ಬೆಳ್ತಂಗಡಿ: ಮಂಗಳೂರು ನಗರ ಸಿಸಿಬಿ ತಂಡವು ಮಾದಕ ವಸ್ತುಗಳ ಅಕ್ರಮ ಸಾಗಣೆ ವಿರುದ್ಧ ಕೈಗೊಂಡಿರುವ ಭಾಗವಾಗಿ ಇಂದು ದೊಡ್ಡ ಪ್ರಮಾಣದ 123 ಕೆಜಿ ಗಾಂಜಾ ಮತ್ತು ಅದನ್ನು ಸಾಗಾಟ ಮಾಡುತ್ತಿದ್ದ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಮೂರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರು ಆಂಧ್ರಪ್ರದೇಶದಿಂದ ಗಾಂಜಾ ಸಾಗಾಟ ಮಾಡುತ್ತಿದ್ದರು. ಸಿಸಿಬಿ ಪೊಲೀಸರು ಜು.31 ರಂದು 2 ಕಾರುಗಳಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದು, ಮೂಡಬಿದಿರೆ ತಾಲ್ಲೂಕಿನ ಬೆಳುವಾಯಿ ಗ್ರಾಮದ ಕಾಂತಾವರ ಕ್ರಾಸ್ ನ ಮಠದಕೆರೆ ಎಂಬ ಸ್ಥಳದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗಾಂಜಾ ಸಮೇತ 2 ವಾಹನಗಳನ್ನು ಪತ್ತೆಹಚ್ಚಿರುತ್ತಾರೆ.

ಬಂಧಿತ ಆರೋಪಿಗಳ ವಿವರ:ಮಸೂದ್ ಎಂಕೆ (45 ವ )ಮೊಗರು ಹೌಸ್, ಆಡೂರು, ಉರ್ದೂರು ಕಾಸರಗೋಡು ತಾಲೂಕು ಕೇರಳ, ಮೊಹಮ್ಮದ್ ಆಶಿಕ್ (24 ವ) ಚೆಂದಮೂಲ ಹೌಸ್, ಪರಪ್ಪ ದೇಲಂಪಾಡಿ ಪರಪ್ಪ ಪೋಸ್ಟ್, ಕಾಸರಗೋಡು ಕೇರಳ ರಾಜ್ಯ, ಸುಬೇರ್ ( 30 ವರ್ಷ) ಪರಪ್ಪ ದೇಲಂಪಾಡಿ ಪರಪ್ಪ ಕಾಸರಗೋಡು ಕೇರಳ ಬಂಧಿತರು. ಪೊಲೀಸರು ಆರೋಪಿಗಳಿಂದ 123 ಕೆಜಿ ಗಾಂಜಾ, ಎರಡು ವಾಹನಗಳು (KA-21-P-9084 ಹಾಗೂ KL-14-AF-7010) ಮತ್ತು 5 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದು, ಈ ಎಲ್ಲಾ ಸೊತ್ತಿನ ಒಟ್ಟು ಮೌಲ್ಯ ಸುಮಾರು 46, 20,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಮಂಗಳೂರು ನಗರ ಪೊಲೀಸರಿಂದ ನಿರಂತರವಾಗಿ ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆಯು ಮುಂದುವರೆದಿರುತ್ತದೆ, ಈ ಬೃಹತ್ ಗಾಂಜಾ ಮಾರಾಟ/ಸಾಗಾಟ ಜಾಲದ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.











