇವ ಬ್ಯಾಂಕ್ ನ ಸಿಇಒ ಅಶ್ವಥ್ ಕುಮಾರ್, ಹಾಗೂ ಊರ ಗ್ರಾಮಸ್ಥರು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ದೆಗಳು: ಪರ್ವ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ನಾಗರಿಕರಿಗೆ ದೈವಾರಾಧನೆ ವಿಚಾರದ ಕುರಿತು ಪ್ರಬಂಧ ರಚನೆ, ಭಾಷಣ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಹೂ ಕಟ್ಟುವ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಸಂಧಿ ಸ್ಪರ್ಧೆ, ತೆಂಗಿನ ಗರಿ, ಸೋಗೆ ಗರಿ, ಬೈಹುಲ್ಲು, ಬಾಳೆ ದಿಮಡು, ಹಾಳೆಯ ಕಲಾಕೃತಿ ವಿವಿಧ ಸ್ಫರ್ಧೆಗಳು ನಡೆಯಿತು.