ನಿಡ್ಲೆ ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನ ಸಭೆ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಡಿ. 30 ರಂದು ಬರೆಂಗಾಯ ಶಾಲಾ ವಠಾರದಲ್ಲಿ ನಡೆಯಿತು.
ಜನರ ಸಮಸ್ಯೆಗೆ ಕಿವಿಯಾಗಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಶಾಸಕ ಹರೀಶ್ ಪೂಂಜ ಹೇಳಿದರು.

ಮೊಳಂಪ್ಪಾಯ – ಕಾಟ್ಲ ರಸ್ತೆ ದುರಸ್ತಿಗೊಳಿಸಬೇಕು, ಇದರೊಂದಿಗೆ ರಸ್ತೆ ಬದಿ ಸಮರ್ಪಕ ಚರಂಡಿ ವ್ಯವಸ್ಥೆ ಮಾಡಬೇಕು. ಗ್ರಾಮ ವ್ಯಾಪ್ತಿಯಲ್ಲಿ ನೆಟ್ವರ್ಕ್ ಸಮಸ್ಯೆ ವ್ಯಾಪಕವಾಗಿದೆ ಇದರಿಂದ ಉದ್ಯೋಗಿಗಳಿಗೆ ಕಷ್ಟವಾಗಿದೆ ಎಂದು ಗ್ರಾಮಸ್ಥರು ಹೇಳಿದಾಗ ಕಳೆದ ಅವಧಿಯಲ್ಲಿ ಅಧಿಕ ಅನುದಾನ ನಿಡ್ಲೆ ಗ್ರಾಮ ಪಂಚಾಯಿತಿ ನೀಡಿ ಅಭಿವೃದ್ಧಿ ಕಾರ್ಯ ನಡೆಸಲಾಗಿದೆ ಆದರೆ ಇದೀಗ ಸರ್ಕಾರದಿಂದ ಸಮರ್ಪಕವಾಗಿ ಅನುದಾನ ಬಿಡುಗಡೆ ಗೊಳಿಸಿಲ್ಲ ಇದರಿಂದ ಅಭಿವೃದ್ಧಿಗೆ ಸಮಸ್ಯೆಯಾಗುತ್ತಿದೆ ಅನುದಾನ ಲಭ್ಯತೆ ಯೊಂದಿಗೆ ರಸ್ತೆ ದುರಸ್ತಿಗೆ ಅನುದಾನ ನೀಡಲಾಗುವುದು, ಚರಂಡಿ ವ್ಯವಸ್ಥೆಗೆ ಪಂಚಾಯತ್ ಪರಿಶೀಲನೆ ನಡೆಸಿ, ಮೊಳಂಪಾಯ ನೆಟ್ವರ್ಕ್ ಸಮಸ್ಯೆಗೆ ಸಂಬಂಧ ಪಟ್ಟವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಶಾಸಕರು ಹೇಳಿದರು. ಗ್ರಾಮ ಪಂಚಾಯಿತಿ ರಸ್ತೆ ಒತ್ತುವರಿ ನಡೆಸುವರು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಪಿಡಿಒಗೆ ನಿರ್ದೇಶನ ನೀಡಿದರು.
ಗ್ರಾಮದಲ್ಲಿ ಕೋತಿಗಳ 5 ತಂಡವಿದೆ ತೆಂಗಿನ ಮರದಲ್ಲಿ ಸೀಯಾಳ ಇಲ್ಲವೇ ಇಲ್ಲ. ಮನೆಯ ಹಂಚುಗಳನ್ನು ಹೊಡೆದು ಹಾಕುತ್ತಿದೆ ಮನೆಯೊಳಗೆ ಪ್ರವೇಶಿಸುತ್ತವೆ, ಅಡಿಕೆಯ ನಳ್ಳಿ ಗಳನ್ನು ಹಾಳುಮಾಡುತ್ತಿದೆ. ವ್ಯಾಪಕವಾಗಿ ಮಂಗಗಳ ಹಾವಳಿಯಿಂದ ರೈತರು ಜನರು ಕಂಗೆಟ್ಟಿದ್ದಾರೆ, ಇಲಾಖೆ ಅವುಗಳನ್ನು ಹಿಡಿಯುವ ಕಾರ್ಯ ನಡೆಸುತ್ತಿಲ್ಲ ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದಾಗ ಟ್ರೋಲ್ ಮಾಡಿದರು. ನವಿಲು, ಮಂಗ, ಆನೆ, ಕಾಡುಹಂದಿ ಉಪಟಳ ಹೆಚ್ಚಾಗಿದೆ ಎಂದು ಸಚಿವರು ಗಮನಸೆಳೆಯಲಾಗಿದೆ. ಅರಣ್ಯ ಇಲಾಖೆಯ ಜಾಗದಲ್ಲಿ ಭತ್ತ, ಹಣ್ಣು ಹಂಪಲು ಗಿಡಗಳನ್ನು ನಾಟಿ ಮಾಡಬೇಕು ಎಂದು ಅವರು ಬಳಿ ತಿಳಿಸಿದ್ದೇನೆ. ಚಾರ್ಮಾಡಿ – ಕಡಿರುದ್ಯಾವರ ವರೆಗೆ ಸೋಲಾರ್ ಬೇಲಿ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ, ಸಚಿವರಲ್ಲಿ ಪಶ್ವಿಮ ಘಟ್ಟ ಪ್ರದೇಶದ ಗ್ರಾಮಗಳಲ್ಲಿ ಈ ಬೇಲಿ ಅಳವಡಿಸಬೇಕು ಎಂದು ಅವರಿಗೆ ಮನವಿ ಸಲ್ಲಿಸಲಾಗಿದೆ, ತಾಲೂಕಿನಲ್ಲಿ ಮ್ಯಾಂಕಿ ಪಾರ್ಕ್ ನಿರ್ಮಾಣ ಕುರಿತು ಸಚಿವರಿಗೆ ಮನವಿ ಸಲ್ಲಿಸುವುದಾಗಿ ಶಾಸಕರು ತಿಳಿಸಿದರು.
ಮಳೆಮಾಪನ ಕೆಟ್ಟು ಹೋಗಿದೆ ಇದರ ಪರಿಣಾಮ ಬೆಳೆ ವಿಮೆಯಲ್ಲಿ ಸಮಸ್ಯೆಯಾಗಿದೆ ಇದಕ್ಕೆ ಯಾರು ಹೊಣೆ, ವ್ಯಾಪಕ ಮಳೆಯಿಂದ ಅಡಿಕೆ ಕೊಳೆರೋಗ, ಹಳದಿ ರೋಗ, ನಳ್ಳಿ ಹುದುರುವಿಕೆಯಿಂದ ಕೃಷಿಕರು ಕಂಗಾಲಾಗಿದ್ದಾರೆ ಇದರ ನಡುವೆ ಮಳೆ ಮಾಪನ ಕೆಟ್ಟು ಹೋಗಿ ಕೃಷಿಕರ ನೋವುನ್ನು ಯಾರಲ್ಲಿ ಹೇಳುವುದು ಎಂದು ಗ್ರಾಮಸ್ಥರು ಹೇಳಿದಾಗ ಮಳೆ ಮಾಪನ ಮುಂದಿನ ಮಳೆಗಾಲದೊಳಗೆ ದುರಸ್ತಿಗೊಳಿಸುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗುವುದು, ನಿಡ್ಲೆ ಗ್ರಾಮಕ್ಕೆ 1 ಕೋಟಿ ರೂಪಾಯಿ ಬೆಳೆ ವಿಮೆ ಜಮೆಯಾಗಿದೆ ತಾಲೂಕಿಗೆ ಸುಮಾರು 70 ಕೋಟಿ ರೂಪಾಯಿ ಬೆಳೆ ವಿಮೆ ಬಂದಿರುವುದಾಗಿ ಶಾಸಕರು ತಿಳಿಸಿದರು.
ನಿಡ್ಲೆ – ಪಟ್ರಮೆ ದುರಸ್ತಿ, ಅಕ್ರಮ ಸಕ್ರಮ ಕಡತಗಳು ವಿಲೇವಾರಿ, ಕೋವಿ ಪರವಾನಿಗೆಯನ್ನು ತಾಲೂಕು ಆಡಳಿತದಲ್ಲಿ ನೀಡುವಂತೆ, ಬಿಪಿಎಲ್ ಕಾರ್ಡ್ ನೀಡುವ ಬಗ್ಗೆ, ಕೊರೊದೊಟ್ಟು ರಸ್ತೆ ದುರಸ್ತಿ , ಗುತ್ತಿಮಾರು ಕಾಲು ಸಂಕ ಹದಗೆಟ್ಟಿದೆ ಎಂದು ಗ್ರಾಮಸ್ಥರು ಹೇಳಿದಾಗ ಸಂಬಂಧ ಪಟ್ಟ ಇಲಾಖೆಗೆ ಪರಿಶೀಲನೆ ನಡೆಸುವಂತೆ ಸೂಚಿಸಿದರು.
ಉತ್ತಮ ಹಾಗೂ ಗುಣಮಟ್ಟದ ಸೇವೆಯಲ್ಲಿ ರಾಷ್ಟ್ರಮಟ್ಟದಲ್ಲಿ ಆಯ್ಕೆಗೊಂಡ ನಿಡ್ಲೆ ಆಯುಷ್ಮಾನ್ ಆರೋಗ್ಯ ಉಪ ಕೇಂದ್ರಕ್ಕೆ ಶಾಸಕರು ಅಭಿನಂದನೆ ತಿಳಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ಯಾಮಲ, ಉಪಾಧ್ಯಕ್ಷ ರುಕ್ಮಯ್ಯ ಪೂಜಾರಿ, ತಹಶೀಲ್ದಾರ್ ಪೃಥ್ವಿ ಸಾನಿಕಂ, ತಾಲೂಕು ಪಂಚಾಯತ್ ಇಓ ಭವಾನಿ ಶಂಕರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ್ ಎಂ., ಕಾರ್ಯದರ್ಶಿ ಕೇಶವ ಗೌಡ, ಸದಸ್ಯರು, ಇಲಾಖಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.











