ಕಾಯರ್ತಡ್ಡ: ಕಾಯರ್ತಡ್ಕ ಪ್ರೌಢಶಾಲೆಗೆ ಕ್ಯಾನ್ ಫಿನ್ ಹೊಮ್ಸ್ ಲಿಮಿಟೆಡ್ ಸಿಎಸ್‌ಆರ್ ಫಂಡ್‌ನಿಂದ ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ಬೆಂಗಳೂರು ಇವರ ಸಹಯೋಗದಲ್ಲಿ ರೂ.12 ಲಕ್ಷ ಮೊತ್ತದ ಸುಸಜ್ಜಿತ ಶೌಚಾಲಯ ನಿರ್ಮಾಣ ಮಾಡಿ ಶಾಲೆಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಯಾನ್ ಫಿನ್ ಹೊಮ್ಸ್ ಲಿಮಿಟೆಡ್ ಡಿಜಿಎಂ ಪ್ರಶಾಂತ್ ಜೋಷಿ ಮಾತನಾಡಿ ಮಕ್ಕಳು ಶೌಚಾಲಯವನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು. ಶುಚಿತ್ವ ಕಾಪಾಡಿಕೊಂಡು ಬಂದದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ಶಾಲೆಗೆ ಎರಡು ಉತ್ತಮ ಸುಸಜ್ಜಿತ ಕೊಠಡಿಗಳನ್ನು ನಿರ್ಮಾಣ ಮಾಡಿಕೊಡುತ್ತೇವೆ ಎಂದು ತಿಳಿಸಿದರು. ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮಾ ಮಾತನಾಡಿ ಇಂತಹ ಸುಂದರ ಸುಸಜ್ಜಿತ ಶೌಚಾಲಯ ಯಾವ ಸರಕಾರಿ ಶಾಲೆಗಳಲ್ಲೂ ಇರುವುದಿಲ್ಲ. ನಿಮಗೆ ಆ ಸೌಭಾಗ್ಯ ಒದಗಿ ಬಂದಿದೆ.ಇದನ್ನು ಸದುಪಯೋಗ ಪಡಿಸಿಕೊಳ್ಳಿ ಓದಿನ ಕಡೆ ಹೆಚ್ಚಿನ ಗಮನ ನೀಡಿ ಎಂದು ಹೇಳಿದರು.
ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ರಾವ್, ಆನಂತ್ ಭಟ್ ಮಚ್ಚಿಮಲೆ, ವಿದ್ಯಾ ಕುಮಾರ್ ಕಾಂಚೋಡು, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಂಜುನಾಥ್ ಗೌಡ ಹಾರಿತ್ತಕಡೆ, ಎಸ್‌ಡಿಎಂಸಿ ಉಪಾಧ್ಯಕ್ಷ ಪದ್ಮನಾಭ ಗೌಡ, ಪ್ರತಿಮಾ ಜೋಷಿ, ಅಬೂಬಕರ್, ಶ್ರೀನಾಥ್ ಕೆಎಂ ಮತ್ತು ಶ್ರವಣ್ ಕಾಂತಾಜೆ ಉಪಸ್ಥಿತರಿದ್ದರು. ಶಿಕ್ಷಕ ಸುರೇಶ ಕೆ.ಆರ್. ಸ್ವಾಗತಿಸಿ, ಮುಖ್ಯ ಶಿಕ್ಷಕ ಯಾಕೂಬ್ ಪ್ರಸ್ತಾವಿಕವಾಗಿ ಮಾತನಾಡಿ, ಶಿಕ್ಷಕಿ ಜಯಲಕ್ಷ್ಮೀ ವಂದಿಸಿದರು. ಶಿಕ್ಷಕ ಆನಂದ್ ಕಾರ್ಯಕ್ರಮ ನಿರೂಪಿಸಿದರು.