ಉಜಿರೆ: ಪ್ರಾಚೀನ ಕಾಲದ ಗುರುಕುಲ ಪದ್ಧತಿಯಲ್ಲಿ ಗುರುಗಳು ಅಲ್ಲಲ್ಲಿಯೇ ವಿದ್ಯಾ ಸಂಶಯಗಳನ್ನು ನಿವಾರಣೆ ಮಾಡಿ ಸರಿಯಾದ ಜೀವನ ಮಾರ್ಗದರ್ಶನ ನೀಡುತ್ತಿದ್ದರು. ಗುರುಪೂರ್ಣಿಮಾ ದಿನ ನಿಜವಾಗಿಯೂ ಭಾರತೀಯರಿಗೆ ಶಿಕ್ಷಕರ ದಿನವಾಗಿದೆ. ವೇದವ್ಯಾಸರ ಜಯಂತಿಯನ್ನು ಗುರುಪೂರ್ಣಿಮೆ ಎಂದು ಕರೆಯುವುದು ಹಾಗೂ ಅವರನ್ನು ಸ್ಮರಿಸುವುದು ಭಾರತೀಯರಾದ ನಮ್ಮ ಕರ್ತವ್ಯ. ಪ್ರಸ್ತುತ ಗುರುವಿನ ಸ್ಥಾನಕ್ಕೆ ಚ್ಯುತಿ ಬರುತ್ತಿದೆ. ಇದು ಆಘಾತಕಾರಿ ಬೆಳವಣಿಗೆ. ಸಂಸ್ಕಾರ ಹಾಗೂ ಸಂಸ್ಕೃತಿಯು ಇಲ್ಲದೆ ಈ ಬೆಳವಣಿಗೆ ಆಗುತ್ತಿರುವಂತೆ ತೋರುತ್ತಿದೆ. ಇದರೊಂದಿಗೆ ಆಧುನಿಕ ಭರಾಟೆಯಲ್ಲಿ ಮೂಲ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್. ಬಿ. ಹೇಳಿದರು.
ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಸಂಘ ಹಾಗೂ ಅಂತರಾಧ್ಯಯನ ವೃತ್ತಮ್ ವತಿಯಿಂದ ನಡೆದ ಗುರುಪೂರ್ಣಿಮಾ ದಿನದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಾಚಾರ್ಯ ಪ್ರಮೋದ್ ಕುಮಾರ್ ಹಾಗೂ ಸಂಸ್ಕೃತ ಭಾಷಾ ವಿಭಾಗದ ವಿದ್ಯಾರ್ಥಿಗಳು ಸೇರಿ ಗುರುಪೂರ್ಣಿಮೆಯ ಸ್ಮರಣೆಗಾಗಿ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನಕುಮಾರ ಐತಾಳ್ ಅವರನ್ನು ಅಭಿನಂದನಾ ಪತ್ರ ನೀಡಿ ಗೌರವಿಸಿದರು.
ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನಕುಮಾರ ಐತಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗುರುಗಳ ಸ್ಥಾನ ಹಾಗೂ ಮಹತ್ತ್ವದ ಬಗ್ಗೆ ಪ್ರದೀಪ ಹಾಗೂ ವೇದವ್ಯಾಸರ ಜೀವನ ಮತ್ತು ಕೃತಿಗಳ ಬಗ್ಗೆ ಮಿಹಿರ್ ಕೇಳ್ಕರ್ ಅವರು ಮಾತನಾಡಿದರು. ಅಶ್ಮಿತಾ , ಪ್ರಥ್ವಿ ಹೆಗಡೆ ಹಾಗೂ ಪ್ರಿಯದರ್ಶಿನಿ ಇವರು ಗುರುವಂದನಾ ಸ್ತೋತ್ರ ಪಠಿಸಿದರು. ಎಲ್ಲ ಉಪನ್ಯಾಸಕರನ್ನು ವಿದ್ಯಾರ್ಥಿಗಳು ಶುಭಾಶಯ ಪತ್ರ ನೀಡಿ ಗೌರವಿಸಿದರು.
ಸಂಸ್ಕೃತ ಸಂಘದ ಅಧ್ಯಕ್ಷ ಗುರುದತ್ತ ಮರಾಠೆ ಸ್ವಾಗತಿಸಿ , ಅಂತರಾಧ್ಯಯನ ವೃತ್ತಂ ಸಂಯೋಜಕ ರಜತ್ ಪಡ್ಕೆ ವಂದಿಸಿದರು. ಸಂಘದ ಉಪಾಧ್ಯಕ್ಷೆ ವೈಷ್ಣವಿ ಭಟ್ ನಿರೂಪಿಸಿದರು.