2022ರ ಜಗತ್ತು ಭೌತಿಕವಾಗಿ ಇಷ್ಟೊಂದು ಸಕ್ರಿಯವಾಗಿರಲಿಲ್ಲ. ಬೀದಿ, ರಸ್ತೆ, ರೈಲು, ವಿಮಾನಗಳನ್ನು ಸ್ಥಬ್ದಗೊಳಿಸಿ ಏಕಮೇವಾದ್ವಿತೀಯನಾಗಿ ಕೊರೋನಾ ಮಹಾಮಾರಿ ಅಬ್ಬರಿಸುತ್ತಿದ್ದ ಕಾಲಘಟ್ಟ. ಯಾವುದನ್ನೂ ಊಹಿಸಲಾಗದ, ಅಂಬೋಣಗಳನ್ನೆಲ್ಲ ನಂಬಿಬಿಡುವ, ಇದಮಿತ್ತಂ ಎಂಬಂತೆ ಯಾವುದೂ ನಡೆಯದ ದಿನಗಳು ಎಲ್ಲರ ಪಾಲಿಗೆ ಭೀಕರವಾಗೇ ಪರಿಣಮಿಸಿದ್ದವು. ಮಾಸ್ಕ್ ಹಾಕಿಯೇ ಜನರ ಸಂಚಾರ. ಪಾಸ್ ಲಗತ್ತಿಸಿಯೇ ವಾಹನಗಳ ಓಡಾಟ, ಸಾನಿಟೈಸರ್ ತಿಕ್ಕಿಯೇ ಕೆಲಸದ ಪ್ರಾರಂಭ, ದಿನವೊಂದರಲ್ಲಿ ಕೆಲವೇ ಗಂಟೆ ತೆರೆಯುತ್ತಿದ್ದ ಅಂಗಡಿಗಳು, ದೂರದೂರಿಂದ ಬರುತ್ತಿದ್ದವರೆಲ್ಲ ಶಾಲೆ, ಆಸ್ಪತ್ರೆ, ಸಭಾಭವನದಲ್ಲೇ ತಂಗಬೇಕಾಗಿದ್ದ ಅನಿವಾರ್ಯ ಕ್ವಾರಂಟೈನ್ ದಿನಗಳವು. ಮೊದಲೆಲ್ಲ ರೇಡಿಯೋದಲ್ಲಷ್ಟೇ ಕೇಳಿಬರುತ್ತಿದ್ದ ಅದರಲ್ಲೂ ಜಮ್ಮು ಕಾಶ್ಮೀರಕ್ಕಷ್ಟೇ ಸೀಮಿತವಾಗಿರುತ್ತಿದ್ದ ಕರ್ಪ್ಯೂ ಎಂಬ ಶಬ್ದ ನಮ್ಮೂರಿನ ಕೇರಿಗಳಿಗೂ ವಕ್ಕರಿಸಿತ್ತು. ಬಿಸಿನೀರು, ನೆಲನೆಲ್ಲಿ, ತುಂಬೆರಸ, ತುಳಸಿರಸಗಳ ಮೊರೆಹೋಗಿ ವಯೋವೃದ್ದರು, ಹಸುಳೆಗಳು, ಬಾಣಂತಿಯರನ್ನೆಲ್ಲ ತಲ್ಲಣಗೊಳಿಸಿದ ಕೋವಿಡ್ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನುಂಗಿ ನೊಣೆಯುತ್ತಿತ್ತು. ಮದುವೆಗಳನ್ನೆಲ್ಲ ಇನ್ನಿಲ್ಲದಂತೆ ಕಾಡುತ್ತಿತ್ತು. ಸೀಲ್‌ಡೌನ್, ಲಾಕ್‌ಡೌನ್ ಎಂಬ ಕಾರ್ಯಾಚರಣೆಗಳ ಮೂಲಕ ಪೂರ್ವನಿಯೋಜಿತ ಕಾರ್ಯಕ್ರಮಗಳ ಮೇಲೆ ಕೋವಿಡ್‌ನ ದಬ್ಬಾಳಿಕೆಯ ಮೇರು ದಿನಗಳ ಕಾಲದಲ್ಲಿಯೇ ಉಜಿರೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಮೂರನೇ ರಾಜ್ಯ ಅಧಿವೇಶನಕ್ಕೆ ದಿನ ನಿಗದಿಯಾಯಿತು.
ಚಳಿಗಾಲದಲ್ಲಿ ಕೊರೋನದ ಹಾವಳಿ ಜಾಸ್ತಿ, ವೈರಸ್ ಚಳಿಗೆ ಬಹುಬೇಗ ಸಾಯುವುದಿಲ್ಲ ಹೀಗೆ ತರಾವರಿ ಸುದ್ದಿಗಳ ನಡುವೆಯೇ 2022 ಜನವರಿ 8 ಮತ್ತು 9 ಉಜಿರೆಯ ಕೃಷ್ಣಾನುಗ್ರಹ ಸಭಾಭವನ ಮತ್ತು ಜನಾರ್ದನ ಸ್ವಾಮಿ ದೇವಳದ ವಠಾರ ಅಧಿವೇಶನದ ತಯಾರಿಯಲ್ಲಿ ತೊಡಗಿತ್ತು. ಸಂಪನ್ಮೂಲದ ಕ್ರೋಡೀಕರಣ, ವಸ್ತುಪ್ರದರ್ಶನದ ಸಿದ್ದತೆ, ಪುಸ್ತಕ ಮಳಿಗೆಗಳ ರೂಪುರೇಷೆ, ಅಡಿಕೆ ಮರಗಳ ಜಮಾವಣೆ, ತೆಂಗಿನ ಮಡಲುಗಳ ಲೋಡುಗಟ್ಟಲೆ ಶೇಖರಣೆ, ತರಕಾರಿ ಸಾಮಾಗ್ರಿಗಳ ಸಂಗ್ರಹಣೆ, ರಾಜ್ಯದ ಮೂಲೆಮೂಲೆಗಳಿಂದ ಬರುವ ಸಾಂಸ್ಕೃತಿಕ ಕಾರ್ಯಕ್ರಮ ತಂಡಗಳ ವಸತಿ ವ್ಯವಸ್ಥೆ, ಕೃತಕ ಶೌಚಾಲಯಗಳ ನಿರ್ಮಾಣ, 9 ಪುಸ್ತಕಗಳ ಲೋಕಾರ್ಪಣೆ ಹೀಗೆ ಇಡೀ ಉಜಿರೆಯೇ ಅಧಿವೇಶನದ ದಿನಗಳಿಗೆ ಎದುರು ನೋಡುತ್ತಿತ್ತು. ಬಂದ ಅತಿಥಿಗಳಿಗೆ ಮನೆಯ ಆತಿಥ್ಯವನ್ನೇ ಒದಗಿಸುವ ಸಂಕಲ್ಪವನ್ನು ಉಜಿರೆಯ ಸಾಹಿತ್ಯಾಸಕ್ತರು ಮಾಡಿದ್ದರು. ಅದಕ್ಕಾಗಿ 108 ಮನೆಗಳನ್ನು ಗುರುತಿಸಿ ಯಾರ್ಯಾರು ಎಲ್ಲೆಲ್ಲಿ ತಂಗುವುದೆಂಬ ಸೂಚಿಯ ತಯಾರಿಯೂ ಆಗಿತ್ತು. ಊರೂರು ತಿರುಗಿ ಆಮಂತ್ರಣ ವಿತರಣೆ ನಡೆಯುತ್ತಿತ್ತು. ಭೋಜನದ ವ್ಯವಸ್ಥೆಗಾಗಿ ಹಲಸಿನಕಾಯಿಯನ್ನು ತಂದು ಉಗ್ರಾಣದಲ್ಲಿ ಸುರುವಿ ಹಾಕಲಾಗಿತ್ತು. ಖಾದ್ಯಗಳಿಗಾಗಿ ತಜಂಕ್ ಎಲೆಗಳನ್ನು ಗುಡ್ಡಗುಡ್ಡ ಅಲೆದು ಸಂಗ್ರಹಿಸಲಾಗುತ್ತಿತ್ತು. ಬಾಳೆಗಿಡದ ಹೂವು(ಪೂಂಬೆ ಗಶಿಗಾಗಿ) ಎಷ್ಟು ಬಾಳೆ ತೋಟಗಳಿಗೆ ಲಗ್ಗೆ ಹಾಕಲಾಯಿತೋ ಲೆಕ್ಕವೇ ಇರಲಿಲ್ಲ. ನಾಟಿ ಗೇರುಬೀಜಕ್ಕಾಗಿ ರೈತರ ಅಟ್ಟ ತಡಕಲಾಯಿತು, ಕ಼ಷಾಯದ ಸಲುವಾಗಿ ಕಾಳುಮೆಣಸುಗಳನ್ನು ಸಂಗ್ರಹಿಸಲಾಗುತ್ತಿತ್ತು. ಸೋರೆಕಾಯಿಯ ಪಾಯಸದ ಸಲುವಾಗಿ ಸೋರೇಕಾಯಿ ಅನ್ವೇಷಣೆ ನಡೆಯಿತು. ಸರ್ಕಾರದಿಂದ ಒಂದು ರೂಪಾಯಿ ಪಡೆಯದೇ ಈ ಕಾರ್ಯಕ್ರಮ ನಡೆಯಬೇಕೆನ್ನುವ ಆಯೋಜಕರ ತೀರ್ಮಾನದ ನಡುವೆ ಸಾಹಿತ್ಯಾಸಕ್ತರು ದಾನಿಗಳು ಅಭೂತಪೂರ್ವ ಸ್ಪಂದನೆ ನೀಡುತ್ತಿದ್ದರು, ಆದರೆ ಈ ಎಲ್ಲ ಸಿದ್ದತೆಗಳಿಗೆ ತಣ್ಣೀರೆರಚಿದ್ದು ಮತ್ತದೇ ಕೋವಿಡ್ ಮಹಾಮಾರಿ!
ಜನವರಿ 4 ರಂದು ಅಂದರೆ ಬರೋಬ್ಬರಿ 18 ದಿನಗಳ ಹಿಂದೆ ಭರಪೂರ ಸಿದ್ದತೆಗಳ ಮದ್ಯೆ ಕರ್ನಾಟಕ ಸರಕಾರ ಕೋವಿಡ್ ನೀತಿಗಳನ್ನು ಬಿಗಿಗೊಳಿಸಿ ಇನ್ನೊಂದು ಹಂತದ ಲಾಕ್‌ಡೌನ್ ಘೋಷಣೆ ಮಾಡಿತು. ಮತ್ತದೇ ಜನಸೇರುವ ಕುರಿತಾಗಿ ನಿಬಂಧನೆಗಳು ಹೊರಬಿದ್ದವು. ಕಾರ್ಯಕ್ರಮ ರದ್ದಾದ ಕುರಿತಾಗಿ ಆಯೋಜಕರ ತೀರ್ಮಾನವಾಯಿತು. ಎಲ್ಲರಿಗೂ ನಿರಾಶೆ. ಆದರೆ ಈ ಎಲ್ಲ ಕಾತರಿಕೆಗಳನ್ನು 2022 ಮಾರ್ಚ್ 19 ಮತ್ತು 20ರವರೆಗೆ ಕಾಪಿಡಲಾಯಿತು. ಕರ್ನಾಟಕದ 3 ನೇ ರಾಜ್ಯ ಅಧಿವೇಶನ ಎಲ್ಲ ಪುನರಾವರ್ತಿತ ತಯಾರಿಗಳ ನಡುವೆ ಯಶಸ್ವಿಯಾಗಿ ನಡೆಯಿತು. ಹಾಗಾಗಿ ಅಖಿಲಭಾರತೀಯ ಸಾಹಿತ್ಯ ಪರಿಷದ್ ಪಾಲಿಗೆ ಬೆಳ್ತಂಗಡಿ ಎಂದರೆ ಎರಡೆರಡು ಅಧಿವೇಶನಗಳನ್ನು ಒಂದೇ ವರ್ಷದಲ್ಲಿ ಕಲೆಹಾಕಿದ ಹೆಗ್ಗಳಿಕೆಯ ತಾಲೂಕು. ರಾಜ್ಯ ಅಧಿವೇಶನದ ಸಲುವಾಗಿ ಕೊರೋನಾ ಸವಾಲುಗಳನ್ನು ಎದುರಿಸಿ ಒಮ್ಮೆ ಸೋತು ಮತ್ತೆ ದಿಗ್ವಿಜಯ ಬರೆದ ತಾಲೂಕು ಬೆಳ್ತಂಗಡಿ. ಇಲ್ಲಿನ ಸಾಹಿತ್ಯಾಸಕ್ತರಿಗೆ, ಕಾರ್ಯಕರ್ತರಿಗೆ ಅನಾಮತ್ತು ಎಂಟು ತಿಂಗಳು ಸಾಹಿತ್ಯ ಕಾರ್ಯಕ್ರಮವೊಂದಕ್ಕೆ ಓಡಾಡಿದ ಅನುಭವವೂ ಪಷ್ಕಳವಾಯಿತು.
2017 ರಿಂದ ಬೆಳ್ತಂಗಡಿ ತಾಲೂಕಿನಲ್ಲಿ ಸಾಹಿತ್ಯ ಪರಿಷದ್ ತನ್ನ ಕಾರ್ಯಚಟುವಟಿಕೆ ನಡೆಸುತ್ತಿದೆ. ಭಾರತದ ಉದ್ದಗಲಕ್ಕೆ ವ್ಯಾಪಿಸಿಕೊಂಡಿರುವ ಎಲ್ಲ ಭಾಷೆ, ಸಾಹಿತ್ಯಿಕ ಕಾರ್ಯ ಚಟುವಟಿಕೆಗಳಿಗೆ ಪ್ರೇರಣೆಯಾಗಿ ಪೋಷಕ ಮತ್ತು ರಕ್ಷಕನಾಗಿ ಕೆಲಸ ಮಾಡುತ್ತಿರುವ ಸಾಹಿತ್ಯ ಸಂಘಟನೆಯೇ ಅಖಿಲ ಭಾರತೀಯ ಸಾಹಿತ್ಯ ಪರಿಷದ್. ಸಾರಸ್ವತ ಲೋಕದಲ್ಲಿ ಭಾರತೀಯತೆಯನ್ನು ಪುನಃ ಸ್ಥಾಪಿಸುವ ದೇಶದ ಬೌದ್ಧಿಕ ವಾತಾವರಣವನ್ನು ಬೆಸೆಯುವ ಧ್ಯೇಯದೊಂದಿಗೆ ಅಖಿಲ ಭಾರತೀಯ ಸಾಹಿತ್ಯ ಪರಿಷದ್ 1966 ಅಕ್ಟೋಬರ್ 27 ರಂದು ಕಾರ್ಯಪ್ರವೃತ್ತವಾಯಿತು. ಭಾರತೀಯ ಭಾಷೆಗಳ ಸಾಹಿತ್ಯ ಸಮ್ಮೇಳನ ಸಂಘಟಿಸುವುದು, ಉದಯೋನ್ಮುಖ ಸಾಹಿತಿಗಳಿಗೆ ಹುರುಪು ನೀಡುವುದು, ಪ್ರಕಟನೆ, ಪ್ರಕಾಶನಗಳ ನೆಲೆಯಲ್ಲಿ ಬೆನ್ನಿಗೆ ನಿಲ್ಲುವುದು, ರಾಷ್ಟ್ರಪೋಷಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಡುವ ಕೈಂಕರ್ಯದಲ್ಲಿ ಸಾಹಿತ್ಯ ಪರಿಷದ್ ಯಾವತ್ತೂ ತೊಡಗಿಸಿಕೊಂಡಿದೆ. ಬೆಳ್ತಂಗಡಿ ತಾಲೂಕಿನ ಮೂಲೆಮೂಲೆಗಳಲ್ಲಿ ಸಾಹಿತ್ಯ ಕೂಟ, ಗಮಕ, ಕಗ್ಗದಸಿರಿಯನ್ನು ಉಣಬಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸಂವಾದ ಕಾರ್ಯ, ಗೋಷ್ಟಿ, ಬರಹಗಾರಿಕೆಯ ತರಬೇತಿ, ಶಾಲಾಕಾಲೇಜುಗಳಲ್ಲಿ ಉಪನ್ಯಾಸ ಹೀಗೆ ತಿಂಗಳಿಗೊಂದರಂತೆ ಕಾರ್ಯಕ್ರಮ ನಡೆಸಲಾಗುತ್ತಿದೆ. ರಾಜ್ಯಮಟ್ಟದ ವಿಚಾರಸಂಕಿರಣ, ಗೋಷ್ಟಿಗಳನ್ನು ಸಂಘಟಿಸಿದ ಖ್ಯಾತಿಯೂ ಬೆಳ್ತಂಗಡಿ ತಾಲೂಕಿಗಿದೆ.
ಈ ಎಲ್ಲ ದಿಟ್ಟ ಹೆಜ್ಜೆಗಳ ತರುವಾಯ ಪ್ರಪ್ರಥಮ ತಾಲೂಕು ಅಧಿವೇಶನಕ್ಕೆ ಬೆಳ್ತಂಗಡಿ ತಾಲೂಕು ಇದೀಗ ಸಜ್ಜುಗೊಳ್ಳುತ್ತಿದೆ. ನಡ ಗ್ರಾಮದ ನರಸಿಂಹಘಡದ ತಪ್ಪಲಿನಲ್ಲಿರುವ ಪ್ರಕೃತಿ ರಮಣೀಯ ಬಲಿಪ ರೆಸಾರ್ಟಿನಲ್ಲಿ ಡಿಸೆಂಬರ್ 22 ರಂದು ಕಾರ್ಯಕ್ರಮ ನಡೆಯಲಿದೆ. ಗಣಪತಿ ಭಟ್ ಕುಳಮರ್ವ ಅಧ್ಯಕ್ಷತೆಯ ಬೆಳ್ತಂಗಡಿ ತಾಲೂಕು ಸಮಿತಿ ಈ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದು. “ತೆಂಕಣದಲ್ಲಿ ನುಡಿದಿಬ್ಬಣ” ಎನ್ನುವ ಶಿರೋನಾಮೆಯಡಿ ಜರುಗುವ ಈ ಅಧಿವೇಶನವನ್ನು ನಿವೃತ್ತ ಲೋಕಾಯುಕ್ತ ಎಸ್.ಪಿ ಕುಮಾರಸ್ವಾಮಿ ಎ ಇವರು ಉದ್ಘಾಟಿಸಲಿದ್ದು ವಿದ್ಯಾರ್ಥಿಗಳಲ್ಲಿ ಸಾಹಿತ್ಯದೊಲವು, ಮತ್ತು ಸಾಹಿತ್ಯಕ್ಕೆ ಯಕ್ಷಗಾನದ ಕೊಡುಗೆ ಎನ್ನುವ ವಿಷಯದಲ್ಲಿ ವಿಚಾರಸಂಕಿರಣಗಳು ಜರುಗಲಿವೆ. ಮೊದಲ ಹೆಜ್ಜೆ, ಕಾವ್ಯಯಾನ, ಪ್ರತಿಬಿಂಬ ಎಂಬ ಮೂರು ಕೃತಿಗಳ ಲೋಕಾರ್ಪಣೆಯೂ ನಡೆಯಲಿದೆ. ಸಾಹಿತ್ಯಾಸಕ್ತರ ಮನತಣಿಸುವ ಕವನಗಳು ಕವಿಗೋಷ್ಟಿಯಲ್ಲಿ ಮೂಡಿ ಬರಲಿವೆ. ಪ್ರಕೃತಿಯ ಸುಂದರ ಭೂಮಿಕೆಯಡಿ ಉದಯೋನ್ಮುಕ ಕವಿಗಳ ಪ್ರಕಟನೆ ರೂಪದ ಹೊತ್ತಗೆಗಳು, ಮನದಿಂದ ಚಿಮ್ಮಿದ ಭಾವಲಹರಿ, ಸಾಹಿತ್ಯಗೋಷ್ಟಿ, ಸಾಂಸ್ಕೃತಿಕ ಕಾರ್ಯಕ್ರಮದ ಸಮ್ಮಿಲನವನ್ನು ನವಿರಾಗಿ ಸಂಘಟಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಪ್ರಥಮ ಅಧಿವೇಶನ ಅನೇಕ ಹೊಸತುಗಳಿಗೆ ನಾಂದಿಯಾಗುವತ್ತ ಹೆಜ್ಜೆ ಹಾಕುತ್ತಿದೆ.