ಬೆಳ್ತಂಗಡಿ : ಚುನಾವಣೆಯ ಪ್ರಕ್ರಿಯೆಗಳು ತ್ವರಿತವಾಗಿ ನಡೆಯುತ್ತಿದ್ದಂತೆ ಚುನಾವಣೆಗಾಗಿ ನಿರ್ಮಿಸಲಾದ ವಿಶೇಷ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಬಿಗಿಗೊಂಡಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ಚಾರ್ಮಾಡಿ ಹಾಗೂ ನಾರಾವಿಯಲ್ಲಿ ಚುನಾವಣಾ ನೀತಿ ಸಂಹಿತೆ ಪಾಲಿಸುವ ಚೆಕ್ ಪೋಸ್ಟ್ ಗಳನ್ನು ಈಗಾಗಲೇ ತೆರೆಯಲಾಗಿದೆ. ದಿನದ 24 ಗಂಟೆಯೂ ಇವುಗಳ ಮೂಲಕ ಸಂಚರಿಸುವ ವಾಹನಗಳನ್ನು ಪರಿಶೀಲಿಸಿ ಮುಂದೆ ಬಿಡಲಾಗುತ್ತದೆ.
ಪ್ರತಿವಾಹನವನ್ನು ನಿಲ್ಲಿಸಿ ಅದರಲ್ಲಿ ಸಾಗಾಟ ಮಾಡುವ ವಸ್ತುಗಳನ್ನು ಪರಿಶೀಲಿಸಿದ ಬಳಿಕವಷ್ಟೇ ಸಂಚಾರಕ್ಕೆ ಅನುವು ಮಾಡಿಕೊಳ್ಳಲಾಗುತ್ತದೆ. ಇಲ್ಲಿ ಓರ್ವ ಸ್ಟಾಟಿಕ್ ಸರ್ವೆ ಲೈನ್ ಲೀಡರ್, ಅಬಕಾರಿ ಪೊಲೀಸ್, ಟ್ರಾಫಿಕ್ ಪೊಲೀಸ್, ಸ್ಥಳೀಯ ಠಾಣೆಯ ಪೊಲೀಸ್,ವಿಡಿಯೋ ಗ್ರಾಫರ್ ಸೇರಿದಂತೆ ಮೂರು ಪಾಳಿಗಳಲ್ಲಿ ಬೇರೆ ಬೇರೆ ತಂಡಗಳು ಕಾರ್ಯನಿರ್ವಹಿಸುತ್ತವೆ. ಇದು ಚುನಾವಣಾ ನೀತಿ ಸಂಹಿತೆ ಕೊನೆಗೊಳ್ಳುವವರೆಗೂ ಮುಂದುವರಿಯಲಿದೆ.
ಕಾರ್ಯನಿರ್ವಹಿಸದ ಗೇಟ್
ಚಾರ್ಮಾಡಿ ಚೆಕ್ ಪೋಸ್ಟ್ ನಲ್ಲಿ ಗೇಟ್ ಇದ್ದರು ಅದು ಬಳಸಲು ಸಾಧ್ಯವಾಗದ ಸ್ಥಿತಿಯಲ್ಲಿದೆ. ಈ ಕಾರಣದಿಂದ ಇಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ವಾಹನ ತಪಾಸಣೆ ನಡೆಸಲಾಗುತ್ತದೆ. ಪರಿಸರದಲ್ಲಿ ಹೆದ್ದಾರಿ ಅಗಲೀಕರಣ ಕಾಮಗಾರಿಯು ನಡೆಯುತ್ತಿದ್ದು ವಿಪರೀತ ಧೂಳಿನ ವಾತಾವರಣವು ಕಂಡು ಬರುತ್ತದೆ. ಇಲ್ಲಿ ರಸ್ತೆಯು ಇಕ್ಕಟ್ಟಾಗಿದ್ದು ವಾಹನ ಸಂಚಾರಕ್ಕೂ ಸಮಸ್ಯೆ ಇದೆ. ತಪಾಸಣೆ ಸಂದರ್ಭ ವಾಹನಗಳ ಸರತಿಯು ಹೆಚ್ಚುತ್ತಿದೆ.
ಪಂಚಾಯಿತಿ ಕೆಲಸ ಕುಂಠಿತ
ಚೆಕ್ ಪೋಸ್ಟ್ ಗಳಲ್ಲಿ ಕೆಲವು ಪಂಚಾಯಿತಿ ಪಿಡಿಒ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು ಇವರು ನೀತಿ ಸಂಹಿತೆ ಕೊನೆಗೊಳ್ಳುವವರೆಗೂ ಕಾರ್ಯನಿರ್ವಹಿಸಬೇಕಾಗಿದೆ ದಿನದ 8 ಗಂಟೆ ಇವರಿಗೆ ಕಡ್ಡಾಯ ಚೆಕ್ ಪೋಸ್ಟ್ ನಿರ್ವಹಣೆ ಜವಾಬ್ದಾರಿ ಇರುತ್ತದೆ. ಈ ಕಾರಣದಿಂದ ಪಂಚಾಯಿತಿಗಳಿಗೆ ಹೋಗಲು ಸಮಯಾವಕಾಶ ಸಿಗುವುದಿಲ್ಲ ಇದರಿಂದ ಯಾವ ಪಂಚಾಯಿತಿಗಳ ಪಿಡಿಒಗಳಿಗೆ ಹಾಗೂ ಸಿಬ್ಬಂದಿಗಳಿಗೆ ಚೆಕ್ ಪೋಸ್ಟ್ ಜವಾಬ್ದಾರಿ ನೀಡಲಾಗಿದೆಯೇ ಅಂತಹ ಪಂಚಾಯಿತಿಗಳ ಗ್ರಾಮಸ್ಥರ ಕೆಲಸಗಳು ಸಾಗುತ್ತಿಲ್ಲ ಎಂಬ ದೂರು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.