11ನೇ ಶತಮಾನ ಕ್ರಿ.ಶ. 1260 ರಲ್ಲಿ ನಿರ್ಮಾಣವಾದ ಕ್ಷೇತ್ರ: ಮೇ 3ರಿಂದ ನಾರಾವಿ ಬಸದಿಯ ಧಾಮ ಸಂಪ್ರೋಕ್ಷಣೆ

Suddi Udaya

ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ನಾರಾವಿಯ ಮಾಗಣೆ ಭಗವಾನ್ ಧರ್ಮನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣೆ ಮೇ 3 ರಿಂದ ಮೇ 5 ವರೆಗೆ ನಡೆಯಲಿದೆ
ಇದು ಭವ್ಯ ಪರಂಪರೆಯ ತುಳುನಾಡು. ಜೈನ ಧರ್ಮವೇ ರಾಜಧರ್ಮವಾಗಿತ್ತು. ಈ ಕಾರಣದಿಂದಾಗಿಯೇ ಇಲ್ಲಿ ಬಹಳ ಬಸದಿಗಳಿವೆ. ಬಸದಿಗಳೆಲ್ಲವೂ ಜಿನಧರ್ಮದ ಹಿರಿಮೆ ಗರಿಮೆಯನ್ನು ಸಾರುತ್ತಾ ಬರುತ್ತಿವೆ. ನೂರಾರು ಎಕರೆ ಹೊಲಗಳ ಒಡೆಯರಾಗಿದ್ದ ಜೈನ ಬಂಧುಗಳು ಭೂಮಸೂದೆಯ ಕಾರಣದಿಂದಾಗಿ ಅರಮನೆ, ಬೀಡು, ಗುತ್ತುಗಳು, ಕೃಷಿಭೂಮಿಗಳು ಸಂಪತ್ತೆಲ್ಲವನ್ನು ಕಳೆದುಕೊಂಡು ಅಕ್ಷರಶಃ ಬೀದಿಗೆ ಬಂದರು.‌ ಆದರೆ ತಾವು ನಂಬಿದ ಸಿದ್ಧಾಂತಗಳನ್ನು, ಪರಂಪರೆಗಳನ್ನು, ಸಾಂಸ್ಕೃತಿಕ ವೈಭವವನ್ನು ಆಚರಣೆಗಳನ್ನು ಅಳಿದುಉಳಿದ ಸಂಪತ್ತಿನಲ್ಲಿ ನಡೆಸಿಕೊಂಡು ಬಂದರು. ರಾಜಕೀಯ , ಸಾಮಾಜಿಕ‌

ಅಭದ್ರತೆಗಳಿದ್ದರೂ ಮತ್ತೆ ಮತ್ತೆ ಫೀನಿಕ್ಸ್ ಪಕ್ಷಿಯಂತೆ ಎದ್ದು ನಿಂತು ಮೈಕೊಡವಿ ಸಾಮಾಜಿಕ ಜೀವನದಲ್ಲಿ ಹೋರಾಟ ನಡೆಸಿದರು. ತಮ್ಮ ಮನೆಯ ಕುಲದೇವರಿಗೆ , ತಮ್ಮ ವ್ಯಾಪ್ತಿಯ ಬಸದಿಗಳಿಗೆ, ದೇವಾಲಯಗಳಿಗೆ, ಭೂತಾಲಯಗಳಿಗೆ, ನಾಗಾರಾಧನೆಗೆ ತನು – ಮನ – ಧನಗಳ ಸಹಕಾರವನ್ನು / ಮುಂದಾಳತ್ವವನ್ನು ಟೊಂಕಕಟ್ಟಿ ವಹಿಸಿಕೊಂಡರು. ತಮ್ಮ ಬಳಿ ಈಗ ಇರುವ ಅರಮನೆ, ಬೀಡು, ಗುತ್ತುಗಳ ಮೂಲಕ ನಾಡಿನ ಧಾರ್ಮಿಕ / ಸಾಮಾಜಿಕ ಪರಂಪರೆಗೆ ಗೌರವ ಕೊಟ್ಟು ನೇಮದಿಂದ ನಡೆದುಕೊಳ್ಳುತ್ತಿದ್ದಾರೆ. ಇದು ಜೈನ ಧರ್ಮದ ಹಿರಿಮೆಗರಿಮೆಯಾಗಿದೆ.

ಪುರಾತನ ಜೈನ ಬಸದಿನಾರಾವಿ

ನಾರಾವಿಯ ಪರಿಸರದಲ್ಲಿ ಮೂರು ಬಸದಿಗಳಿವೆ. ಮೂಲ ಧರ್ಮನಾಥ ಸ್ವಾಮಿ ಬಸದಿಯ ನಿರ್ಮಾಣದ ಕಾಲ ಸರಿ ಸುಮಾರು 11 ನೇ ಶತಮಾನ. ನಂತರ ಕ್ರಿ.ಶ. 1260 ರಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತ ರಾಣಿ ಮಂಗಳೂರಿನ ಭೈರಲಾ ದೇವಿ ನಾರಾವಿ ಪರಿಸರದಲ್ಲಿ ಭಗವಾನ್ ಶಾಂತಿನಾಥ, ಭಗವಾನ್ ಅನಂತನಾಥ ಮೂಲ ನಾಯಕರಿರುವ ಎರಡು ಬಸದಿಗಳನ್ನು ನಿರ್ಮಿಸಿದಳೆಂದು ಶಾಸನ ಆಧಾರ ದೊರಕುತ್ತದೆ. ಬಹಳ ವೈಭವದಿಂದ ಈ ಮೂರೂ ಬಸದಿಗಳಲ್ಲಿ ಪೂಜೆ ಉತ್ಸವಗಳು ನಡೆಯುತ್ತಿದ್ದವು. ಕರಾಳ ಭೂಮಸೂದೆಯ ಕಾರಣದಿಂದ ಬಸದಿಗೆ ಸಂಬಂಧ ಪಟ್ಟ ನೂರಾರು ಎಕರೆ ಭೂಮಿ ಅನ್ಯರ ಪಾಲಾಯಿತು. ಹಾಗಾಗಿ ಮತ್ತು ಜೈನರ ಸಂಖ್ಯೆ ಕ್ಷೀಣವಾದಂತೆ ಬಸದಿಯ ಆಗುಹೋಗುಗಳು ಕುಂಟತೊಡಗಿದವು.

ಆದರೂ ಛಲ ಬಿಡದ ಜೈನರು ಬಸದಿಯ ಪುನರುತ್ಥಾನಕ್ಕೆ ಮುಂದಾದರು. ಕೊಲ್ಲಂಜೆ ಮನೆತನದವರು ನಾರಾವಿ ಬಸದಿಯನ್ನು ಜೀರ್ಣೋದ್ಧಾರ ಮಾಡಿ ವೈಭವದ ಪಂಚಕಲ್ಯಾಣ ನೆರವೇರಿಸಿದರು. ಅದರ ನಂತರ ಶಾಂತಿನಾಥ ಸ್ವಾಮಿ ಬಸದಿ, ಅನಂತನಾಥ ಸ್ವಾಮಿ ಬಸದಿಯನ್ನು ಭಗವಾನ್ ಧರ್ಮನಾಥ ಸ್ವಾಮಿ ಬಸದಿಯ ಸಮುಚ್ಛಯದಲ್ಲಿ ಪ್ರತಿಷ್ಠಾಪಿಸಲಾಗಿ ವೈಭವದ ಪಂಚಕಲ್ಯಾಣ ಮಾಡಲಾಯಿತು.

ಬೆಳ್ತಂಗಡಿ ಕಾರ್ಕಳ ಹೆದ್ದಾರಿಗೆ ತಾಗಿಕೊಂಡೇ ನಾರಾವಿ ಬಸದಿಗಳು ಧರೆಗೆ ಅನುಪಮವಾಗಿ ಕಂಗೊಳಿಸುತ್ತಿದೆ. ಇದೀಗ ಮತ್ತೆ ಜೀರ್ಣೋದ್ಧಾರವಾಗಿ ಇದೇ ಮೇ ತಿಂಗಳ 3, 4, 5 ರಂದು ವೈಭವದ ಧಾಮಸಂಪ್ರೋಕ್ಷಣೆ ನಡೆಯಲಿದೆ. ಕಾರ್ಕಳ ಜೈನ ಮಠ ಹಾಗೂ ಮೂಡುಬಿದಿರೆ ಜೈನಮಠಗಳ ಸಹಿತ ಪೂಜ್ಯ ಭಟ್ಟಾರಕರುಗಳು, ಧರ್ಮಸ್ಥಳದ ಧರ್ಮಾಧಿಕಾರಿಗಳು ಸಾಕ್ಷಿಯಾಗಲಿದ್ದಾರೆ.

ಅಭೂತಪೂರ್ವ ತೀರ್ಥಂಕರವನ
ನಾರಾವಿ ಬಸದಿಯಲ್ಲಿ ಇನ್ನೊಂದು ವಿಶೇಷವಿದೆ. ಅದುವೇ ತೀರ್ಥಂಕರ ವನ. ನಮ್ಮ ತೀರ್ಥಂಕರರು ತಪಸ್ಸಿನ ಸಮಯದಲ್ಲಿ ಒಂದು ವೃಕ್ಷದ ಕೆಳಗೆ ಧ್ಯಾನಾಸಕ್ತರಾಗುತ್ತಿದ್ದರು. ಪ್ರತಿಯೊಬ್ಬ ತೀರ್ಥಂಕರರಿಗೂ ಪ್ರತ್ಯೇಕ ಪ್ರತ್ಯೇಕ ಜಾತಿಯ ವೃಕ್ಷಗಳು ಇದ್ದವು.‌ ನಾರಾವಿ ಬಸದಿಯವರು ಒಂದು ಅದ್ಭುತವಾದ ಕೆಲಸಮಾಡಿ ಅದೇ ಜಾತಿಯ 24 ವೃಕ್ಷಗಳ ವನವೊಂದನ್ನು ನಿರ್ಮಿಸಿ ದಾಖಲೆ ಮಾಡಿದ್ದಾರೆ.‌ ಆ ವೃಕ್ಷ ಸಮೂಹಗಳನ್ನು ಕಂಡಾಗ ನಮಗೆ ಸಾಕ್ಷಾತ್ 24 ತೀರ್ಥಂಕರರು ತಪಗೈಯ್ಯುತ್ತಿದ್ದಾರೆ ಎಂದು ಭಾಸವಾಗುತ್ತದೆ.‌ ಇದರೊಳಗೆ ಸಂಚಾರ ಮಾಡಿದರೆ ಅನಿರ್ವಚನೀಯ ಪುಳಕವಾಗುತ್ತದೆ. ಇದು ನಾರಾವಿ ಬಸದಿಯ ಹೆಮ್ಮೆಯ ಹೆಗ್ಗಳಿಕೆಯಾಗಿದೆ.

ಇನ್ನೊಂದು ಸೂಚನೆ – ಧಾಮಸಂಪ್ರೊಕ್ಷಣೆಗೆ ಬರುವವರು ದಾರಿಯಲಿ ಸಿಗುವ ಸುಲ್ಕೇರಿಯ ನೂತನ ಶಿಲಾಮಯ ಬಸದಿ ಹಾಗೂ ಪರುಷಗುಡ್ಡೆ ಬಸದಿಯ ದರ್ಶನ, ಹೊಸ್ಮಾರಿನ ಸಿದ್ಧರವನ‌ ಬಸದಿಯ ದರ್ಶನ ಮಾಡಬಹುದು. ಅಂದ ಹಾಗೆ ಪರುಷಗುಡ್ಡೆ ಬಸದಿಯಲ್ಲಿ ಸಮ್ಮೇದಗಿರಿಯನ್ನು ಕೃತಕವಾಗಿ ನಿರ್ಮಿಸಲಾಗಿದೆ. ಈ ಮೂಲಕ 24 ತೀರ್ಥಂಕರರ ಪರಮ ಪಾದುಕೆಯ ದರ್ಶನವನ್ನೂ ಮಾಡಬಹುದು.

  • ನಿರಂಜನ್ ಜೈನ್ ಕುದ್ಯಾಡಿ

Leave a Comment

error: Content is protected !!