ಉಜಿರೆ: ಉಜಿರೆಯ ಎಸ್‌ಡಿಎಂ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವತಿಯಿಂದ ಸೆಪ್ಟೆಂಬರ್ 24 ರಂದು “ಸಿನರ್ಜಿ” ವಿಭಾಗ ವಿದ್ಯಾರ್ಥಿ ವೇದಿಕೆಯ ಉದ್ಘಾಟನಾ ಕಾರ್ಯಕ್ರಮವು ನೆರವೇರಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಬಿ. ಎ. ಕುಮಾರ ಹೆಗ್ಡೆ “ಜೀವನದಲ್ಲಿ ಕೌಶಲ್ಯಗಳು ಬಹಳ ಪ್ರಮುಖ ಪಾತ್ರ ವಹಿಸುತ್ತವೆ.
ಜೀವನ ಕೌಶಲ್ಯವು ಬಹಳ ಮುಖ್ಯ, ಇದು ವಿದ್ಯಾರ್ಥಿಗಳಿಗೆ ಅರ್ಹ ಸಮಾಜ ಸೇವಕರಾಗಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುತ್ತದೆ. ಇದು ಅತ್ಯುತ್ತಮ ಉದ್ಯೋಗ ನಿರೀಕ್ಷೆಗಳು ಮತ್ತು ಗಳಿಕೆಯ ಸಾಮರ್ಥ್ಯದೊಂದಿಗೆ ಹೆಚ್ಚು ಬೇಡಿಕೆಯಿರುವ ವೃತ್ತಿಯಾಗಿದೆ ಎಂದು ಹೇಳಿದರು.
ನಂತರ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿ ಭೋಧಿಸಲಾಯಿತು ಮತ್ತು ಸಿನರ್ಜಿ ವೇದಿಕೆಯ ಉಪಾಧ್ಯಕ್ಷರು 2024-25 ಶೈಕ್ಷಣಿಕ ವರ್ಷದ ಕ್ರಿಯಾ ಯೋಜನೆಯನ್ನು ಓದಿದರು. ಈ ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ.ರವಿಶಂಕರ್ ಕೆಆರ್, ವಿದ್ಯಾರ್ಥಿ ವೇದಿಕೆ ಸಿನರ್ಜಿಯ ನಿರ್ದೇಶಕಿ ಡಾ. ಅಕ್ಷತಾ ಕೆ ಮತ್ತು ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದ ನಂತರ “ಉದ್ಯಮಶೀಲತೆ ಮತ್ತು ಸುಸ್ಥಿರ ಅಭಿವೃದ್ಧಿಯ” ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಪೇಪರ್ ಸೀಡ್‌ನ ಉದ್ಯಮ ಸಂಸ್ಥಾಪಕರಾದ ನಿತಿನ್ ವಾಸ್ ಅವರು ಮಾತನಾಡುತ್ತ ಮಂಗಳೂರಿನ ಪೇಪರ್ ಸೀಡ್ ಕಂಪನಿಯು ಪ್ರಾರಂಭದಲ್ಲಿ ಕಸದ ಕಾಗದವನ್ನು ಮರುಬಳಕೆ ಮಾಡಿ, ಅದನ್ನು ಕೈಯಿಂದ ಮಾಡಿದ ಕಾಗದವಾಗಿ ಪರಿವರ್ತಿಸಿ, ಅದನ್ನು ಮರವಾಗಿ ಬೆಳೆಯುವಂತೆ ಮಾಡುವ ಮೂಲಕ ಹೆಚ್ಚಿನ ಮರಗಳನ್ನು ಕಡಿಯುವುದನ್ನು ತಪ್ಪಿಸಿತು. ಇದು ತಮ್ಮ ಸಂಸ್ಥೆಯ ಸಾಧನೆ ಎಂದು ತಿಳಿಸಿದರು. ಪೇಪರ್ ಸೀಡ್ ಕುರಿತು ಹಲವು ಮಾಹಿತಿಗಳನ್ನು ನೀಡಿದ ಅವರು, ಪ್ಲಾಸ್ಟಿಕ್ ಬಳಕೆಯನ್ನು ಯಾವ ರೀತಿ ಕಡಿಮೆ ಮಾಡಬಹುದು ಎಂಬುದರ ಕುರಿತು ಸಲಹೆಗಳನ್ನು ನೀಡಿದರು.
ವಿದ್ಯಾರ್ಥಿನಿಯರಾದ ಚೈತ್ರ ಸ್ವಾಗತಿಸಿದರು. ಸಮೀಕ್ಷಾ ವಂದನಾರ್ಪಣೆಗೈದರು. ಪ್ರಿಯಾ ಕಾರ್ಯಕ್ರಮ ನಿರೂಪಿಸಿದರು.