ಬೆಳ್ತಂಗಡಿ: ಇಂದು ಉಜಿರೆಯಲ್ಲಿ ನಡೆಯಲಿರುವ ಬಿಜೆಪಿ ರೋಡ್ ಶೋ ದಲ್ಲಿ ಭಾಗವಹಿಸಲು ಮಹಿಳೆಯರಿಗೆ ಸೀರೆ ವಿತರಣೆ ಮಾಡಿ ಆಮಿಷ ಒಡ್ಡಲಾಗಿದ್ದು, ಇದರ ಬಗ್ಗೆ ತನಿಖೆ ನಡೆಸಲು ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿಯ ಸಂಯೋಜಕಿ ಲೋಕೇಶ್ವರಿ ವಿನಯಚಂದ್ರ ಹೇಳಿದರು.
ಅವರು ಎ. 20ರಂದು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಚುನಾವಣೆ ಸಂದರ್ಭದಲ್ಲಿ ಹಣ, ಹೆಂಡ ಹಂಚಿ ಮತದಾರರನ್ನು ತಮ್ಮತ್ತ ಸೆಳೆಯುತ್ತಿದೆ ಎಂದು ಆರೋಪಿಸಿದರು.
ಚುನಾವಣಾ ಉಸ್ತುವಾರಿ ಧರಣೇಂದ್ರ ಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿಯಿಂದಾಗಿ, ತಾಲೂಕಿನಲ್ಲಿ ಮಹಿಳೆಯರು ಕಾಂಗ್ರೆಸ್ ನತ್ತ ಒಲವು ತೋರಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಆಡಳಿತದಲ್ಲಿ ವಿಪರೀತ ಬೆಲೆ ಏರಿಕೆ ಆಗಿದ್ದು, ಜನರು ಜೀವನ ದುಸ್ತರವಾಗಿದೆ ಎಂದು ಆಪಾದಿಸಿದರು.
ಜಿ.ಪಂ ಮಾಜಿ ಸದಸ್ಯ ಶೇಖರ ಕುಕ್ಕೇಡಿ ಮಾತನಾಡಿ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಹಾಗೂ ಮಹಿಳೆಯರಿಗೆ ರೂ. 1 ಲಕ್ಷ ಯೋಜನೆಯಿಂದಾಗಿ ಮಹಿಳೆಯರು ಕಾಂಗ್ರೆಸ್ ಗೆ ಬೆಂಬಲ ನೀಡುತ್ತಿರುವುದರಿಂದ ಭಯಗೊಂಡ ಬಿಜೆಪಿ ರೋಡ್ ಶೋ ನೆಪದಲ್ಲಿ ಮಹಿಳೆಯರಿಗೆ ಸೀರೆ ವಿತರಣೆ ಮಾಡುವ ಹಂತಕ್ಕೆ ಬಂದಿದೆ. ಇದನ್ನು ನಾವು ಖಂಡಿಸುತ್ತೇವೆ.ದ.ಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನ್ಯಾಯವಾದಿ ಸಂತೋಷ್ ಕುಮಾರ್ ಮಾತನಾಡಿ, ಬಿಜೆಪಿ ಪಕ್ಷದ ವತಿಯಿಂದ ಸೀರೆ ವಿತರಣೆ ಮಾಡಿದ ಬಗ್ಗೆ ಇಂದು ಬೆಳಗ್ಗೆ ಬೆಳ್ತಂಗಡಿಯಲ್ಲಿ ಸಹಾಯಕ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದೇವೆ. ಬಿಜೆಪಿ ವಿತರಣೆ ಮಾಡಿದ ಸೀರೆಯನ್ನು ರೋಡ್ ಶೋ ಗೆ ಧರಿಸಿಕೊಂಡು ಬಂದ ಮಹಿಳೆಯರನ್ನು ಬಂಧಿಸಲು ದೂರಿನಲ್ಲಿ ಒತ್ತಾಯಿಸಲಾಗಿದೆ. ಒಂದೇ ಕಲರ್ ನ ಸೀರೆಯನ್ನು ಹೆಚ್ಚು ಮಹಿಳೆಯರು ಧರಿಸಿ ಬಂದರೆ ಅಕ್ರಮ ನಡೆದಿದೆ ಎಂದು ಗೊತ್ತಾಗುತ್ತದೆ. ಸೀರೆ ಖರೀದಿ ಬಗ್ಗೆ ಅವರು ದಾಖಲೆ ನೀಡಬೇಕಾಗುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಲ್ಪಸಂಖ್ಯಾತ ಚುನಾವಣಾ ಉಸ್ತುವಾರಿ ಹನೀಫ್ ಕಾಶಿಬೆಟ್ಟು ಉಪಸ್ಥಿತರಿದ್ದರು.