ಬೆಳ್ತಂಗಡಿ: ಉಜಿರೆ ಸಂತ ಅಂತೋನಿ ಚರ್ಚ್ ನ ಸಂತ ಲಾರೆನ್ಸ್ ವಾಳೆಯ ‘ರೋಜಿ ಪಾಯ್ಸ್’ ಎಂಬ ಅರ್ಹ ಕುಟುಂಬಕ್ಕೆ ಉಜಿರೆ ಸಂತ ಅಂತೋನಿ ಚರ್ಚ್ ನ ಮುಂದಾಳತ್ವದಲ್ಲಿ ನೂತನ ಮನೆ ನಿರ್ಮಾಣಕ್ಕೆ ಎ.2ರಂದು ಚರ್ಚ್ ನ ಧರ್ಮಗುರು ಫಾ.ಜೇಮ್ಸ್ ಡಿಸೋಜ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಫಾ.ವಿಜಯ್ ಲೋಬೋ, ಪ್ರಸ್ತುತ ತಾಂಜಾನಿಯಾದಲ್ಲಿ ಸೇವೆ ನೀಡುತ್ತಿರುವ ಫಾ.ಸುನಿಲ್ ಮಿನೇಜಸ್, ಪಾಲನಾ ಮಂಡಳಿ ಉಪಾಧ್ಯಕ್ಷ ಹಾಗೂ ಈ ಯೋಜನೆಯ ಮೇಲ್ವಿಚಾರಾಕ ಆಂಟೋನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್, ವಾಳೆಯ ಗುರಿಕಾರ ವಿಲಿಯಂ ಡಿಸೋಜ, ವಾಳೆಯ ಪ್ರತಿನಿಧಿ ಗಳಾದ ರಾಬರ್ಟ್ ಹಾಗೂ ಮರ್ಲಿನ್ ಡಿಸೋಜ, ಎಸ್.ವಿ.ಪಿ ಅಧ್ಯಕ್ಷ ರಿಚರ್ಡ್ ಡಿಸೋಜ, ಸಮುದಾಯ ಸಂಚಾಲಕ ರೋಶನ್ ಡಿಸೋಜ, ದಾನಿಗಳು, ಪಲಾನುಭವಿಯ ಕುಟುಂಬಸ್ಥರು ಉಪಸ್ಥಿತರಿದ್ದರು.
ಸಂತ ಅಂತೋನಿ ಚರ್ಚ್ ವತಿಯಿಂದ ಬಡ ಹಾಗೂ ಅರ್ಹ ಕುಟುಂಬಗಳಿಗೆ ಕಳೆದ ನಾಲ್ಕು ವರ್ಷಗಳಿಂದ ಮನೆ ನವೀಕರಣ ಹಾಗೂ ಹೊಸ ಮನೆಗಳನ್ನು ದಾನಿಗಳ ನೆರವಿನಿಂದ ಕಟ್ಟಿಕೊಡುವ ಯೋಜನೆಯನ್ನು ಹಮ್ಮಿಕೊಂಡಿದ್ದು, ಈಗಾಗಲೇ ಸುಮಾರು 23 ಲಕ್ಷ ರೂಪಾಯಿ ವೆಚ್ಚದಲ್ಲಿ ನಾಲ್ಕು ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ.