ಬೆಳ್ತಂಗಡಿ: ಗರ್ಡಾಡಿ ಗ್ರಾಮದ ನಂದಿಬೆಟ್ಟ ಗುಂಡದ ಬಸ್ತಿ ಎಂಬಲ್ಲಿ 2 ವರ್ಷಗಳ ಹಿಂದೆ ಕೆಎಸ್‌ಆರ್ ಟಿಸಿ-ದ್ವಿ ಚಕ್ರ ವಾಹನದ ನಡುವೆ ಅಪಘಾತವಾಗಿ ದ್ವಿಚಕ್ರ ವಾಹನ ಸವಾರ ಮತ್ತು ಸಹಸವಾರ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಬಸ್ ಚಾಲಕನಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಯ ವಿರುದ್ದ ಅಂದಿನ ಸಿಪಿಐ (ಪ್ರಸ್ತುತ ಬಂಟ್ವಾಳ ಗ್ರಾ.ಠಾಣೆ)ಯಲ್ಲಿದ್ದ ಶಿವಕುಮಾರ್ ಬಿ. ಪ್ರಕರಣದ ತನಿಖೆಯನ್ನು ಮಾಡಿ, ಆರೋಪಿ ಕೆಎಸ್‌ಆರ್‌ಟಿಸಿ ಚಾಲಕ ವಿಶ್ವನಾಥ ಬಾಲ್ಕಿ ಅವರ ವಿರುದ್ದ ದೋಷರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಮಾನ್ಯ ಪ್ರಧಾನ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆಯಾಗಿ ಆರೋಪಿಗೆ ಕಲಂ 279 ಐಪಿಸಿಗೆ 3 ತಿಂಗಳು ಸೆರೆವಾಸ ಮತ್ತು 1,000 ರೂ. ದಂಡ, ದಂಡ ಕಟ್ಟಲು ತಪ್ಪಿದಲ್ಲಿ ಜೈಲು ಶಿಕ್ಷೆ ಮತ್ತು ಕಲಂ 304(ಎ) ಐಪಿಸಿಗೆ 2 ವರ್ಷ ಸೆರೆವಾಸ ಮತ್ತು 1,000 ರೂ. ದಂಡ, ದಂಡ ಕಟ್ಟಲು ತಪ್ಪಿದಲ್ಲಿ 1 ತಿಂಗಳ ಸೆರೆವಾಸದ ಶಿಕ್ಷೆ ವಿಧಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ;
ವೇಣೂರಿನ ಅಂಗರಕರಿಯ ಎಂಬಲ್ಲಿ ಸ್ವಂತ ಸಹೋದರಿಯ ಪತಿಯ ತಮ್ಮ (ಬಾವ) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ ಹಿನ್ನೆಲೆ ಉಪ್ಪಿನಂಗಡಿ ಸಮೀಪದ ಹಿರೆಬಂಡಾಡಿ ನಿವಾಸಿ, ನಿವೃತ ಶಿಕ್ಷಕ ದಿ| ಮರ್ಹೂಮ್ ಅಬ್ದುರ್ರಝಾಕ್ ಅವರ ಪುತ್ರರಾದ ಹಬ್ಬ ಸಿರಾಜ್ (30) ಮತ್ತು ಕುತುಬುದ್ದೀನ್ ಸಾದಿಕ್ (33) ಅವರು ಮರಣದ ಮನೆಗೆ ಹೋಗಿ ವಾಪಸಾಗುತ್ತಿದ್ದರು. ಈ ವೇಳೆ ಗುರುವಾಯನಕೆರೆ ಕಡೆಯಿಂದ ವೇಣೂರು ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಸ್ಕೂಟರ್‌ನಲ್ಲಿದ್ದ ಸವಾರರ ಮೇಲೆ ಎರಗಿತ್ತು. ಘಟನೆಯಲ್ಲಿ ಸವಾರರಿಬ್ಬರು ಬಸ್‌ನಡಿ ಸಿಲುಕಿದ್ದು, ಕುತುಬುದ್ದೀನ್ ಸಾಧೀಕ್ ಗಂಭೀರ ಗಾಯದಿಂದ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಹಮ್ಮಬ್ಬ ಸಿರಾಜುದ್ದೀನ್ ಸ್ಥಳದಲ್ಲೇ ಮೃತಪಟ್ಟಿದರು.