ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ವತಿಯಿ೦ದ ರಾಜ್ಯ ಮಹಿಳಾಗೋಷ್ಠಿ

Suddi Udaya

ಸಮೃದ್ಧವಾದ ಸ್ಥಳೀಯ ಭಾಷೆ, ಸಾಹಿತ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿ ಅದರ ಕ್ರೋಡೀಕರಣ ನಡೆಯಬೇಕು. ನಮ್ಮ ಭಾಷೆ, ಇತಿಹಾಸ, ಪರಂಪರೆ ಉಳಿಸುವ ಜವಾಬ್ದಾರಿ ನಮ್ಮದು ಎಂದು ಆಯುರ್ವೇದ ವೈದ್ಯೆ, ಮಂಗಳೂರಿನ ಆಸರೆ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷೆ ಡಾ.
ಆಶಾಜ್ಯೋತಿ ರೈ ಹೇಳಿದ್ದಾರೆ.


ಧರ್ಮಸ್ಥಳದ ಸೂರ್ಯಕಮಲ್ ಮಹಲ್‌ ಸಭಾಭವನದಲ್ಲಿ ಅ.27 ರಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ವತಿಯಿ೦ದ ಬೆಳ್ತಂಗಡಿ ತಾಲೂಕು ಸಮಿತಿ ಹಾಗೂ ತಾಲೂಕು ಮಹಿಳಾ ಘಟಕದ ಸಹಯೋಗದಲ್ಲಿ ‘ಸಾಹಿತ್ಯದಲ್ಲಿ ಭಾರತೀಯ ಮಹಿಳೆ’ ವಿಷಯದಲ್ಲಿ ಜರಗಿದ ರಾಜ್ಯ ಮಹಿಳಾಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ದಿಕ್ಸೂಚಿ ಭಾಷಣ ನೆರವೇರಿಸಿದ ಸಂಶೋಧಕಿ ಡಾ. ಪ್ರಮೀಳಾ ರಾವ್, ಸಂಪ್ರದಾಯಸ್ತವಾದ ನಮ್ಮ ರಾಷ್ಟ್ರದಲ್ಲಿ ಮಾತೃ ಪ್ರೇಮ ಕಾಣುವ ಸಂಸ್ಕೃತಿ ಇದೆ. ಉತ್ತಮ ಅಂಶಗಳನ್ನು ಮೈಗೂಡಿಸಿ ಸಾಹಿತ್ಯ ರಚಿಸುವ ಜಾಣ್ಮೆಯನ್ನು ಮೈಗೂಡಿಸಿಕೊಳ್ಳಬೇಕು. ಸಾಹಿತ್ಯದಿಂದ ಸಮಾಜವನ್ನು ತಿದ್ದುವ ಕೆಲಸವಾಗಬೇಕು ಎಂದರು.

ಅ.ಭಾ.ಸಾ.ಪ. ರಾಜ್ಯ ಮಹಿಳಾ ಪ್ರಮುಖ್ ವಿನುತಾ ಕೆ.ಆರ್. ಪ್ರಾಸ್ತಾವಿಕವಾಗಿ ಮಾತನಾಡಿ, ವೇದಗಳ ಕಾಲದಿಂದಲೂ ಮಹಿಳೆಯರು ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಹಿತ್ಯ ಕೂಡ ದೇಶದ ಒಂದು ಭಾಗವಾಗಿದ್ದು, ದೇಶದ ಬೆಳವಣಿಗೆಗೆ ಪೂರಕ ಎಂದು ಹೇಳಿದರು.

ಸ್ವಾಗತ ಸಮಿತಿ ಅಧ್ಯಕ್ಷೆ ಸೋನಿಯಾ ವರ್ಮಾ ಸ್ವಾಗತಿಸಿದರು. ದಿವ್ಯಾ ಹೆಗಡೆ ಕಬ್ಬಿನಗದ್ದೆ ನಿರೂಪಿಸಿದರು. ಸ್ವಾಗತ ಸಮಿತಿ ಕಾರ್ಯದರ್ಶಿ ವಿದ್ಯಾಶ್ರೀ ಅಡೂರು ಹಾಗೂ ಪದಾಧಿಕಾರಿಗಳಾದ ಸಂತೋಷಿನಿ ಕಾರಂತ್, ಉಷಾ ಶಶಿಧರ್ ಶೆಟ್ಟಿ ಮತ್ತಿತರರು ಸಹಕರಿಸಿದರು.

ಕವಯತ್ರಿ ಸಮ್ಮಿಲನ: ಸಾಹಿತಿ ಶೈಲಜಾ ಗೋರನಮನೆ ಶಿರಸಿ ಅವಲೋಕನದಲ್ಲಿ ನಡೆದ ಕವಯತ್ರಿಯರಾದ ಅರ್ಚನಾ ಹೆಬ್ಬಾರ್ ಬೆಂಗಳೂರು, ಶೀಲಾ ಅರಕಲಗೂಡು, ಮೇಧಾ ಪ್ರಹ್ಲಾದಾಚಾರ್ಯ, ಜಯಂತಿ ಎಂ.ಎನ್., ಗುಣವತಿ ಕೆ.ಪಿ. ಪ್ರೇಮಾ ಆರ್. ಶೆಟ್ಟಿ, ವಿನುತಾ ಗೌಡ, ಆಶಾ ಅಡೂರು, ಉಮಾಶಂಕರಿ ಮರಿಕೆ, ವಿಮಲಾರುಣ ಪಡ್ಡಂಬೈಲು, ಸುಜಾತಾ ಆರ್. ರಾವ್, ವಿಜಯಲಕ್ಷ್ಮೀ ಚೆಕ್ಕೆ, ನಂದಾ ಪ್ರೇಮ ಕುಮಾರ್, ಮಂಜುಳಾ ಪ್ರಸಾದ್, ವೀಣಾಕೃಷ್ಣಮೂರ್ತಿ, ವೀಣಾ ಬರಗಿ, ಮಂಗಳಾ ಭಾಗ್ವತ್, ಮಹಾದೇವಿ ಗೌಡ, ದಾಕ್ಷಾಯಿಣಿ ವಿಜಯಪುರ ಮೊದಲಾದ ಕವಯತ್ರಿಯರು ಸ್ವ-ರಚಿತ ಕವನಗಳನ್ನು ವಾಚಿಸಿದರು.
ಚಂದ್ರಕಲಾ ಕುಮಾರ್‌ ಮೈಸೂರು ಕಾರ್ಯಕ್ರಮ ನಿರ್ವಹಿಸಿದರು.

ಸಾಹಿತ್ಯ ಗೋಷ್ಠಿ ‘ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ‘ ವಿಷಯದ ಸಾಹಿತ್ಯ ಗೋಷ್ಠಿಯಲ್ಲಿ ನಿವೃತ್ತ ಪ್ರಾಂಶುಪಾಲೆ, ರಾಯಚೂರಿನ ಡಾ.ಶಕುಂತಲಾ ಗೋಪಶೆಟ್ಟಿ ಅದರ ಅವಲೋಕನದಲ್ಲಿ ‘ಜನಪದ ಸಾಹಿತ್ಯದಲ್ಲಿ ಸ್ತ್ರೀ’ ಎಂಬ ವಿಚಾರವಾಗಿ ಡಾಕ್ಟರ್ ಮಂಜುಳಾಕ್ಷಿ ಕಲ್ಬುರ್ಗಿ,’ವಚನಸಾಹಿತ್ಯದಲ್ಲಿ ಸ್ತ್ರೀ’ ಎಂಬ ವಿಚಾರವಾಗಿ ಬೀದರಿನ ಡಾ. ಜಗದೇವಿ ತಿಬಶೆಟ್ಟಿ ಮತ್ತು ‘ಆಧುನಿಕ ಸಾಹಿತ್ಯದಲ್ಲಿ ಸ್ತ್ರೀ’ ಎಂಬ ವಿಚಾರವಾಗಿ ಮಧುಗಿರಿಯ ರತ್ನಾ ಬಡವನಹಳ್ಳಿ ವಿಚಾರಧಾರೆ ಮಂಡಿಸಿದರು.

ಸಂಜೆ ಸಾಹಿತಿ, ಗಮಕ ವ್ಯಾಖ್ಯಾನಕಾರೆ ಬೆಂಗಳೂರಿನ ಶ್ರೀಮತಿ ಶಾಂತ ನಾಗಮಂಗಲ ಸಮಾರೋಪ ಸಮಾರಂಭದಲ್ಲಿ ಮಹಿಳೆಯರಿಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಮಾನ ಅವಕಾಶ ದೊರೆಯಬೇಕು ಎಂದು ಅಭಿಪ್ರಾಯಪಟ್ಟರು. ಅ.ಭಾ.ಸಾ. ಪ ತಾಲೂಕು ಮಹಿಳಾ ಪ್ರಕಾರದ ಪ್ರಮುಖ್ ವಿದ್ಯಾಶ್ರೀ ಅಡೂರ್‌ ವಂದಿಸಿದರು.

Leave a Comment

error: Content is protected !!