ಬೆಳ್ತಂಗಡಿ: ರಾಜ್ಯ ಸರಕಾರ ಜಾರಿಗೆ ತಂದ ಪಂಚಗ್ಯಾರಂಟಿ ಯೋಜನೆಯಲ್ಲಿ ನಕಲಿ ಬಿ.ಪಿ.ಎಲ್ ಪಡಿತರ ಚೀಟಿಗಳನ್ನು ಹಾಗೂ ಅರ್ಹತೆಗಿಂತ ಹೆಚ್ಚು ಆದಾಯ ಹೊಂದಿದ್ದರೂ ಬಿ.ಪಿ.ಎಲ್. ಕಾರ್ಡ್ ಹೊಂದಿರುವ ಕುಟುಂಬಗಳು ಪಡೆಯುತ್ತಿರುವುದು ಬೆಳಕಿಗೆ ಬಂದ ಹಿನ್ನಲೆಯಲ್ಲಿ ಅಂತಹ ಬಿ.ಪಿ.ಎಲ್. ಕಾರ್ಡ್‌ಗಳನ್ನು ಪತ್ತೆ ಹಚ್ಚಿ ರದ್ದುಗೊಳಿಸುವ ಪ್ರಕ್ರಿಯೆಗೆ ಸರಕಾರ ಚಾಲನೆ ನೀಡಿದೆ. ಈ ಹಿನ್ನಲೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಸುಮಾರು 7,024 ಕುಟುಂಬಗಳ ಬಿಪಿಎಲ್ ಕಾರ್ಡ್‌ಗಳ ಪರಿಶೀಲನೆಗೆ ಬಂದಿದ್ದು, ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳೀಯವಾಗಿ ಪರಿಶೀಲನೆ ನಡೆಸಲಿದ್ದಾರೆ.
ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆ ಜಾರಿಯಲ್ಲಿ ಬಡ ಕುಟುಂಬಗಳಿಗೆ ಇದರ ಸೌಲಭ್ಯ ದೊರೆಯಬೇಕು ಎಂಬುದು ಸರಕಾರದ ಉದ್ದೇಶವಾಗಿದೆ. ಆದರೆ ಸರಕಾರದ ಈ ಸೌಲಭ್ಯ ಶ್ರೀಮಂತ ಕುಟುಂಬಗಳ ಪಾಲಾಗುತ್ತಿರುವ ವಿಷಯ ಬೆಳಕಿಗೆ ಬಂದಿದ್ದು, ಇದೀಗ ನಕಲಿ ಪಡಿತರ ಚೀಟಿ ದಾರರ ಪತ್ತೆಗೆ ಸರಕಾರವು ಮುಂದಾಗಿದ್ದು, ರಾಜ್ಯದಲ್ಲಿ ಲಕ್ಷಾಂತರ ನಕಲಿ ಪಡಿತರ ಚೀಟಿದಾರರನ್ನು ಪತ್ತೆ ಹಚ್ಚಲಾಗಿದೆ.
ಬೆಳ್ತಂಗಡಿ ತಾಲೂಕಿನಲ್ಲಿ 45,721 ಬಿಪಿಎಲ್ ಪಡಿತರ ಚೀಟಿ ಹಾಗೂ 3,297 ಅಂತ್ಯೋದಯ ಪಡಿತರ ಚೀಟಿಗಳಿದ್ದು, ಇದರಲ್ಲಿ ನಕಲಿ ಹಾಗೂ ಆದಾಯ ತೆರಿಗೆ ಪಾವತಿದಾರರು ಎಂಬ ಎರಡು ಪಟ್ಟಿಯನ್ನು ಸರಕಾರವೇ ಸಾಫ್ಟ್‌ವೇರ್‌ನ ಮೂಲಕ ಮಾಡಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಇಂತಹ ಸುಮಾರು 7,024 ಪಡಿತರ ಚೀಟಿದಾರರನ್ನು ಗುರುತಿಸಿ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿರುವ ಆಹಾರ ಇಲಾಖೆಗೆ ಪಟ್ಟಿ ರವಾನಿಸಿದೆ. ಈ ಪಟ್ಟಿಯಲ್ಲಿರುವ ಕುಟುಂಬಗಳ ಪರಿಶೀಲನೆಗೆ ಆಯಾ ಗ್ರಾಮದ ಗ್ರಾಮಲೆಕ್ಕಾಧಿಕಾರಿಗಳಿಗೆ ಕಳುಹಿಸಲಾಗಿದ್ದು, ಅವರು ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಮಾಹಿತಿ ನೀಡಿ ಅಗತ್ಯ ದಾಖಲೆಗಳನ್ನು ಪಡೆದು ನಂತರ ವರದಿಯನ್ನು ನೀಡಲಿದ್ದಾರೆ.
ಈಗಾಗಲೇ ಸರಕಾರದ ಆದೇಶದ ಮೇರೆಗೆ ಗ್ರಾಮ ಆಡಳಿತಾಧಿಕಾರಿಗಳಿಗೆ ಪರಿಶೀಲನೆಗಾಗಿ ಕಳುಹಿಸಲಾದ 7೦24 ಬಿಪಿಎಲ್ ಪಡಿತರ ಚೀಟಿಯ ಪರಿಶೀಲನೆ ನಡೆಯುತ್ತಿದೆ. ಗ್ರಾಮ ಆಡಳಿತಾಧಿಕಾರಿಗಳು ಸಂಬಂಧ ಪಟ್ಟ ಕುಟುಂಬಗಳಿಗೆ ನೋಟೀಸು ನೀಡಿ, ಅವರಿಂದ ಅಗತ್ಯ ದಾಖಲೆಗಳನ್ನು ಪಡೆದು, ಪರಿಶೀಲನೆ ನಡೆಸಿ, ಅದರ ವರದಿಯನ್ನು ಆಹಾರ ಇಲಾಖೆಗೆ ಸಲ್ಲಿಸಲಿದ್ದಾರೆ. ಆ ವರದಿಯ ಆಧಾರದಲ್ಲಿ ಎಷ್ಟು ಮಂದಿಯ ಕಾರ್ಡ್ ರದ್ದುಗೊಂಡು ಎಪಿಎಲ್ ಆಗಲಿದೆ ಎನ್ನುವುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.
53 ಬಿಪಿಎಲ್ ಕಾರ್ಡ್ ರದ್ದು: ಬೆಳ್ತಂಗಡಿ ತಾಲೂಕಿನಲ್ಲಿ ಒಟ್ಟು 734 ಬಿಪಿಎಲ್ ಕುಟುಂಬವು ಆದಾಯ ತೆರಿಗೆ ಪಾವತಿದಾರರೆಂಬ ಪಟ್ಟಿಗೆ ಸೇರ್‍ಪಡೆ ಗೊಂಡಿತ್ತು. ಈ ಕುಟುಂಬಗಳಿಗೆ ಮಾಹಿತಿ ನೀಡಿ, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡುವಂತೆ ತಿಳಿಸಲಾಗಿತ್ತು. ಅದರಂತೆ ಬಿಪಿಎಲ್ ಕುಟುಂಬಗಳು ಆಹಾರ ನಿರೀಕ್ಷಕರ ಕಚೇರಿಗೆ ಬಂದು ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದಾರೆ. ದಾಖಲೆ ಸಲ್ಲಿಸಿದವರಲ್ಲಿ ೫೩ ಕುಟುಂಬಗಳು ಬಿಪಿಎಲ್ ಅರ್ಹತೆಗಿಂತ ಹೆಚ್ಚಿನ ಆದಾಯ ಹೊಂದಿದವರೆಂದು ಪರಿಗಣಿಸಿ ಅವರ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಪಡಿಸಿ, ಎಪಿಎಲ್ ಪಡಿತರ ಚೀಟಿಗಳಾಗಿ ಪರಿವರ್ತಿಸಲಾಗಿದೆ. ಇದರಲ್ಲಿ ಹಲವು ಮಂದಿ ಬ್ಯಾಂಕ್ ಲೋನ್‌ಗಾಗಿ ಹೆಚ್ಚು ಆದಾಯ ಬರೆಸಿಕೊಂಡು ಬ್ಯಾಂಕ್‌ಗೆ ನೀಡಿದ ಬಡವರಾಗಿದ್ದು, ಅವರಿಗೆ ಅಧಿಕಾರಿಗಳು ಮಾನವೀಯತೆ ತೋರಿದ್ದಾರೆ ಎಂದು ತಿಳಿದು ಬಂದಿದೆ.
ಬಿಪಿಎಲ್ ಮಾನದಂಡವೇನು: ಸರಕಾರ ಬಿಪಿಎಲ್ ಪಡಿತರ ಚೀಟಿಗೆ ಮಾನದಂಡ ನಿಗದಿಪಡಿಸಿದೆ. ಸರಕಾರದ ಅಥವಾ ಸರಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರಕಾರಿ ಪ್ರಾಯೋಜಿತ ಸರಕಾರಿ ಸ್ವಾಮ್ಯದ ಸಂಸ್ಥೆಗಳು, ಮಂಡಳಿಗಳು, ನಿಗಮಗಳು, ಸ್ವಾಯತ್ತ ಸಂಸ್ಥೆಗಳಲ್ಲಿ ಉದ್ಯೋಗ ಹೊಂದಿರುವವರು ಒಳಗೊಂಡಂತೆ ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್ ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆಯುವಂತಿಲ್ಲ. ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶಗಳಲ್ಲಿ ಒಂದು ಸಾವಿರ ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದುವಂತಿಲ್ಲ, ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆಯುವಂತಿಲ್ಲ, ಕುಟುಂಬದ ವಾರ್ಷಿಕ ಆದಾಯವು ರೂ. 1.20 ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳ ಬಿಪಿಎಲ್ ಕಾರ್ಡ್‌ಗಳು ರದ್ದಾಗುತ್ತವೆ.