ಉಜಿರೆ :, ಜುಲೈ 8 : ಶ್ರೀ ಧ.ಮಂ. ಕಾಲೇಜು ( ಸ್ವಾಯತ್ತ) , ಉಜಿರೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ 2024- 25 ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವು ಕಾಲೇಜಿನ ಸಮ್ಯಗ್ದರ್ಶನ ಸಭಾಂಗಣದಲ್ಲಿ ಇಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್.ಡಿ.ಎಂ.ಕಾಲೇಜಿನ ಎನ್.ಎಸ್.ಎಸ್.ಘಟಕದ ರಾಜ್ಯ ಪ್ರಶಸ್ತಿ ವಿಜೇತ ಹಿರಿಯ ಸ್ವಯಂಸೇವಕರು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಮಾಧವ ಎಂ.ಕೆ. ಅವರು,
” ತಮ್ಮ ಕಾಲೇಜು ದಿನಗಳು ಹಲವಾರು ನೆನಪುಗಳನ್ನು ಮತ್ತು ಪಾಠಗಳನ್ನು ಕಲಿಸಿಕೊಟ್ಟಿದೆ. ಉಜಿರೆ ಕಾಲೇಜು ಮತ್ತು ಎನ್.ಎಸ್.ಎಸ್. ನನ್ನನ್ನು ಬೆಳೆಸಿದೆ ಮತ್ತು ಬದುಕನ್ನು ಕಲಿಸಿದೆ. ಪ್ರಶಸ್ತಿಗಿಂತ ಮೀರಿದ ಒಂದು ಭಾವ ಎಂದರೆ ಅದು ರಾಷ್ಟ್ರೀಯ ಸೇವಾ ಯೋಜನಾ ಘಟಕ.”
ಡಾ.ಮಾಧವ ಎಂ.ಕೆ. ಅವರು ಬದುಕಿನ ಮೌಲ್ಯಗಳ ಕುರಿತು ಮಾತನಾಡುತ್ತಾ,
ಆತ್ಮವಿಶ್ವಾಸವನ್ನು ಜಾಗೃತಿಗೊಳಿಸಿದರೆ ಅದಕ್ಕಿಂತ ಒಳ್ಳೆಯ ವಿಚಾರ ಮತ್ತೊಂದಿಲ್ಲ. ಎಂದರು. ಒಳ್ಳೆಯತನ, ಮಾನವೀಯತೆ ಇದ್ದರೆ ಜನರು ನಮ್ಮನ್ನು ಗುರುತಿಸುತ್ತಾರೆ ಹೊರತು ನಮ್ಮ ಹುದ್ದೆಯನ್ನಲ್ಲ ಎನ್ನುವ ವಿಚಾರವನ್ನು ತಿಳಿಸುವುದರ ಜೊತೆಗೆ ತಮ್ಮ ಶಿಬಿರದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ಡಾ. ಬಿ. ಎ.ಕುಮಾರ ಹೆಗ್ಡೆ ಮಾತನಾಡಿ,
” ಸೇವೆ ಎನ್ನುವುದು ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುವಂತಹದ್ದು.ನನಗಲ್ಲ ನಿನಗೆ ಎನ್ನುವ ಧ್ಯೇಯವಾಕ್ಯದಡಿ ಎನ್.ಎಸ್ ಎಸ್. ಘಟಕ ಸೇವೆಯನ್ನು ನಿರಂತರವಾಗಿ ಮಾಡುತ್ತಿದೆ.ಸಾಮಾಜಿಕ ಜಾಲತಾಣದಲ್ಲಿ ಮುಳುಗಿರುವ ಈ ವಾಸ್ತವ ಜಗತ್ತಿನಲ್ಲಿ ಸಮಾಜಮುಖಿಗಳಾಗಿ ಸಮಾಜದ ಸ್ವಾಸ್ಥ್ಯ ಕಾಪಾಡಬೇಕಿದೆ.” ಎನ್ನುವ ಶುಭನುಡಿಗಳನ್ನಾಡಿದರು.
ನೂತನ ಸ್ವಯಂಸೇವಕ ನಾಯಕರಿಗೆ ಹಿರಿಯ ಸ್ವಯಂಸೇವಕರು ಅಧಿಕಾರವನ್ನು ಹಸ್ತಾಂತರ ಮಾಡಿದರು. ಕಾರ್ಯಕ್ರಮದಲ್ಲಿ ಸ್ವಯಂಸೇವಕರಿಂದ ತಯಾರಿಸಲ್ಪಟ್ಟ ಭಿತ್ತಿಪತ್ರವನ್ನು ಅನಾವರಣಗೊಳಿಸಲಾಯಿತು.
ಉದ್ಘಾಟನಾ ಕಾರ್ಯಕ್ರಮದ ನಂತರ ನೂತನವಾಗಿ ಆಯ್ಕೆಗೊಂಡ ಸ್ವಯಂಸೇವಕರಿಗೆ ಪ್ರಶಿಕ್ಷಣ ಕಾರ್ಯಕ್ರಮವನ್ನು ಡಾ. ಮಾಧವ್ ಎಂ.ಕೆ. ಅವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಯೋಜನಾಧಿಕಾರಿಗಳು , ಹಿರಿಯ ಸ್ವಯಂಸೇವಕರು ಮತ್ತು ಪ್ರಥಮ ಹಾಗೂ ದ್ವಿತೀಯ ವರ್ಷದ ಸ್ವಯಂಸೇವಕರು ಉಪಸ್ಥಿತರಿದ್ದರು.ಯೋಜನಾಧಿಕಾರಿ ಡಾ.ಮಹೇಶ್ ಕುಮಾರ್ ಶೆಟ್ಟಿ ಹೆಚ್. ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಇನ್ನೋರ್ವ ಯೋಜನಾಧಿಕಾರಿಯಾದ ಪ್ರೊ. ದೀಪಾ ಆರ್. ಪಿ. ವಂದಿಸಿದರು. ಸ್ವಯಂಸೇವಕಿ ಶ್ವೇತಾ ಕೆ.ಜಿ.ಕಾರ್ಯಕ್ರಮ ನಿರೂಪಿಸಿದರು.