April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜ. 24- ಫೆ. 2 ರವರಿಗೆ ಕಾಜೂರು ಉರೂಸ್ ಮಹಾ ಸಂಭ್ರಮ : ಜ. 30 ಬ್ರಹತ್ ಝಿಕ್ರ್ ಮಜ್ಲಿಸ್ ಹಾಗೂ ಮುಸಾಫಿರ್ ಖಾನ ಕಟ್ಟಡ ಉದ್ಘಾಟನೆ; ಫೆ. 2 ಉರೂಸ್ ಸಮಾರೋಪ- ಮಹಾ ಅನ್ನದಾನ

ಬೆಳ್ತಂಗಡಿ: ಸುಮಾರು 8 ಶತಮಾನಗಳಿಗೂ ಅಧಿಕ ವರ್ಷಗಳ ಇತಿಹಾಸವಿರುವ, ದಕ್ಷಿಣ ಭಾರತದ ಅಜ್ಮೀರ್ ಎಂದೇ ಖ್ಯಾತಿವೆತ್ತಿರುವ ಸರ್ವಧರ್ಮೀಯರ ಸಮನ್ವಯ ಕೇಂದ್ರ ಕಾಜೂರು ದರ್ಗಾ ಶರೀಫ್‌ನಲ್ಲಿ ಈ ವರ್ಷದ ಉರೂಸ್ ಮಹಾ ಸಂಭ್ರಮವು ಜ.24 ರಿಂದ ಆರಂಭಗೊಂಡು ಫೆಬ್ರವರಿ 2 ರ ವರೆಗೆ ವಿವಿಧ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಎಂದಿನಂತೆ ಕಾಜೂರು ಮತ್ತು ಕಿಲ್ಲೂರು ಜಂಟಿ ಜಮಾಅತ್ ಗಳ ಆಶ್ರಯದಲ್ಲಿ ರಚನೆಯಾಗಿರುವ ಉರೂಸ್ ಸಮಿತಿಯ ನೇತೃತ್ವದಲ್ಲಿ ಉರೂಸ್ ಕಾರ್ಯಕ್ರಮಗಳು ನಡೆಯಲಿದೆ ಎಂದು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಗೌರವಾಧ್ಯಕ್ಷ ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಮತ್ತು ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಅವರ ಮಾರ್ಗದರ್ಶನದಲ್ಲಿ ನಡೆಯುವ ಕಾರ್ಯಕ್ರಮದ ನೇತೃತ್ವವನ್ನು ಸಯ್ಯಿದ್ ಕಾಜೂರು ತಂಙಳ್ ವಹಿಸಲಿದ್ದಾರೆ.


ಜ.24 ರ ಉದ್ಘಾಟನೆಯಂದು ತಾ. ಸುನ್ನೀ ಸಂಯುಕ್ತ ಜಮಾಅತ್ ಕೋಶಾಧಿಕಾರಿ ಸಯ್ಯಿದ್ ಸಾದಾತ್ ತಂಙಳ್ ಮುಖ್ಯ ಪ್ರಭಾಷಣಗೈಯ್ಯಲಿದ್ದಾರೆ. ಸಯ್ಯಿದ್ ಕೂರತ್ ತಂಙಳ್ ಸುಪುತ್ರ ಸಯ್ಯಿದ್ ಮಶ್‌ಹೂದ್ ತಂಙಳ್ ಎಟ್ಟಿಕುಳಂ ಸಹಿತ ವಿವಿಧ ಜಮಾಅತ್ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಉದ್ಘಾಟನೆಯಂದು ಕಿಲ್ಲೂರು ಮಸ್ಜಿದ್ ನಿಂದ ವಿಶೇಷ ಸಂದಲ್ ಮೆರವಣಿಗೆ ಆಗಮಿಸಿ ಸಂಜೆ 7 ಗಂಟೆಗೆ ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಧ್ವಜಾರೋಹಣ ನಡೆಸಲಿದ್ದಾರೆ.

ಉರೂಸ್ ಪ್ರಯುಕ್ತ 10 ದಿನಗಳಲ್ಲಿ ಪ್ರತಿದಿನ ರಾತ್ರಿ ಕರ್ನಾಟಕ- ಕೇರಳದ ಪ್ರಸಿದ್ದ ವಾಗ್ಮಿಗಳಿಂದ ಧಾರ್ಮಿಕ ಪ್ರವಚನ ನಡೆಯಲಿದೆ. ಈ ಉಪನ್ಯಾಸ ಮಾಲಿಕೆಯನ್ನು ಸಯ್ಯಿದ್ ಕಾಜೂರು ತಂಙಳ್ ಉದ್ಘಾಟಿಸಲಿದ್ದಾರೆ.
ಜ.30 ರಂದು ಆಧ್ಯಾತ್ಮಿಕ ಕಾರ್ಯಕ್ರಮವಾದ “ಬೃಹತ್ ದ್ಸಿಕ್ರ್ ಮಜ್ಲಿಸ್” ಗೆ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ನೇತೃತ್ವ ನೀಡಲಿದ್ದಾರೆ. ಸರಕಾರದ ವಿಶೇಷ ಅನುದಾನದಿಂದ ನೂತನವಾಗಿ ನಿರ್ಮಾಣವಾಗಿರುವ “ಮುಸಾಫಿರ್ ಖಾನಾ” ಕಟ್ಟಡದ ಉದ್ಘಾಟನೆ ಇದೇ ವೇಳೆ ನಡೆಯಲಿದೆ. ಕರ್ನಾಟಕ ಸರಕಾರದ ವಸತಿ, ಅಲ್ಪಸಂಖ್ಯಾತ ಮತ್ತು ವಕ್ಫ್ ಖಾತೆ ಸಚಿವರಾದ ಬಿ.ಝೆಡ್ ಝಮೀರ್‌ ಅಹ್ಮದ್ ಖಾನ್ ಉದ್ಘಾಟಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ‌ ಸಚಿವ ದಿನೇಶ್ ಗುಂಡೂರಾವ್, ದ.ಕ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್‌ ಶಾಸಕ ಐವನ್ ಡಿಸೋಜ,‌ ಬೆಸ್ಟ್ ಫೌಂಡೇಶನ್ ಸಂಸ್ಥಾಪಕ ರಕ್ಷಿತ್‌ ಶಿವರಾಂ, ವಕ್ಫ್ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಮೊದಲಾದ ಗಣ್ಯರಲ್ಲದೆ ತಾಲೂಕು ಮತ್ತು ಜಿಲ್ಲೆಯ ಅನೇಕ ಸಯ್ಯಿದರುಗಳು, ಉಲಮಾಗಳು, ಸಾಮಾಜಿಕ- ಧಾರ್ಮಿಕ ನಾಯಕರುಗಳು ಭಾಗವಹಿಸಲಿದ್ದಾರೆ.

ಫೆಬ್ರವರಿ 2 ರಂದು ಉರೂಸ್ ಸಮಾರೋಪ;

ಫೆ. 2 ರಂದು ಬೆಳಿಗ್ಗೆ ಉರೂಸ್ ಸಮಾರಂಭ ನಡೆಯಲಿದ್ದು, ಸಯ್ಯಿದ್ ಕುಂಬೋಳ್ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಎನಪೋಯ ವಿ.ವಿ ಕುಲಪತಿ ಅಬ್ದುಲ್ಲ ಕುಂಞಿ (ವೈಎಮ್‌ಕೆ) ಭಾಗವಹಿಸಲಿದ್ದಾರೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ವಿಧಾನ ಸಭೆಯ ಸಭಾಪತಿ ಯು.ಟಿ ಖಾದರ್ ಫರೀದ್ ಭಾಗವಹಿಸಲಿದ್ದಾರೆ.
ವಿವಿಧ ದಿನಗಳಲ್ಲಿ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಸಯ್ಯಿದ್ ಜಿಫ್ರಿ ತಂಙಳ್ ಬೆಳ್ತಂಗಡಿ, ಸಯ್ಯಿದ್ ಮುಖ್ತಾರ್ ತಂಙಳ್ ಕುಂಬೋಳ್, ಶಾಫಿ ಸಅದಿ ಬೆಂಗಳೂರು, ಡಾ. ಅಬ್ದುರಶೀದ್ ಝೈನಿ ಕಾಮಿಲ್ ಸಖಾಫಿ, ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಡಾ. ದೇವರ್ಸೂಲ ಅಬ್ದುಸ್ಸಲಾಂ ಮುಸ್ಲಿಯಾರ್ ಮೊದಲಾದವರು ಭಾಗವಹಿಸಲಿದ್ದಾರೆ.

ಶೈಕ್ಷಣಿಕ ಪ್ರಗತಿ; ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿಯ ಹೆಜ್ಜೆ ಇಡುತ್ತಾ ಬಂದಿರುವ ಕಾಜೂರಿನಲ್ಲಿ ಈಗಾಗಲೇ ರಹ್ಮಾನಿಯಾ ಪ್ರೌಢ ಶಾಲೆ ನಡೆಯುತ್ತಿದೆ. ಕಾಜೂರು ಪರಿಸರದ ಸುತ್ತಮುತ್ತ ಶಿಕ್ಷಣ ವಂಚಿತ ಹೆಣ್ಣು ಮಕ್ಕಳಿಗೆ ಟೈಲರಿಂಗ್, ಶರೀಅತ್ ಸಹಿತ ಸಮನ್ವಯ ವಿದ್ಯಾಭ್ಯಾಸವನ್ನು ಉಚಿತವಾಗಿ ನೀಡಲಾಗುತ್ತಿದೆ. ‘ರಾಹ ಇಂಗ್ಲೀಷ್ ಮೀಡಿಯಂ ಪಬ್ಲಿಕ್ ಸ್ಕೂಲ್’ ಎಂಬ ಅಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ನಡೆಯುತ್ತಿದೆ. ಮದರಸ ಶಿಕ್ಷಣ ಮತ್ತು ದ‌ಅವಾ ದರ್ಸ್ ಶಿಕ್ಷಣ ಹೀಗೆ 450 ಕ್ಕೂ ಮಿಕ್ಕ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮತ್ತು ವಸತಿ ವ್ಯವಸ್ಥೆ ಒದಗಿಸುತ್ತಿದೆ.


ಯಾತ್ರಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಪ್ರತಿದಿನ ಮಧ್ಯಾಹ್ನದ ಊಟದ ವ್ಯವಸ್ಥೆ ಇರುತ್ತದೆ. ದರ್ಗಾದ ಧಾರ್ಮಿಕ ಸಂಪ್ರದಾಯದಂತೆ ರವಿವಾರ ಬೆಲ್ಲದಗಂಜಿ ವಿತರಣೆ, ಉರೂಸ್ ಕೊನೆಯ ದಿನ ಸಾರ್ವಜನಿಕ ಮಹಾ ಅನ್ನದಾನ ನಡೆಯಲಿದೆ. ಜಾತಿ ಧರ್ಮ ಭೇದವಿಲ್ಲದೆ ರಾಜ್ಯ ಹೊರ ರಾಜ್ಯಗಳಿಂದಲೂ ಇಲ್ಲಿಗೆ ಜನ ಸಾಗರ ಹೆಜ್ಜೆ ಹಾಕಲಿದೆ.
ಇದೀಗ ಕಾಜೂರಿನಲ್ಲಿ ಮತ್ತೊಮ್ಮೆ ವಾರ್ಷಿಕ ಉರೂಸ್ ಸಂಭ್ರಮದ ಮೂಲಕ ಗತಕಾಲದ ವೈಭವದ ದಿನಗಳು ಮತ್ತೆ ಮರುಕಳಿಸಲಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಕಾಜೂರು, ಉರೂಸ್ ಸಮಿತಿ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಝುಹ್ರಿ ಕಿಲ್ಲೂರು, ಉರೂಸ್ ಸಮಿತಿ ಪ್ರ. ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಉರೂಸ್ ಸಮಿತಿ ಜೊತೆ ಕಾರ್ಯದರ್ಶಿ ಶಾಹುಲ್ ಹಮೀದ್ ಕಿಲ್ಲೂರು, ಉರೂಸ್ ಸಮಿತಿ ಕೋಶಾಧಿಕಾರಿ ಮುಹಮ್ಮದ್ ಕಮಾಲ್, ದರ್ಗಾ ಸಮಿತಿ ಉಪಾಧ್ಯಕ್ಷರಾದ ಬದ್ರುದ್ದೀನ್ ಕಾಜೂರು, ಅಬೂಬಕ್ಕರ್ ಮಲ್ಲಿಗೆಮನೆ, ಕೋಶಾಧಿಕಾರಿ ಕಿಲ್ಲೂರು ಮಸ್ಜಿದ್ ಉಪಸ್ಥಿತರಿದ್ದರು.

Related posts

ಕಕ್ಕಿಂಜೆ ಸೈಂಟ್‌ ಜೋಸೆಫ್‌ ಆಸ್ಪತ್ರೆಯ ಸೀಲ್ ಕಳವು

Suddi Udaya

ಲಾಯಿಲ: ಕನ್ನಾಜೆಯ ರುದ್ರಭೂಮಿ ಅಭಿವೃದ್ಧಿ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಜೆಸಿಐ ಬೆಳ್ತಂಗಡಿಯ ಪೂರ್ವ ಅಧ್ಯಕ್ಷ ಪೃಥ್ವಿರಂಜನ್ ರಾವ್ ರವರಿಗೆ ನುಡಿ ನಮನ

Suddi Udaya

ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯವರಿಗೆ ಗನ್ ಮ್ಯಾನ್ ನೀಡಲು ಮುಂದಾದ ಸರಕಾರ

Suddi Udaya

ಉಜಿರೆ ರುಡ್‌ ಸೆಟ್‌ ಸಂಸ್ಥೆಯಲ್ಲಿ ವಸ್ತ್ರ ವಿನ್ಯಾಸ ತರಬೇತಿಯ ಸಮಾರೋಪ ಸಮಾರಂಭ

Suddi Udaya

ತಾಲೂಕು ಮಟ್ಟದ ವಿಜ್ಞಾನ ಮೇಳ: ನಾವೂರು ಸ.ಹಿ.ಪ್ರಾ ಶಾಲಾ ಇಬ್ಬರು ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ

Suddi Udaya
error: Content is protected !!