ಬೆಳ್ತಂಗಡಿ: ಮಂಗಳೂರುನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗುವಂತೆ ಕೋರಿ ಬೆಳ್ತಂಗಡಿ ವಕೀಲರ ಸಂಘ, ಬೆಳ್ತಂಗಡಿ ಹೈ ಕೋರ್ಟ್ ಪೀಠ ಹೋರಾಟ ಸಮಿತಿ ನೇತೃತ್ವದಲ್ಲಿ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಜೊತೆ ಸಮಾಲೋಚನಾ ಸಭೆಯು ನ.8 ರಂದು ಬೆಳ್ತಂಗಡಿ ವಕೀಲರ ಭವನದಲ್ಲಿ ನಡೆಯಿತು.
ತಾಲೂಕು ಹೈಕೋರ್ಟ್ ಪೀಠ ಹೋರಾಟ ಸಮಿತಿ ಅಧ್ಯಕ್ಷ ಬಿ.ಕೆ. ಧನಂಜಯ್ ರಾವ್ ಪ್ರಾಸ್ತವಿಕವಾಗಿ ಮಾತನಾಡಿ, ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕು ಎಂಬ ಹೋರಾಟವು ಮಂಗಳೂರು ವಕೀಲರ ಸಂಘದಿಂದ 1981 ರಿಂದ ಪ್ರಾರಂಭವಾಗಿದ್ದು ಅದಕ್ಕೆ ಪೂರಕ ಸಹಕಾರವನ್ನು ನಾವು ನೀಡುತ್ತಾ ಬಂದಿರುತ್ತೇವೆ. ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದಲ್ಲಿ ಉತ್ತರ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೂಗ್ಗ ಹಾಗೂ ದ.ಕ ಜಿಲ್ಲೆಯ ಪ್ರದೇಶದ ಜನರಿಗೆ ಬಹಳ ಅನುಕೂಲವಾಗಲಿದ್ದು, ಪ್ರತಿಯೊಬ್ಬರಿಗೂ ಕೂಡ ಕಾನೂನಿನ ಮೂಲಕ ನ್ಯಾಯ ದೊರಕಿಸಲು ಸಹಕಾರಿಯಾಗುತ್ತದೆ ಅಲ್ಲದೇ ಸಮಯದ ಉಳಿತಾಯವಾಗುತ್ತದೆ. ದ.ಕ. ಜಿಲ್ಲೆಯಲ್ಲಿ 50 ಸಾವಿರ ಕೇಸ್ ಗಳು, ತಾಲೂಕಿನಲ್ಲಿ 1 ಸಾವಿರ ಕೇಸ್ ಗಳು ಪೆಂಡಿಂಗ್ ಇದೆ. ಹಾಗಾಗಿ “ನಮಗೆ ಬೇಕು ಹೈ ಕೋರ್ಟ್ ಪೀಠ” ಎಂಬ ಆಗ್ರಹವನ್ನು ಎಲ್ಲರೂ ಹೇಳಬೇಕು ಎಂದು ಹೋರಾಟದ ನಿಲುವುಗಳನ್ನು ತಿಳಿಸಿದರು.
ಮಂಗಳೂರು ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಹೆಚ್.ವಿ. ಮಾತನಾಡಿ ಜನ ಸಾಮಾನ್ಯರು ಹೈಕೋರ್ಟ್ ಕೇಸ್ ನ ವಿಚಾರವಾಗಿ 300-400 ಕಿ.ಮೀ ದೂರವಿರುವ ಬೆಂಗಳೂರಿನತ್ತ ಪ್ರಯಾಣ ನಡೆಸಬೇಕು. ಜನರಿಗೆ ಅನುಕೂಲದ ದೃಷ್ಟಿಯಿಂದ ಮಂಗಳೂರಿನಲ್ಲಿ ಹೈ ಕೋರ್ಟ್ ಪೀಠಬೇಕು. ಈ ಹೋರಾಟಕ್ಕೆ ಪ್ರತಿಯೊಬ್ಬರ ಸಹಕಾರ ಕೂಡ ಅಗತ್ಯ ಎಂದು ಸರ್ವರಲ್ಲಿ ಸಹಕಾರ ಕೋರಿದರು.
ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಹೋರಾಟ ಸಮಿತಿ ಉಪಾಧ್ಯಕ್ಷ ಶಿವಕುಮಾರ್ ಎಸ್.ಎಂ., ಹಿರಿಯ ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಲೋಬೊ, ವಕೀಲರು, ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಉಪಸ್ಥಿತರಿದ್ದರು.
ಸರಕಾರಿ ಅಭಿಯೋಜಕ ಮನೋಹರ್ ಕುಮಾರ್ ನಿರೂಪಿಸಿದರು. ಶೈಲೇಶ್ ಆರ್ ಟೋಸಲ್ ಸ್ವಾಗತಿಸಿ, ವಕೀಲರ ಸಂಘದ ಕಾರ್ಯದರ್ಶಿ ನವೀನ್ ಬಿ.ಕೆ. ಧನ್ಯವಾದವಿತ್ತರು.