ಬೆಳ್ತಂಗಡಿ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಬೆಳ್ತಂಗಡಿ ಇದರ ಆಶ್ರಯದಲ್ಲಿ, ತಾಲೂಕು, ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಬೆಳ್ತಂಗಡಿ ಇದರ ಸಹಕಾರದೊಂದಿಗೆ ತ್ರಿಪದಿ ಬ್ರಹ್ಮ, ಕನ್ನಡ ಸಾಹಿತ್ಯ ಲೋಕದ ಅಮೂಲ್ಯ ರತ್ನ, ಶ್ರೇಷ್ಠ ವಚನಕಾರರಾದ ಸರ್ವಜ್ಞಜಯಂತಿಯನ್ನು ಫೆ.20ರಂದು ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ಆಚರಿಸಲಾಯಿತು.

ನಾರಾವಿ ಸ.ಉ.ಪ್ರಾ ಶಾಲೆಯ ಪದವೀಧರ ಶಿಕ್ಷಕಿ ಶ್ರೀಮತಿ ಶಾರದಾ ತುಳುನಾಡ್ ಅವರು ತ್ರಿಪದಿ ಬ್ರಹ್ಮ ಸರ್ವಜ್ಞ ಕವಿಯ ಬಗ್ಗೆ ಮಾತನಾಡಿ, ಕರ್ನಾಟಕ ಕಂಡ ಶ್ರೇಷ್ಠ ವಚನಕಾರ ದಾರ್ಶನಿಕ, ಕವಿ, ತ್ರಿಪದಿ ಚಕ್ರವರ್ತಿ ಸರ್ವಜ್ಞ , ಆ ಕಾಲದಲ್ಲಿದ್ದ ಜಾತಿ, ಮತ, ಧರ್ಮ ಸಂಘರ್ಷವನ್ನು ವಿರೋಧಿಸಿ, ವಿಶ್ವಮಾನವತೆ, ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ಶ್ರೇಷ್ಠ ಸಂತ. ಸರ್ವಜ್ಞನ ತ್ರಿಪದಿಗಳು ಸಮಾಜಕ್ಕೆ ಸಾರ್ವಕಾಲಿಕ ಸಂದೇಶಗಳಾಗಿವೆ ಎಂದರು.
ಸರ್ವಜ್ಞ ಭೈರಾಗಿಯಾಗಿ ಎಲ್ಲ ಕಡೆಗಳಿಗೆ ಓಡಾಡಿ, ಎಲ್ಲರೊಡನೆ ಬೆರೆತು ಅನುಭವವನ್ನು ಪಡೆದುಕೊಂಡು ವಿಶ್ವ ಜ್ಞಾನಿಯಾದವ, ತನ್ನ ಅನುಭವನ್ನು ತ್ರಿಪದಿ ಮೂಲಕ ಜನಸಾಮಾನ್ಯರಿಗೆ ತಿಳಿಯವ ಹಾಗೆ ಹೇಳಿದ, ಮನೋವಿಜ್ಞಾನಿಯಾಗಿ, ಸಮಾಜ ಸುಧಾರಕನಾಗಿ, ಅವಧೂತನಾಗಿ, ಒಬ್ಬ ಮಹಾ ವೈದ್ಯನಾಗಿ, ಕೃಷಿಕನಾಗಿ, ಪಂಡಿತನಾಗಿ, ಮಹಾ ತತ್ವಜ್ಞಾನಿಯಾಗಿ, ಯೋಗಿಯಾಗಿ, ಜನಪದ ಕವಿಯಾಗಿ ಹೀಗೆ ಆನೇಕ ಭೂಮಿಕೆಗಳಲ್ಲಿ ಸರ್ವಜ್ಞನನ್ನು ನಾವು ಕಾಣಬಹುದು. ಸರ್ವಜ್ಞನ ಸಂದೇಶಗಳು ನಮ್ಮ ನಡೆ, ನುಡಿಗಳಲ್ಲಿ ಪ್ರತಿಫಲಿಸಲಿ ಎಂದು ಹೇಳಿದರು.
ಭರವಸೆಯಾಗಿಯೇ ಉಳಿದ ಸರ್ವಜ್ಞ ವೃತ್ತ:
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ ಅವರು ಮಾತನಾಡಿ, ಬೆಳ್ತಂಗಡಿ ತಾಲೂಕಿನಲ್ಲಿ ತಾಲೂಕು ಆಡಳಿತದೊಂದಿಗೆ, ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಜೊತೆಗೂಡಿ ಪ್ರತಿ ವರ್ಷ ಸರ್ವಜ್ಞ ಜಯಂತಿಯನ್ನು ಆಚರಿಸುತ್ತಿದ್ದೇವೆ. ಕಳೆದ ಮೂರು ವರ್ಷಗಳ ಹಿಂದೆ ಬೆಳ್ತಂಗಡಿ ಕ್ಷೇತ್ರದ ಶಾಸಕರು ಬೆಳ್ತಂಗಡಿಯಲ್ಲಿ ಸರ್ವಜ್ಞ ವೃತ್ತ ನಿರ್ಮಿಸುವ ಭರವಸೆ ನೀಡಿದ್ದರು. ಆದರೆ ವರ್ಷ ಮೂರು ಕಳೆದರೂ, ಇಂದಿಗೂ ಸರ್ವಜ್ಞ ವೃತ್ತ ಆಗಿಲ್ಲ ಇದು ನಮ್ಮ ಸಮಾಜಕ್ಕೆ ನೋವು ತಂದಿದೆ. ಇನ್ನಾದರೂ ಶಾಸಕರು ಇದರ ಬಗ್ಗೆ ಗಮನ ಹರಿಸಬೇಕು, ಮುಂದಿನ ವರ್ಷ ಸರ್ವಜ್ಞ ವೃತ್ತದಲ್ಲೇ ಸರ್ವಜ್ಞ ಜಯಂತಿ ನಡೆಸುವ ಅವಕಾಶವನ್ನು ಶಾಸಕರು ನಿರ್ಮಿಸಿಕೊಡಬೇಕು ಇದು ನಮ್ಮ ಸಮಾಜದ ಆಗ್ರಹವಾಗಿದೆ ಎಂದು ಹೇಳಿದರು.
ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಉಪಾಧ್ಯಕ್ಷ ಹೆಚ್. ಪದ್ಮಕುಮಾರ್ ಅವರು ಮಾತನಾಡಿ, ಸರ್ವಜ್ಞ ದೈವಸಂಭೂತನಾಗಿ, ಎಲ್ಲವನ್ನೂ ತ್ಯಾಜಿಸಿ ಅಖಂಡ ಭಾರತ ಸುತ್ತಿದ ಬೈರಾಗಿ, ಆ ಕಾಲದಲ್ಲಿದ್ದ ಜಾತಿ ತಾರತಮ್ಯವನ್ನು ವಿರೋಧಿಸಿ ತನ್ನ ತ್ರಿಪದಿ ಮೂಲಕ ಸಮಾಜವನ್ನು ತಿದ್ದಿದ ಮಹಾ ದರ್ಶನಿಕನಾದ್ದಾನೆ. ಸರ್ವಜ್ಞನ ಸಂದೇಶಗಳನ್ನು ನಮ್ಮ ಜೀವನದಲ್ಲಿ ಪಾಲಿಸಿ ನಾವು ಸಂಘಟಿತರಾಗುವುದರೊಂದಿಗೆ ನಮ್ಮ ಸಂಘಟನೆಯನ್ನು ಬಲಪಡಿಸುವ ಕಾರ್ಯ ಆಗಬೇಕು ಎಂದು ತಿಳಿಸಿದರು.
ತಹಶೀಲ್ದಾರ್ ಪೃಥ್ವಿ ಸಾನಿಕಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕುಲಾಲ ಕುಂಬಾರ ಯುವ ವೇದಿಕೆ ಅಧ್ಯಕ್ಷ ಉಮೇಶ್ ಕುಲಾಲ್, ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಉಪಾಧ್ಯಕ್ಷ ಲೋಕೇಶ್ ಕುಲಾಲ್, ಉಪತಹಶೀಲ್ದಾರ್ ಶ್ರೀಮತಿ ಜಯಮ್ಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರಾಜೇಶ್ ಕೆ. ಉಪಸ್ಥಿತರಿದ್ದರು.
ಕೊಕ್ಕಡ ಹೋಬಳಿ ಕಂದಾಯ ನಿರೀಕ್ಷಕ ಪಾವಡಪ್ಪ ದೊಡ್ಡಮನಿ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿ, ತ್ರಿಪದಿ ಕವಿ ಸರ್ವಜ್ಞ ಆ ಕಾಲದಲ್ಲಿ ತನ್ನ ಸಾಹಿತ್ಯದ ಮೂಲಕ ಸಮಾಜದ ಪರಿವರ್ತನೆ ಮಾಡಿದ ವಿಷಯಗಳ ಬಗ್ಗೆ ತಿಳಿಸಿದರು. ಜಯಶ್ರೀ ಬಿ.ಆರ್.ಸಿ ಬೆಳ್ತಂಗಡಿ ಕಾರ್ಯಕ್ರಮ ನಿರೂಪಿಸಿ, ಎಫ್. ಡಿ .ಎ. ಮೃತ್ಯುಂಜ ಆಚಾರ್ಯ ಧನ್ಯವಾದವಿತ್ತರು.