ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಅನಾಮಿಕ ಸಾಕ್ಷಿದಾರ ಗುರುತಿಸಿರುವ 13ನೇ ಸ್ಥಳದಲ್ಲಿ ಆ.12 ಮಂಗಳವಾರ ಬೆಳಿಗ್ಗೆ ಎಸ್‌ಐಟಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಜಿಪಿಆರ್ ಮೂಲಕ ಗುರುತಿಸಿದ ಜಾಗದಲ್ಲಿ ಪರಿಶೀಲನೆ ಕಾರ್ಯಾಚರಣೆ ನಡೆಸಲಾಯಿತು.

ಬಹಳಷ್ಟು ಕುತೂಹಲ ಹಾಗೂ ಕ್ಲಿಷ್ಟಕರವಾದ 13ನೇ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಕಳೆದ ಕೆಲವು ದಿನಗಳಿಂದ ಮುಂದೂಡಲ್ಪಡುತ್ತಿದ್ದು ಇಲ್ಲಿ ಎಳೆಂಟು ಶವಗಳನ್ನು ಹೂತು ಹಾಕಿದ್ದೇನೆ ಎಂದು ದೂರುದಾನ ಹೇಳಿಕೊಂಡ ಹಿನ್ನಲೆಯಲ್ಲಿ ಸ್ಥಳಕ್ಕೆ ಜಿಪಿಆರ್‌ನ್ನು ತರಿಸಲಾಗಿತ್ತು. ನೇತ್ರಾವತಿ-ಅಜೆಕುರಿ ರಸ್ತೆಯಲ್ಲಿ ನೇತ್ರಾವತಿ ನದಿ ಪಕ್ಕದ ಕಿಂಡಿ ಅಣೆಕಟ್ಟಿನ ಸಮೀಪದ 13ನೇ ಸ್ಥಳದಲ್ಲಿ ಸೋಮವಾರ ಮಧ್ಯಾಹ್ನ3 ರಿಂದ 3.30ರ ವರೆಗೆ ಪ್ರಾಯೋಗಿಕ ಕಾರ್ಯಾಚರಣೆ ನಡೆಯಿತು. ಬಳಿಕ ಪೌರ ಕಾರ್ಮಿಕರು ಸುಮಾರು 60 ಅಡಿ ಉದ್ದ, 30 ಅಗಲದ ಈ ಜಾಗದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿ, ಪರಿಸರವನ್ನು ಸ್ವಚ್ಛಗೊಳಿಸಿದ್ದರು.
ಸೋಮವಾರ ಬೆಳಿಗ್ಗೆ ಎಸ್‌ಐಟಿ ಅಧಿಕಾರಿಗಳು ದೂರುದಾರನ ಜೊತೆ ಅದೇ ಜಾಗಕ್ಕೆ ಬಂದರು. ಬಳಿಕ ಜಿಪಿಆರ್ ಮೂಲಕ ಜಾಗದಲ್ಲಿ ಪರಿಶೀಲನೆ ನಡೆಸಲಾಯಿತು. ಸುಮಾರು 45 ನಿಮಿಷಗಳ ಕಾಲ ದೂರುದಾರ ಗುರುತಿಸಿದ ಜಾಗ ಹಾಗೂ ಪರಿಸರದಲ್ಲಿ ಪರಿಶೀಲನೆ ಕಾರ್ಯ ನಡೆಯಿತು. ಬಳಿಕ ಅಧಿಕಾರಿಗಳು ಊಟಕ್ಕೆ ತೆರಳಿದರು. ಮಧ್ಯಾಹ್ನ ನಂತರ ಪುನಃ ಸ್ಥಳಕ್ಕೆ ಬಂದು ಎಸ್‌ಐಟಿ ತಂಡ ಜಿಪಿಆರ್ ಮೂಲಕ ಪರಿಶೀಲನೆ ನಡೆಸಿದ ಜಾಗದಲ್ಲಿ ಶವದ ಅವಶೇಷಕ್ಕಾಗಿ ಶೋಧ ಕಾರ್ಯವನ್ನು ಆರಂಭಿಸಿದೆ. ಹಿಟಾಚಿ ಮೂಲಕ ಸ್ಥಳವನ್ನು ಅಗೆಯುವ ಕಾರ್ಯ ಆರಂಭಿಸಿದ್ದಾರೆ. ಕಾರ್ಯಾಚರಣೆ ನಡೆಯುತ್ತಿರುವ ನೇತ್ರಾವತಿ ಅಜಿಕುರಿ ರಸ್ತೆಯನ್ನು ಸಂಪೂರ್ಣ ಮುಚ್ಚಲಾಗಿದೆ. ರಸ್ತೆಯ ಎರಡೂ ಬದಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಸ್ಥಳದಲ್ಲಿಯೂ ಹೆಚ್ಚಿನ ಪೊಲೀಸರನ್ನು ಹಾಕಿ ಬಂದೋಬಸ್ತ್ ಮಾಡಲಾಗಿದೆ.











