ಬೆಳ್ತಂಗಡಿ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ತೀರಾ ಅವೈಜ್ಞಾನಿಕವಾಗಿ ನಡೆಯುತ್ತಿದ್ದು ನಾಗರಿಕರು, ವಾಹನ ಸವಾರರು ಬೇಸತ್ತು ಹೋಗಿದ್ದಾರೆ.
33.1 ಕಿ.ಮೀ. ವ್ಯಾಪ್ತಿಯಲ್ಲಿ ಅಗಲೀಕರಣದ ನೆಪದಲ್ಲಿ ಬೇಕಾಬಿಟ್ಟಿ ರಸ್ತೆಯನ್ನು ಅಗೆದು ಹಾಕಲಾಗಿದೆ. ಇದರಿಂದ ವಾಹನ ಸವಾರರು ಪರದಾಟ ನಡೆಸುವಂತಾಗಿದೆ. ರಸ್ತೆ ಅಭಿವೃದ್ಧಿ ಕುರಿತು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ಸಾರ್ವಜನಿಕರಲ್ಲಿ ಭ್ರಮನಿರಸನ ಉಂಟಾಗಿದೆ.
ರಸ್ತೆಯಿಂದ ಮೇಲೇಳುವ ಧೂಳು ವಾಹನ ಸವಾರರನ್ನು ಹೈರಾಣರಾಗಿಸುತ್ತಿದೆ. ಮುಂಬದಿಯಿಂದ ಬರುವ ವಾಹನಗಳು ಕಾಣದಷ್ಟು ದಟ್ಟವಾದ ಧೂಳು ಮೇಲೆ ಏಳುತ್ತಿದೆ. ರಸ್ತೆ ಬದಿಗಳಲ್ಲಿ ವಾಸಿಸುವ ಮನೆ ಮಂದಿ ನಾನಾ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ಒಂದು ಕಡೆ ರಸ್ತೆ ಅಗೆದ ಬಳಿಕ ಅಲ್ಲಿ ಕಾಮಗಾರಿ ಪೂರ್ಣಗೊಳಿಸದೆ ಮತ್ತೊಂದೆಡೆ ರಸ್ತೆ ಅಗೆಯುತ್ತಿರುವುದು ನಾಗರಿಕರ ಆಕ್ರೋಶ ಹೆಚ್ಚಿಸಿದೆ. ರಸ್ತೆ ಅಗೆದು ಹಾಕಿರುವುದು ಅಪಘಾತಗಳಿಗೂ ಕಾರಣವಾಗುತ್ತಿದೆ.
ಒಂದು ಕಡೆಯಲ್ಲಿ ಕಾಮಗಾರಿ ಆರಂಭಿಸಿ, ಆ ಪರಿಸರದ ಕೆಲವು ಕಿ.ಮೀ ರಸ್ತೆ ಕಾಮಗಾರಿ ಪೂರ್ಣಗೊಳಿಸುತ್ತಿದ್ದರೆ ಇಂತಹ ಸಮಸ್ಯೆಗಳು ಬರುತ್ತಿರಲಿಲ್ಲ ಎಂಬುದು ನಾಗರಿಕರ ಅಭಿಪ್ರಾಯ.
ಆದರೆ ರಸ್ತೆಯನ್ನು ಎಲ್ಲೆಂದರಲ್ಲಿ ಅಗೆದು ಹಾಕಿ ಜನಸಾಮಾನ್ಯರಿಗೆ ಸಮಸ್ಯೆ ಉಂಟಾಗುವಂತೆ ಕಾಮಗಾರಿ ನಿರ್ವಹಿಸುವುದು ಯಾಕೆ ಎಂಬುದು ಉತ್ತರವಿಲ್ಲದ ಪ್ರಶ್ನೆಯಾಗಿದೆ. ಈ ಬಗ್ಗೆ ಗುತ್ತಿಗೆದಾರ ಕಂಪನಿ ಅಧಿಕಾರಿಗಳನ್ನು ಕೇಳಿದರೆ ಅವರು ತಡವರಿಸುತ್ತಿದ್ದಾರೆ.
ಒಟ್ಟಿನಲ್ಲಿ ಈ ಅವೈಜ್ಞಾನಿಕ ಕಾಮಗಾರಿ ನುಂಗಲಾಗದ ತುತ್ತಾಗಿ ಪರಿಣಮಿಸಿದೆ.
ಒಂದೆಡೆ ಧೂಳು ಇನ್ನೊಂದೆಡೆ ವಿಪರೀತ ನೀರು
ದಿನವಿಡೀ ಏಳುವ ಧೂಳಿಗೆ ಬೆಳಿಗ್ಗೆ ಒಂದು ಬಾರಿ ಉಜಿರೆ ಪರಿಸರದಲ್ಲಿ ಮಾತ್ರ ನೀರು ಹಾಯಿಸಲಾಗುತ್ತಿದೆ. ಆದರೆ ನೀರು ಮಿತಿಗಿಂತ ಅಧಿಕ ಹಾಕುವುದರಿಂದ ಕೆಸರು ಉಂಟಾಗಿ ದ್ವಿಚಕ್ರ ವಾಹನ ಸವಾರರು ಜಾರಿ ಬೀಳುತ್ತಿದ್ದಾರೆ.
ಇನ್ನೊಂದೆಡೆ ಮುಂಡಾಜೆ ಭಾಗದಲ್ಲಿ ನೀರನ್ನೆ ಹಾಕುತ್ತಿಲ್ಲ. ಇಲ್ಲಿ ಧೂಳು ವಿಪರೀತವಾಗಿ ಆವರಿಸಿ ಲಘು ವಾಹನ ಸವಾರರು ತೀವ್ರ ಸಮಸ್ಯೆ ಎದುರಿಸುವಂತಹಾಗಿದೆ. ಸೀಟು ಪರಿಸರದ ಸುಮಾರು 3 ಕಿ.ಮೀ. ವ್ಯಾಪ್ತಿಯಲ್ಲಿ ರಸ್ತೆಯ ಇಕ್ಕೆಲಗಳನ್ನು ಎತ್ತರಿಸಲಾಗಿದ್ದು ಇದರಲ್ಲಿ ದ್ವಿಚಕ್ರ ವಾಹನ ಸವಾರರು ಸಂಚರಿಸಿ ಬೀಳುತ್ತಿದ್ದಾರೆ.ರಸ್ತೆಯ ಬದಿಗಳನ್ನು ಯಾಕೆ ಎತ್ತರಿಸಲಾಗಿದೆ ಎಂದು ಅರ್ಥವಾಗುತ್ತಿಲ್ಲ. ಎರಡು ಬದಿಗಳಲ್ಲೂ ಸಂಪರ್ಕ ರಸ್ತೆಗಳಿದ್ದು ಅಲ್ಲಿಂದ ಬರುವ ವಾಹನ ಸವಾರರಿಗೆ ರಸ್ತೆ ಬದಿ ಎತ್ತರಿಸಿರುವುದು ಸಮಸ್ಯೆ ನೀಡಿದೆ.
ನಾಗರಿಕರ ಆಕ್ರೋಶ
ಅವೈಜ್ಞಾನಿಕವಾಗಿ ರಸ್ತೆ ಕಾಮಗಾರಿ ನಡೆಸುತ್ತಿರುವ ಕುರಿತು ಸೋಮವಾರ ಉಜಿರೆ ಪರಿಸರದ ಜನರು, ವಾಹನ ಸವಾರರು ಕಾಮಗಾರಿ ನಡೆಯುತ್ತಿರುವ ಜಾಗದಲ್ಲಿ ಗುತ್ತಿಗೆದಾರ ಕಂಪನಿಯ ಅಧಿಕಾರಿ ವರ್ಗವನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಘಟನೆ ರಸ್ತೆಯಲ್ಲೇ ನಡೆದ ಕಾರಣ ಈ ವೇಳೆ ನೂರಾರು ವಾಹನಗಳ ಸರದಿ ಸಾಲು ಕಂಡು ಬಂತು. ಸುಮಾರು ಒಂದು ತಾಸು ಕಾಲ ನಾಗರಿಕರು ಅಧಿಕಾರಿಗಳ ಜತೆ ಚರ್ಚೆ ನಡೆಸಿದರು ಸಮಾಧಾನಕರ ಉತ್ತರ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.