33.4 C
ಪುತ್ತೂರು, ಬೆಳ್ತಂಗಡಿ
March 7, 2026
Uncategorized

ನಾಳೆ(ಮಾ.8): ಉಜಿರೆ ಪುರದೊಡೆಯ ಶ್ರೀ ಜನಾರ್ದನ ದೇವರಿಗೆ ನೂತನ ಬ್ರಹ್ಮರಥ, ಪುಷ್ಪರಥ ಸಮರ್ಪಣೆ:

ಉಜಿರೆ: ಸುಮಾರು ಒಂದು ಸಾವಿರ ವರ್ಷಗಳಿಗಿಂತಲೂ ಮಿಗಿಲಾದ ದಾಖಲಿತ ಸುದೀರ್ಘ ಇತಿಹಾಸವುಳ್ಳ ಬ೦ಗಾಡಿ ಸೀಮೆಯ ಪ್ರಧಾನ ವಿಷ್ಣುಕ್ಷೇತ್ರವಾಗಿ, ಭಕ್ತರ ಶ್ರದ್ಧಾಕೇಂದ್ರವಾಗಿ ಪ್ರಸಿದ್ಧ ಹೊಂದಿರುವ ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಮಾ.2ರಂದು ವಿದ್ಯುಕ್ತವಾಗಿ ಚಾಲನೆ ದೊರೆತಿದ್ದು, ಉಜಿರೆಯ ವೇದಮೂರ್ತಿ ಕಿರಣ್ ರಾವ್ ಕುಟುಂಬಸ್ಥರು ಸೇವಾರ್ಥವಾಗಿ ಸಮರ್ಪಿಸಲಿರುವ ಬಹು ನಿರೀಕ್ಷಿತ ನೂತನ ಬ್ರಹ್ಮರಥ ಹಾಗೂ ಬೆನಕ ಕನ್ಸ್ಟ್ರಕ್ಷನ್ ನ ಗಣೇಶ್ ಗೌಡ ರವರು ಸಮರ್ಪಿಸಲಿರುವ ಪುಷ್ಪರಥವು ನಾಳೆ(ಮಾ.8ರಂದು) ಯತಿವರೇಣ್ಯರ ಸಮಕ್ಷಮದಲ್ಲಿ ವೈಭವ ಪೂರ್ಣವಾಗಿ ಸಮರ್ಪಣೆಗೊಳ್ಳಲಿದೆ.

ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಬರೆ೦ಗಾಯ ಮೈರ೦ಡ ನಿವಾಸಿಯಾಗಿದ್ದ ಚಿದಾನ೦ದ ರಾವ್ ಮತ್ತು ಆಶಾ ಪಿ. ರಾವ್ ದಂಪತಿಯ ಸುಪುತ್ರ ವೇದಮೂರ್ತಿ ಕಿರಣ್ ರಾವ್‌ರವರು ಪುತ್ತಿಗೆ ಶ್ರೀಗಳ ಪ್ರೀತಿಯ ಶಿಷ್ಯ, ಸರಳ ಸಜ್ಜನಿಕೆಯ ಸಾಕಾರಮೂರ್ತಿ. ಬರೆಂಗಾಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ತನಕ ವ್ಯಾಸಂಗ ಮಾಡಿ ಉಜಿರೆ ಎಸ್.ಡಿ.ಎ೦. ಸೆಕೆಂಡರಿ ಶಾಲೆಯಲ್ಲಿ ಹತ್ತನೇ ತರಗತಿ ಪೂರೈಸಿದ ಪ್ರತಿಭಾವ೦ತ ವಿದ್ಯಾರ್ಥಿ. ಆರಂಭದಿಂದಲೇ ವೈದಿಕ ಕಾರ್ಯಕ್ರಮಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಇವರು ಮುಂದಿನ ಶಿಕ್ಷಣವನ್ನು ಪುತ್ತಿಗೆ ವಿದ್ಯಾಪೀಠದಲ್ಲಿ ಮಾಡಲು ತೆರಳಿದ ಶುಭಘಳಿಗೆ ಅವರ ಜೀವನದ ದಿಕ್ಕನ್ನೇ ಬದಲಿಸಿತು ಎಂದರೆ ತಪ್ಪಾಗಲಾರದು. ತಾಯಿ ಮನೆಯೊಡತಿ, ತಂದೆ ಸೇವಾ ಸಹಕಾರಿ ಸಂಘದಲ್ಲಿ ಗುಮಾಸ್ತರು, ಬಾಡಿಗೆ ಸೂರಿನಲ್ಲಿ ಜೀವನ, ಕುಟುಂಬದ ಆದಾಯ ಅಷ್ಟಕ್ಕಷ್ಟೇ ಎನ್ನುವ ಸಂದರ್ಭದಲ್ಲಿ ವಾಸ್ತವ್ಯವನ್ನು ನಿಡ್ಲೆಯಿಂದ ಉಜಿರೆಯ ಬೊಟ್ಟದಗುಡ್ಡೆಗೆ ಬದಲಾಯಿಸಿದಾಗ ಉಜಿರೆಯ ಶ್ರೀ ಜನಾರ್ದನ ಸ್ವಾಮಿಯ ಅನುಗ್ರಹ ಮತ್ತು ಪುತ್ತಿಗೆ ಶ್ರೀಗಳ ಆಶೀರ್ವಾದದಿಂದ ಅಧ್ಯಾತ್ಮಿಕ ಚಿಂತನೆ ಕಿರಣ್ ರಾವ್‌ರವರನ್ನು ಆವರಿಸಿಕೊಂಡಿತು. ಗುರುಗಳಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರ ಪ್ರಿಯ ಶಿಷ್ಯನಾಗಿ ತನ್ನ 20ನೇ ವಯಸ್ಸಿನಲ್ಲಿ 2002 ಇಸವಿಯಲ್ಲಿ ಅಮೇರಿಕ ಸೇರಿಕೊಂಡು, ಫೀನಿಕ್ಸ್ ನ ಶ್ರೀ ವೆಂಕಟಕೃಷ್ಣ ಮಂದಿರದಲ್ಲಿ ಅರ್ಚಕರಾಗಿ ಸೇರಿಕೊಂಡರು.

ಕಿರಣ್ ರಾವ್ ಅವರು ಪತ್ನಿ ಅರ್ಚನಾ, ಮಕ್ಕಳಾದ ಶ್ರೀಮಾನ್ ರಾವ್ ಮತ್ತು ಆರಾಧ್ಯ ರಾವ್ ರವರೊಂದಿಗೆ ಅಮೆರಿಕದಲ್ಲೇ ನೆಲೆಸಿದ್ದು, ಇವರ ತಾಯಿ ಆಶಾ ರಾವ್, ಸಹೋದರ ಯುವ ಉದ್ಯಮಿ ಅಶೋಕ್ ರಾವ್ ಅವರು ರಾವ್ ಏಜೆನ್ಸಿಸ್ ಉಜಿರೆ ಸಂಸ್ಥೆಯ ಮಾಲಕರಾಗಿದ್ದು, ಅಣ್ಣನ ನಿಷ್ಠೆಗೆ ಸಾಥ್ ನೀಡುತ್ತಾ ರಾಮ ಲಕ್ಷ್ಮಣ ಸಹೋದರತೆಯ ದ್ಯೋತಕವಾಗಿದ್ದಾರೆ. ಅಶೋಕ್ ರಾವ್ ಅವರು ಸುಮಲತಾರನ್ನು ವಿವಾಹವಾಗಿ ಅದಿತಿ ರಾವ್ ಮತ್ತು ಆಕೃತಿ ರಾವ್ ಎಂಬ ಇಬ್ಬರು ಮಕ್ಕಳೊಂದಿಗೆ ಉಜಿರೆಯ ಸುಗುಣಶ್ರೀಯಲ್ಲಿ ಸುಖೀ ಸಂಸಾರ ನಡೆಸುತ್ತಿದ್ದಾರೆ.

ಶ್ರೀ ಜನಾರ್ದನ ದೇವರಿಗೆ ಸಮರ್ಪಣೆಯಾದ ಕಿರಣ್ ರಾವ್ ಕುಟುಂಬಸ್ಥರ ಸೇವೆಗಳು:- 2002ರಲ್ಲಿ ಕಿರಣ್ ರಾವ್ ಅವರು ಪಡೆದ ಪ್ರಥಮ ಸಂಬಳದಲ್ಲಿ ಉಜಿರೆ ಶ್ರೀ ಜನಾರ್ದನ ದೇವರಿಗೆ 1ಕೆಜಿ ಬೆಳ್ಳಿಯ ಘಂಟಾ ಮಣಿ, 2006ರಲ್ಲಿ ಬೆಳ್ಳಿಯ ಪಲ್ಲಕ್ಕಿ, 2016ರಲ್ಲಿ ಬೆಳ್ಳಿಯ ರಥ, 2026ರಲ್ಲಿ ಬ್ರಹ್ಮರಥ ಸಮರ್ಪಣೆಯಾಗುತ್ತಿದೆ.

ಬ್ರಹ್ಮರಥದ ವೈಶಿಷ್ಟ – ವಿಸ್ತೀರ್ಣ:- ಉಡುಪಿ ಜಿಲ್ಲೆಯ ಕೋಟೇಶ್ವರದಲ್ಲಿ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಅವರ ಪುತ್ರ ಶಿಲ್ಪಿ ರಾಜಗೋಪಾಲ ಆಚಾರ್ಯ ಅವರು ಬ್ರಹ್ಮರಥದ ನಿರ್ಮಾಣ ಕಾರ್ಯವನ್ನು ವಹಿಸಿಕೊಂಡಿದ್ದು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಗಳು ಸೇರಿದಂತೆ ರಾಜ್ಯದ ಅನೇಕ ದೇವಾಲಯಗಳಿಗೆ ಇದೆ ಕೇಂದ್ರದಿಂದ ರಥಗಳು ತಯಾರು ಆಗಿದ್ದು, ಈ ಮನೆತನ ರಥ ಮಾಡುವುದರಲ್ಲಿ ನೈಪುಣ್ಯತೆಯನ್ನು ಹೊಂದಿರುತ್ತದೆ. ಸಮರ್ಪಣೆಯಾಗಲಿರುವ ನೂತನ ಬ್ರಹ್ಮರಥವು ಚಕ್ರದಿಂದ ದೇವರ ಪೀಠದ ವರೆಗೆ 12 ಅಡಿ ಎತ್ತರವನ್ನು ಹೊಂದಿದ್ದು, ಭೂಮಿಯಿಂದ ಶಿಖರವು 45 ಅಡಿ ಎತ್ತರವನ್ನು ಹೊಂದಿದೆ. ನೂತನ ರಥವು ಕೋಟೇಶ್ವರದ ಶಿಲ್ಪಕಲಾ ಕೇಂದ್ರದಿಂದ ಮಾ.5ರಂದು ಬೆಳಿಗ್ಗೆ ಮೆರವಣಿಗೆ ಮೂಲಕ ಹೊರಟು ಸಂಜೆ ಗುರುವಾಯನಕೆರೆ ನವಶಕ್ತಿ ಆವರಣದಿಂದ ನೂತನ ಪುಷ್ಪರಥದ ಜೊತೆಯಾಗಿ ರಾತ್ರಿ ಶ್ರೀ ಜನಾರ್ದನ ದೇವಸ್ಥಾನದ ಆವರಣವನ್ನು ತಲುಪಿರುತ್ತದೆ.

ಬ್ರಹ್ಮರಥ ನೀಡುವುದಕ್ಕೆ ಭಗವಂತನೇ ಪ್ರೇರಣೆ: ವೇದಮೂರ್ತಿ ಕಿರಣ್ ರಾವ್
ಬ್ರಹ್ಮರಥ ನೀಡುವುದಕ್ಕೆ ಭಗವಂತನೇ ಪ್ರೇರಣೆ. ಹಳೆಯ ರಥವು ಶಿಥಿಲಾವಸ್ಥೆಯಲ್ಲಿ ಇದ್ದದ್ದನ್ನು ಕಂಡು ರಥ ನೀಡುವ ಯೋಚನೆ ಮಾಡಿರುವುದೇ ಹೊರತು ಬೇರೆ ಯಾವುದೇ ಕಾರಣಗಳಿಲ್ಲ. ಇದು ದೇವರ ಸಂಕಲ್ಪ. ಭಗವಂತ ಕೊಟ್ಟದ್ದನ್ನು ಭಗವಂತನಿಗೆ ಸಮರ್ಪಣೆ ಮಾಡಬೇಕು ಎಂಬುವುದು ನನ್ನ ಆಶಯ.
ಭಗವಂತಹ ಯೋಗ ಕೊಟ್ಟವನಿಗೆ ಯೋಗ್ಯತೆ ಕೊಡುವುದಿಲ್ಲ, ಯೋಗ್ಯತೆ ಕೊಟ್ಟವನಿಗೆ ಯೋಗ ಕೊಡುವುದಿಲ್ಲ. ಯೋಗ ಯೋಗ್ಯತೆ ಇದ್ದವನಿಗೆ ಅವಕಾಶಗಳು ಕೊಡುವುದಿಲ್ಲ. ಸಾಮಾನ್ಯ ವೈದಿಕನಾಗಿರುವ ನನಗೆ ನನಗೆ ಆ ಯೋಗವನ್ನು ಭಗವಂತ ಒದಗಿಸಿ ಕೊಟ್ಟಿದ್ದಾನೆ.

ಕಿರಣ್ ರಾವ್ ಅವರ ಸೇವೆ ಭಕ್ತ ವರ್ಗಕ್ಕೆ ಮಾದರಿ: ಮೋಹನ್ ಕುಮಾರ್
ಶ್ರೀ ಜನಾರ್ದನ ದೇವಸ್ಥಾನಕ್ಕೆ ನೂತನ ಬ್ರಹ್ಮರಥವನ್ನು ಸಮರ್ಪಣೆ ಮಾಡುತ್ತಿರುವ ಕಿರಣ್ ರಾವ್ ಕುಟುಂಬಸ್ಥರು ಈ ಹಿಂದೆಯೂ ಕೂಡ ಸೇವಾರ್ಥವಾಗಿ ವಿವಿಧ ಕೊಡುಗೆಗಳನ್ನು ಭಕ್ತರಾಗಿ ನೀಡಿರುತ್ತಾರೆ. ಇದು ಉಳಿದ ಭಕ್ತವರ್ಗಕ್ಕೂ ಮಾದರಿಯಾಗಿದ್ದು, ಇಂತಹ ಭಕ್ತರಿಂದ ಮಾತ್ರ ನಮ್ಮೂರಿನ ದೇವಸ್ಥಾನಗಳು ಅಭಿವೃದ್ಧಿ ಹೊಂದಲು ಸಾಧ್ಯ. ನಾನು ಕೆಲಸ ಮಾಡಿರುವುದಕ್ಕಿಂತ ಹೆಚ್ಚಾಗಿ ಅವರು ಬ್ರಹ್ಮರಥವನ್ನು ಸಮರ್ಪಣೆ ಮಾಡುತ್ತಿರುವುದು ತೃಪ್ತಿ ಇದೆ.

ಐದಾರು ತಲೆಮಾರುಗಳಿಗೆ ಶಾಶ್ವತ ಸೇವೆ: ಶರತ್ ಕೃಷ್ಣ ಪಡುವೆಟ್ನಾಯ
ಶ್ರೀ ಜನಾರ್ದನ ದೇವಸ್ಥಾನದಲ್ಲಿದ್ದ ಬ್ರಹ್ಮರಥವು 250 ವರ್ಷಕ್ಕಿಂತಲೂ ಹಳೆಯದಾಗಿದ್ದು, ಬಹಳ ಜೀರ್ಣವಾದ ಸ್ಥಿತಿಯಲ್ಲಿತ್ತು. ಈ ಹಿನ್ನಲೆಯಲ್ಲಿ ಕಿರಣ್ ರಾವ್ ಅವರು ಸ್ವಯಂ ಪ್ರೇರಣೆಯಿಂದ ನೂತನ ಬ್ರಹ್ಮರಥವನ್ನು ಸಮರ್ಪಣೆ ಮಾಡುತ್ತಿದ್ದಾರೆ. ಬ್ರಹ್ಮರಥವು ಐದಾರು ತಲೆಮಾರುಗಳ ತನಕ ಉಳಿಯುವಂತಹ ಶಾಶ್ವತ ಸೇವೆಯಾಗಿದ್ದು, ಇದು ಆ ಕುಟುಂಬಕ್ಕೆ ದೊರೆತಂತಹ ಯೋಗ. ಈ ಹಿಂದೆಯೂ ಅವರ ಕುಟುಂಬ ರಜತ ರಥ, ರಜತ ಪಾಲಕಿ(ಪಲ್ಲಕ್ಕಿ) ಗಳಂತಹ ಅನೇಕ ಸೇವೆಗಳನ್ನು ಜನಾರ್ದನ ದೇವರಿಗೆ ಸಮರ್ಪಣೆ ಮಾಡಿರುತ್ತಾರೆ. ಶ್ರೀ ಜನಾರ್ದನ ಸ್ವಾಮಿಯು ಅವರ ಸಕಲ ಇಷ್ಟಾರ್ಥಗಳನ್ನು ಈಡೇರಿಸುವಂತಹ ಆಶೀರ್ವಾದಗಳನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

ಕೀರ್ತಿಶೇಷ ಯು. ವಿಜಯರಾಘವ ಪಡುವೆಟ್ನಾಯ ಮತ್ತು ಕಿರಣ್ ರಾವ್ ಕುಟುಂಬದ ನಡುವಿನ ಸಂಬಂಧ

ಜನರನ್ನು ಸರಿ ದಾರಿಗೆ ತರುವಂತಹ ಭಗವಂತನ ರೂಪವೇ ಜನಾರ್ದನ ಎಂದು ನಂಬಿರುವ ಕಿರಣ್ ಅವರ ಕುಟುಂಬ ಉಜಿರೆಗೆ ಬಂದು ನೆಲೆಸಿದ ಮೇಲೆ ಶ್ರೀ ಜನಾರ್ದನ ದೇವರು ಅವರ ಮನೆ ದೇವರು ಎಂಬಂತೆ ಆತ್ಮೀಯತೆ ಬೆಳೆಯಿತು. ಅಮೆರಿಕಾಕ್ಕೆ ತೆರಳಿ ಮೊದಲು ಪಡೆದ ಸಂಬಳದಲ್ಲಿ ಶ್ರೀ ಜನಾರ್ದನ ದೇವರಿಗೆ ಬೆಳ್ಳಿಯ ಘಂಟಾ ಮಣಿಯನ್ನು ಸೇವಾ ರೂಪವಾಗಿ ಸಮರ್ಪಣೆ ಮಾಡಿರುತ್ತಾರೆ. ಗೋಪುರದ ಕನಸನ್ನು ಹೊತ್ತಿದ್ದ ಕೀರ್ತಿಶೇಷ ಯು. ವಿಜಯರಾಘವ ಪಡುವೆಟ್ನಾಯ ಅವರನ್ನು ಸಣ್ಣ ವಯಸ್ಸಿನಿಂದಲೇ ನೋಡಿರುವ ಕಿರಣ್ ರಾವ್ ಅವರು, ಅವರ ತಂದೆ ಸ್ವರ್ಗಸ್ಥರಾದಗ ಪಡುವೆಟ್ನಾಯರು ಕುಟುಂಬದ ಜೊತೆ ನಿಂತು ಧೈರ್ಯದ ನುಡಿಗಳನ್ನು ಆಡಿದ್ದಾರೆ. ಅವರ ಸೌಜನ್ಯ ಮತ್ತು ಧೈರ್ಯದ ಮಾತುಗಳೇ ಅವರ ಸಾಧನೆಗೆ ಮಾದರಿಯಾದೆ. ಅವರು ಧೈರ್ಯ ತುಂಬಿದ ಕಾರಣ ಜೀವನದಲ್ಲಿ ಇಷ್ಟೊಂದು ಬೆಳೆಯುವುದಕ್ಕೆ ಸಾಧ್ಯವಾಯಿತು. ಆ ಆತ್ಮೀಯತೆ ಬೆಳೆದು ದೇವಸ್ಥಾನಕ್ಕೂ ಸಂಬಂಧ ಬೆಸೆಯಿತು. ಅವರ ಕನಸಿನ ಗೋಪುರ ಅವರ ಕಾಲದಲ್ಲಿ ನಿರ್ಮಾಣ ಆಗಬೇಕಿತ್ತು ಎಂಬುವುದು ಎಲ್ಲರ ಆಶಯ ಆಗಿತ್ತು, ಆದರೆ ಅವರ ಪುತ್ರ ಶರತ್ ಕೃಷ್ಣ ಪಡುವೆಟ್ನಾಯ ಅವರ ನೇತೃತ್ವದಲ್ಲಿ ವ್ಯವಸ್ಥಿತವಾಗಿ ನೆರವೇರುತ್ತಿರುವುದು ಖುಷಿ ಇದೆ ಎಂದು ವೇದಮೂರ್ತಿ ಕಿರಣ್ ರಾವ್ ಅವರು ಸುದ್ದಿ ಉದಯದ ಜೊತೆ ಹಂಚಿಕೊಂಡಿದ್ದಾರೆ.

Related posts

ನಿಟ್ಟಡೆ: ಗೋಳಿಯಂಗಡಿಯಲ್ಲಿ ಬೈಕ್ ಗೆ ಡಿಕ್ಕಿಯೊಡೆದ ಆಟೋ ರಿಕ್ಷಾ

Suddi Udaya

ಅತಿ ದೊಡ್ಡ ಪುಷ್ಪ ರಂಗೋಲಿ ಬಿಡಿಸಿದ ವಿದ್ಯಾರ್ಥಿನಿ ಶ್ರದ್ಧಾ ಶೆಟ್ಟಿಯ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ

Suddi Udaya

ಬರೆಂಗಾಯ ದ.ಕ.ಜಿ.ಪ.ಸ.ಉ.ಹಿ.ಪ್ರಾ ಶಾಲಾ ಅಮೃತ ಮಹೋತ್ಸವ : ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರುಗಳಿಗೆ ಗೌರವಾರ್ಪಣೆ

Suddi Udaya

ಜೈನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಜೈನ ಜಾತಿ ಮತ್ತು ಧರ್ಮಕ್ಕೆ ಅಪಮಾನ ಆರೋಪ : ಮಹೇಶ್ ಶೆಟ್ಟಿ ತಿಮರೋಡಿ ಹಾಗೂರಾಜು ಶೆಟ್ಟಿ ಎಂಬವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

Suddi Udaya

ಮುಂಡಾಜೆ ಗ್ರಾ.ಪಂ. ಹಾಗೂ ನೇತ್ರಾವತಿ ಸಂಜೀವಿನಿ ಒಕ್ಕೂಟದ ವತಿಯಂದ ಮಹಿಳಾ ಗ್ರಾಮ ಸಭೆ ಮತ್ತು ವಿಚಾರ ಸಂಕಿರಣ

Suddi Udaya

ಅಳದಂಗಡಿ ಅಜಿಲ ಸೀಮೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರನ್ನು ಭೇಟಿಯಾದಸೆ.12ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿರುವ ಕನ್ನಡ ಚಲನ ಚಿತ್ರ ರಾನಿ – RONNY‌ದ ನಿರ್ಮಾಪಕರಾದ ಉಮೇಶ್ ಹೆಗ್ಡೆ

Suddi Udaya
error: Content is protected !!